ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯರ್ ಕೇವಲ 18 ರನ್‌ಗಳ ಅಂತರದಿಂದ ಶತಕ ಗಳಿಕೆಯನ್ನು ಕೈತಪ್ಪಿಸಿಕೊಂಡಿದ್ದರು. ಆದರೆ ತಂಡವು ಬೃಹತ್ ಮೊತ್ತ ಗಳಿಸಲು ನೆರವಾಗಿದ್ದರು.
ಈ ಕುರಿತು ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವಕಪ್ ಟೂರ್ನಿಯು ವೈಯಕ್ತಿಕ ಮೈಲುಗಲ್ಲುಗಳನ್ನು ಸ್ಥಾಪಿಸುವ ವೇದಿಕೆ ಅಲ್ಲ. ತಂಡದ ಜಯಕ್ಕೆ ಅಗತ್ಯ ಕಾಣಿಕೆ ನೀಡುವುದೇ ಮುಖ್ಯ’ ಎಂದರು.
ಶ್ರೇಯಸ್ ಲಂಕಾ ಎದುರಿನ ಪಂದ್ಯದಲ್ಲಿ 56 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ಭಾರತ ತಂಡವು 8 ವಿಕೆಟ್‌ಗಳಿಗೆ 357 ರನ್ ಗಳಿಸಿತು. ಅದಕ್ಕುತ್ತರವಾಗಿ ಲಂಕಾ ತಂಡವು ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು.
‘ಅರ್ಧಶತಕ ಮತ್ತು ಶತಕಗಳು ಅಲ್ಪ ಅಂತರದಲ್ಲಿ ಕೈತಪ್ಪಿದ ಕುರಿತು ಚರ್ಚೆ ನಡೆಸುವುದು ಸರಿ. ಆದರೆ, ಅದಕ್ಕಿಂತ ಮುಖ್ಯವಾಗಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕು. ನಾನಿದ್ದ ಪರಿಸ್ಥಿತಿಯಲ್ಲಿ ಮತ್ತಷ್ಟು ರನ್ ಗಳಿಕೆಗೆ ಅಗತ್ಯವಾದ ಆಟವಾಡಬೇಕಿತ್ತು. ಆದ್ದರಿಂದ ಬೌಲರ್‌ಗಳ ಎಸೆತಗಳಿಗೆ ದೊಡ್ಡ ಹೊಡೆತದ ಉತ್ತರ ಕೊಡುವುದು ಅಗತ್ಯವಾಗಿತ್ತಲ್ಲವೇ?‘ ಎಂದರು.
‘ಇನಿಂಗ್ಸ್‌ನ 47 ಮತ್ತು 48ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ನನ್ನ ಮನಸ್ಸಿನಲ್ಲಿ ತಂಡದ ಮೊತ್ತ ಹೆಚ್ಚಿಸಲು ಬೀಸಾಟವಾಡುವುದೊಂದೇ ಇತ್ತು. ಚೆಂಡಿನ ಚಲನೆಯನ್ನೂ ನಿಖರವಾಗಿ ಗುರುತಿಸುತ್ತಿದ್ದೆ. ಆದರೆ ಅದೊಂದೇ ಎಸೆತದಲ್ಲಿ ಎಡವಿದೆ’ ಎಂದು 28 ವರ್ಷದ ಶ್ರೇಯಸ್ ಹೇಳಿದರು.
ಟೂರ್ನಿಯ ರೌಂಡ್ ರಾಬಿನ್ ಲೀಗ್‌ನಲ್ಲಿ ಇದುವರೆಗೆ ಆಡಿರುವ ಎಲ್ಲ ಏಳು ಪಂದ್ಯಗಳಲ್ಲಿ ಗೆದ್ದಿರುವ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.