ಶುಕ್ರವಾರ, ಆಗಸ್ಟ್ 19, 2022
22 °C

2011ರ ವಿಶ್ವಕಪ್ ವಿಜಯಕ್ಕೆ ದಶಕದ ಸಂಭ್ರಮ: ಗೆಲುವಿನ ಮುನ್ನ ಮತ್ತು ನಂತರ...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

2011ರ ಏಪ್ರಿಲ್ 2ರ ರಾತ್ರಿ...

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಹೇಂದ್ರಸಿಂಗ್ ಧೋನಿ ಎತ್ತಿದ ಆ ಸಿಕ್ಸರ್‌ ಮರೆಯಲು ಸಾಧ್ಯವೇ?

ತವರಿನಂಗಳದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಮೊದಲ ತಂಡ ಭಾರತ ಎಂಬ ಹೆಗ್ಗಳಿಕೆಗೆ ಆ ಸಿಕ್ಸರ್ ಮುದ್ರೆಯೊತ್ತಿತ್ತು. ಆ ಅವಿಸ್ಮರಣೀಯ ಕ್ಷಣಕ್ಕೀಗ ದಶಕದ ಸಂಭ್ರಮ.

1983ರಲ್ಲಿ  ಕಪಿಲ್ ದೇವ್ ನಾಯಕತ್ವದ ಭಾರತ ತಂಡದ ವಿಶ್ವಕಪ್ ಗೆಲುವು ಭಾರತದ ಕ್ರಿಕೆಟ್‌ ಬೆಳವಣಿಗೆಗೆ ಹೊಸ ಆಯಾಮವನ್ನೇ ನೀಡಿತ್ತು. ಅದೇ ರೀತಿ ಧೋನಿ ಬಳಗದ ಸಾಧನೆಯು ಭಾರತದ ಕ್ರಿಕೆಟ್‌ಗೆ ಹೊಸ ದೆಸೆ ತೋರಿಸಿತು. ಈ ಶತಮಾನದ ಎರಡು ದಶಕಗಳ ಭಾರತದ ಕ್ರಿಕೆಟ್‌ ಸಾಧನೆಗೆ ಕಿರೀಟಪ್ರಾಯವಾದ ಜಯ ಎಂದು 2011ರ ಗೆಲುವನ್ನು ಪರಿಗಣಿಸಬಹುದು.  ಈ ವಿಜಯದ ಮುನ್ನ ಮತ್ತು ನಂತರದಲ್ಲಿ ಕ್ರಿಕೆಟ್‌ ಅಂಗಣದಲ್ಲಿ ಆಗಿರುವ ಬದಲಾವಣೆಗಳನ್ನು ವಿಶ್ಲೇಷಿಸಿದರೆ ಹಲವು ಮಹತ್ವದ ಅಂಶಗಳು ಗಮನ ಸೆಳೆಯುತ್ತವೆ.

ವಿಜಯಕ್ಕೂ ಹಿಂದಿನ ದಶಕ

1999–2000ರಲ್ಲಿ ಮ್ಯಾಚ್‌ ಫಿಕ್ಸಿಂಗ್ ಹಗರಣದ ಹೊಡೆತಕ್ಕೆ ಇಡೀ ಕ್ರಿಕೆಟ್‌ ಲೋಕವೇ ತಲೆತಗ್ಗಿಸಿ ನಿಂತಿತ್ತು. ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ, ಭಾರತದ ಮೊಹಮ್ಮದ್ ಅಜರುದ್ದೀನ್,  ಅಜಯ ಜಡೇಜಾ, ಮನೋಜ್ ಪ್ರಭಾಕರ್ ಮತ್ತು ಅಜಯ್ ಶರ್ಮಾ ಅವರಂತಹ ಪ್ರಮುಖರು ಆರೋಪಕ್ಕೆ ಸಿಲುಕಿ, ಆಟದಿಂದ ಹೊರನಡೆದಿದ್ದರು. ಕ್ರಿಕೆಟ್‌ ಅಭಿಮಾನಿಗಳ ಮನಸು ಮುರಿದಿತ್ತು.  ಸಚಿನ್, ಅಲ್ಪಕಾಲದ ನಾಯಕತ್ವದ ಹೊಣೆ ನಿಭಾಯಿಸಿದರು. ಆದರೆ, ಅಟದತ್ತ ಮಾತ್ರ ಗಮನ ಕೊಡುವುದಾಗಿ ಹೇಳಿ ನಾಯಕನ ಪಟ್ಟ ಬಿಟ್ಟರು. ಈ ಸಂದರ್ಭದಲ್ಲಿ ‘ದಾದಾ’ ಸೌರವ್ ಗಂಗೂಲಿಗೆ ನಾಯಕತ್ವದ ಹೊಣೆ ವಹಿಸಲಾಯಿತು. 

 ಆಕ್ರಮಣಶೀಲ ವ್ಯಕ್ತಿತ್ವದ ಗಂಗೂಲಿಗೆ ಹಲವು ಪ್ರತಿಭಾನ್ವಿತರ ಬೆಂಬಲ ಲಭಿಸಿತು. ಸಚಿನ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಜಹೀರ್ ಖಾನ್, ಯುವರಾಜ್ ಸಿಂಗ್, ಜಾವಗಲ್ ಶ್ರೀನಾಥ್, ಹರಭಜನ್ ಸಿಂಗ್ ಅವರಂತಹ ಪ್ರತಿಭಾವಂತರ ಬಳಗ ಸಿದ್ಧವಾಯಿತು. ದೇಶ, ವಿದೇಶಗಳಲ್ಲಿ ನಡೆದ ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿತು.

ಅದರ ಫಲಿತಾಂಶ 2003ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿತು.  ಆ ಟೂರ್ನಿಯಲ್ಲಿ ಗಂಗೂಲಿ ಪಡೆಯು ರನ್ನರ್ಸ್ ಅಪ್ ಆಯಿತು. ಅಭಿಮಾನಿಗಳ ವಲಯದಲ್ಲಿ ಕಳೆದುಹೋಗಿದ್ದ ವಿಶ್ವಾಸವನ್ನು ಮತ್ತೆ ಗಳಿಸಿಕೊಂಡಿತು. ಆಗಿನ್ನೂ ಮಹೇಂದ್ರಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರಲಿಲ್ಲ.

ಅಲ್ಲಿಂದ ಭಾರತ ತಂಡದ ಸಾಧನೆಯು ಏರುಗತಿಯಲ್ಲಿ ಸಾಗಿತು.  ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗೆಲುವಿನ ಹೆಜ್ಜೆಗುರುತುಗಳು ಮೂಡಿದವು.  ಆದರೆ 2005ರಲ್ಲಿ ಕೋಚ್ ಗ್ರೆಗ್ ಚಾಪೆಲ್ ಮತ್ತು ಗಂಗೂಲಿ ನಡುವಣ ವಿವಾದವು ತಂಡದ ಮೇಲೆ ಕೆಟ್ಟ ಪರಿಣಾಮ ಬೀರತೊಡಗಿತ್ತು. ಏಕದಿನ ಮತ್ತು 2006ರಲ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ಗಂಗೂಲಿ ಬಿಡಬೇಕಾಯಿತು. 

ಉಪನಾಯಕರಾಗಿದ್ದ ಕರ್ನಾಟಕದ ರಾಹುಲ್ ದ್ರಾವಿಡ್ ಅವರಿಗೆ ನಾಯಕನ ಪಟ್ಟ ಒಲಿಯಿತು. ಆದರೆ, 2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪ್ರಪಾತಕ್ಕೆ ಕುಸಿಯಿತು. 2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ, ಧೋನಿ ಕೂಡ ಆಗ ತಂಡದಲ್ಲಿದ್ದರು. ಆಟಗಾರರ ವಿರುದ್ಧ ಅಭಿಮಾನಿಗಳು ದೇಶಾದ್ಯಂತ ಪ್ರತಿಭಟನೆ ಮಾಡಿದರು. ಕ್ರಿಕೆಟಿಗರ ಬಗ್ಗೆ ಮತ್ತೊಮ್ಮೆ ಜನರ ವಿಶ್ವಾಸ ಅಲುಗಾಡಿತ್ತು.    

ಅದೇ ವರ್ಷ ನಡೆದ ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿಯಿಂದ ಪ್ರಮುಖ ಆಟಗಾರರು ಹಿಂದೆ ಸರಿದರು. ಹೊಸ ಹುಡುಗರ ಪಡೆಗೆ ಧೋನಿಯನ್ನು ನಾಯಕರನ್ನಾಗಿ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಕಳಿಸಲಾಯಿತು.  ಅಲ್ಲಿ ಚಾಂಪಿಯನ್ ಆದ ಭಾರತ ತಂಡವು ಇತಿಹಾಸ ಸೃಷ್ಟಿಸಿತು. ಮುಂದೆ ಕೆಲವೇ ದಿನಗಳಲ್ಲಿ ಧೋನಿ ಎಲ್ಲ ಮಾದರಿಗಳ ತಂಡಕ್ಕೆ ನಾಯಕರಾದರು.  ತಂಡದಲ್ಲಿ ಧೋನಿಗಿಂತ ಹೆಚ್ಚು ಅನುಭವಿ ಆಟಗಾರರು ಇದ್ದರು. ಹೊಸ ಆಟಗಾರರು ಮತ್ತು ಅನುಭವಿಗಳ ಮಧ್ಯ ಸಮನ್ವಯ ಸಾಧಿಸುವ ಕಾರ್ಯದಲ್ಲಿ ಧೋನಿ ಹಲವು ಬಾರಿ ಮಾಧ್ಯಮಗಳ ಟೀಕೆಗೂ ಗುರಿಯಾದರು.  ಆದರೆ ಆ ಟೀಕೆಗಳಿಗೆ 2011ರ ವಿಶ್ವಕಪ್ ವಿಜಯವೇ ಉತ್ತರವಾಯಿತು. 

ನಂತರದ ಹಾದಿ...

2003ರ ವಿಶ್ವಕಪ್‌ನಲ್ಲಿ ಆಡಿದ್ದ ಆರು ಮಂದಿ ಆಟಗಾರರು 2011ರಲ್ಲಿಯೂ ಇದ್ದರು. ಅದರಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಕೂಡ ಇದಾಗಿತ್ತು.

‘ಸಚಿನ್‌ಗೆ ವಿಶ್ವಕಪ್ ಕಾಣಿಕೆ ಕೊಡುವುದೇ ನನ್ನ ಗುರಿಯಾಗಿತ್ತು.  ಅದೇ ನನ್ನ ಆಟಕ್ಕೂ ಸ್ಪೂರ್ತಿಯಾಗಿತ್ತು‘ ಎಂದು ಟೂರ್ನಿಯಲ್ಲಿ ಸರಣಿಶ್ರೇಷ್ಠ ಗೌರವ ಗಳಿಸಿದ ಯುವರಾಜ್ ಸಿಂಗ್ ಹೇಳಿದ್ದರು.  2013ರಲ್ಲಿ ಧೋನಿ ಬಳಗವು ಚಾಂಪಿಯನ್ಸ್‌ ಟ್ರೋಫಿ ಜಯಿಸಿತು. ಟೆಸ್ಟ್‌ ಶ್ರೇಯಾಂಕದಲ್ಲಿಯೂ ಉತ್ತಮ ಸಾಧನೆ ಮಾಡಿತು. ಆದರೆ 2013–14ರಲ್ಲಿ ಐಪಿಎಲ್‌ನಲ್ಲಿ ನಡೆದ ಸ್ಪಾಟ್‌ ಫಿಕ್ಸಿಂಗ್ ಹಗರಣವು ಮತ್ತೊಮ್ಮೆ ಕ್ರಿಕೆಟ್‌ ಬೇರುಗಳನ್ನು ಅಲುಗಾಡಿಸಿತು. ಈ ಸಲ ಬಿಸಿಸಿಐನ ಆಡಳಿತ ಸುಧಾರಣೆಗೆ ಸುಪ್ರೀಂ ಕೋರ್ಟ್‌ ಹೆಜ್ಜೆಯಿಟ್ಟಿತು. ಇದು ಹಲವು  ಆಡಳಿತಾತ್ಮಕ ಬದಲಾವಣೆಗಳಿಗೆ ಕಾರಣವಾಯಿತು. 

ಇದೇ ಸಂದರ್ಭದಲ್ಲಿ ದಿಗ್ಗಜ ಆಟಗಾರರ ಸ್ಥಾನಗಳನ್ನು ತುಂಬುವವರು ಯಾರು? ಭಾರತ ಕ್ರಿಕೆಟ್‌ ಬೆಳೆಯುವುದು ಹೇಗೆ? ಎಂಬ ಪ್ರಶ್ನೆಗಳೂ ಸುಳಿದಾಡಿದ್ದವು. ಇದೀಗ ಅವುಗಳಿಗೆ  ಉತ್ತರಗಳು ಲಭಿಸಿವೆ.  2015 ಮತ್ತು 2019ರಲ್ಲಿ ಭಾರತವು ವಿಶ್ವಕಪ್ ಗೆಲ್ಲುವಲ್ಲಿ ಎಡವಿದೆ. ಟಿ20 ವಿಶ್ವಕಪ್‌ ಕೂಡ ಜಯಿಸಿಲ್ಲ. ಆದರೂ ಇವತ್ತು ಕ್ರಿಕೆಟ್‌ ಜಗತ್ತಿನ ‘ಸೂಪರ್ ಪವರ್’ ಆಗಿ ಬೆಳೆದಿದೆ.  ಅದಕ್ಕೆ ಕಾರಣ ಭಾರತದ ಬೆಂಚ್ ಶಕ್ತಿ.

ಧೋನಿಯ ನಂತರ ನಾಯಕತ್ವ ವಹಿಸಿಕೊಂಡ  ವಿರಾಟ್ ಕೊಹ್ಲಿ ಸ್ವತಃ ಬಹುಕೋಟಿ ಮೌಲ್ಯದ ಬ್ರ್ಯಾಂಡ್ ಆಗಿ ಬೆಳೆದಿದ್ದಾರೆ. ಸಚಿನ್ ಬ್ಯಾಟಿಂಗಿನ ಮತ್ತು ಧೋನಿಯ ನಾಯಕತ್ವದ ದಾಖಲೆಗಳನ್ನು ಹಿಂದಿಕ್ಕುತ್ತಿದ್ದಾರೆ. ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್‌ ಹೊಣೆ ನಿಭಾಯಿಸುವ ಸಮರ್ಥರಾಗಿ ಹೊರಹೊಮ್ಮಿದ್ದಾರೆ. ದ್ರಾವಿಡ್ ಸ್ಥಾನವನ್ನು ಪೂಜಾರ ತುಂಬುವ ಭರವಸೆ  ಮೂಡಿಸಿದ್ದಾರೆ. ಜಹೀರ್ ಖಾನ್ ನಂತರ ಯಾರು ಎಂಬ ಪ್ರಶ್ನೆ ಈಗ ಉಳಿದಿಲ್ಲ. ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್ ಅವಂತಹ ಮ್ಯಾಚ್‌ ವಿನ್ನರ್‌ಗಳ ದಂಡು ಸಿದ್ಧವಾಗಿದೆ.  ರವೀಂದ್ರ ಜಡೇಜ, ಆರ್. ಆಶ್ವಿನ್, ವಾಷಿಂಗ್ಟನ್ ಸುಂದರ್ ಅವರು ಆಲ್‌ರೌಂಡರ್‌ ಯುವಿಯ ಸ್ಥಾನ ತುಂಬಬಲ್ಲರು. ರೋಹಿತ್ ಶರ್ಮಾ, ಶಿಖರ್ ಧವನ್, ಮಯಂಕ್ ಅಗರವಾಲ್  ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಈ ಹೊಸ ಹುಡುಗರೇ ಐತಿಹಾಸಿಕ ಜಯಕ್ಕೆ ಕಾರಣರಾದರು. ಇಂಗ್ಲೆಂಡ್ ಎದುರಿನ ಸರಣಿಗಳಲ್ಲಿಯೂ ಇಶಾನ್ ಕಿಶನ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಅವರಂತಹ ಹೊಸ ಪ್ರತಿಭೆಗಳ ಆಟವೇ ರಂಗೇರಿತು. ಈಗ ಭಾರತವು ಕೇವಲ ಒಬ್ಬಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿಲ್ಲ. ಯಾವುದೇ ಹಂತದಲ್ಲಿಯೂ ಪಂದ್ಯಕ್ಕೆ ತಿರುವು ಕೊಡಬಲ್ಲ ಸಮರ್ಥರು ಇದ್ದಾರೆ. ಧೋನಿ ಮತ್ತು ವಿರಾಟ್ ಪ್ರಭಾವದಿಂದಾಗಿ ಫಿಟ್‌ನೆಸ್‌ಗೆ ಅ‍ಪಾರ ಮಹತ್ವ ದೊರೆತಿದೆ. ಇದೇ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಮತ್ತು ಭಾರತದಲ್ಲಿಯೇ ನಡೆಯಲಿರುವ ಟಿ20 ವಿಶ್ವಕಪ್ ವಿಜಯಗಳ ಮೇಲೆ ತಂಡ ಕಣ್ಣಿಟ್ಟಿದೆ. ಅಂದು ವಾಂಖೆಡೆ ಮೈದಾನದಲ್ಲಿ ಸಚಿನ್‌ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದವರ ಪೈಕಿ ವಿರಾಟ್ ಕೂಡ ಒಬ್ಬರು. ಅವರ ನಾಯಕತ್ವದಲ್ಲಿ ಭಾರತಕ್ಕೆ ಮತ್ತೊಂದು ವಿಶ್ವಕಪ್  ಒಲಿಯುವುದೇ?

2011ರ ವಿಶ್ವಕಪ್ ವಿಜೇತ ತಂಡ

ಮಹೇಂದ್ರಸಿಂಗ್ ಧೋನಿ (ನಾಯಕ/ವಿಕೆಟ್‌ಕೀಪರ್), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ (ಉಪನಾಯಕ), ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಎಸ್‌. ಶ್ರೀಶಾಂತ್, ಮುನಾಫ್ ಪಟೇಲ್, ಆಶೀಶ್ ನೆಹ್ರಾ, ಪಿಯೂಷ್ ಚಾವ್ಲಾ, ಆರ್. ಅಶ್ವಿನ್, ಯೂಸುಫ್ ಪಠಾಣ್, ಪ್ರವೀಣಕುಮಾರ್,  ಗ್ಯಾರಿ ಕರ್ಸ್ಟನ್ (ಮುಖ್ಯ ಕೋಚ್).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು