ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL 2023: ಆರ್‌ಸಿಬಿಗೆ ಸತತ ನಾಲ್ಕನೇ ಸೋಲು, ವಾರಿಯರ್ಸ್‌ ಜಯಭೇರಿ

Last Updated 10 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಮುಂಬೈ: ಅಲಿಸಾ ಹೀಲಿ (ಔಟಾಗದೆ 96) ಅವರ ಭರ್ಜರಿ ಆಟದ ನೆರವಿನಿಂದ ಯುಪಿ ವಾರಿಯರ್ಸ್‌ ತಂಡ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು.

ಸ್ಮೃತಿ ಮಂದಾನ ಬಳಗ ಸತತ ನಾಲ್ಕನೇ ಮುಖಭಂಗ ಅನುಭವಿಸಿತು. ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಯುಪಿ ತಂಡದ ಸೋಫಿ ಎಕ್ಸೆಲ್‌ಸ್ಟನ್ (13ಕ್ಕೆ4) ಹಾಗೂ ದೀಪ್ತಿ ಶರ್ಮಾ (26ಕ್ಕೆ3) ಅವರು ಉತ್ತಮ ಬೌಲಿಂಗ್ ಮುಂದೆ ಆರ್‌ಸಿಬಿಯು 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ವಾರಿಯರ್ಸ್‌ ತಂಡ 13 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಗೆಲುವಿನ ಗಡಿ ದಾಟಿತು. ಆರಂಭಿಕ ಬ್ಯಾಟರ್‌ಗಳಾದ ಅಲಿಸಾ ಮತ್ತು ದೇವಿಕಾ ವೈದ್ಯ (ಔಟಾಗದೆ 36) ತಂಡವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು.

ಮಂದಾನ ವಿಫಲ: ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಈ ಪಂದ್ಯದಲ್ಲಿಯೂ ವಿಫಲರಾದರು. ಕೇವಲ ನಾಲ್ಕು ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಸೋಫಿ ಡಿವೈನ್ (36; 24ಎ, 4X5, 6X1) ಹಾಗೂ ಎಲೀಸ್‌ ಪೆರಿ (52; 39ಎ, 4X6, 6X1) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 44 ರನ್ ಸೇರಿಸಿದರು.

ಒಂಬತ್ತನೇ ಓವರ್‌ನಲ್ಲಿ ಡಿವೈನ್ ವಿಕೆಟ್ ಗಳಿಸಿದ ಸೋಫಿ ಜೊತೆಯಾಟವನ್ನೂ ಮುರಿದರು. ಪೆರಿ ಅರ್ಧಶತಕ ಗಳಿಸಿದರು. ಅವರು ಕತ್ತಮ ಕನಿಕಾ ಅಹುಜಾ ವಿಕೆಟ್‌ಗಳನ್ನು ದೀಪ್ತಿ ಶರ್ಮಾ ಗಳಿಸಿದರು.

ಉಳಿದ ಬ್ಯಾಟರ್‌ಗಳೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವ ತಂಡದ ಉದ್ದೇಶ ಈಡೇರಲಿಲ್ಲ.

ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.3 ಓವರ್‌ಗಳಲ್ಲಿ 138 (ಸೋಫಿ ಡಿವೈನ್ 36, ಎಲೀಸ್ ಪೆರಿ 52, ಎಕ್ಸೆಲ್‌ಸ್ಟನ್ 13ಕ್ಕೆ4, ದೀಪ್ತಿ ಶರ್ಮಾ 26ಕ್ಕೆ3) ವಿರುದ್ಧ ಯುಪಿ ವಾರಿಯರ್ಸ್

ಯುಪಿ ವಾರಿಯರ್ಸ್‌: 13 ಓವರ್‌ಗಳಲ್ಲಿ 139 (ದೇವಿಕಾ ವೈದ್ಯ ಔಟಾಗದೆ 36, ಅಲಿಸಾ ಹೀಲಿ ಔಟಾಗದೆ 96)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT