ಭಾನುವಾರ, ಮೇ 16, 2021
22 °C
ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜೂನ್‌ 18ರಂದು ಫೈನಲ್‌ ಆರಂಭ

ಪ್ರಯಾಣ ನಿರ್ಬಂಧವಿದ್ದರೂ ನಿಗದಿಯಂತೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌: ಐಸಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಬ್ರಿಟನ್‌ಗೆ ಪ್ರಯಾಣ ನಿರ್ಬಂಧವಿದ್ದರೂ, ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ಪೂರ್ವನಿಗದಿಯಂತೆ ಸೌತಾಂಪ್ಟನ್‌ನಲ್ಲಿ ಜೂನ್‌ 18ರಿಂದ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)  ಆಶ್ವಾಸನೆ ನೀಡಿದೆ. ಭಾರತದಲ್ಲಿ ಕೋವಿಡ್‌ ಪ್ರಕರಣಗಳು ವಿಪರೀತ ಏರುಗತಿಯಲ್ಲಿರುವ ಕಾರಣ ಇಂಗ್ಲೆಂಡ್‌ ಕೆಲವು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದೆ.

ಇಂಗ್ಲೆಂಡ್‌, ಭಾರತವನ್ನು ಪ್ರಯಾಣದ ‘ಕೆಂಪುಪಟ್ಟಿ’ಗೆ ಸೇರಿಸಿರುವ ಕಾರಣ ಅಲ್ಲಿಗೆ ಭಾರತೀಯರು ಪ್ರಯಾಣಿಸುವಂತಿಲ್ಲ. ಅಲ್ಲಿಗೆ ಮರಳುವ ಬ್ರಿಟಿಷ್‌ ಪ್ರಜೆಗಳೂ ಸಹ ಹತ್ತು ದಿನಗಳ ಕಠಿಣ ಕ್ವಾರಂಟೈನ್‌ನಲ್ಲಿ ಕಳೆಯಬೇಕಾಗುತ್ತದೆ.

ಓದಿ: 

ಆದರೆ ಬಯೊಬಬಲ್‌ ಸುರಕ್ಷಾ ವ್ಯವಸ್ಥೆಯಲ್ಲಿ ಡಬ್ಲ್ಯುಟಿಸಿ ಫೈನಲ್‌ ಪಂದ್ಯವನ್ನು ನಡೆಸುವ ವಿಶ್ವಾಸವನ್ನು ಐಸಿಸಿ ಹೊಂದಿದೆ. ‘ಸಾಂಕ್ರಾಮಿಕ ಪಿಡುಗು ಇರುವಾಗಲೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಸುರಕ್ಷಿತವಾಗಿ ಹೇಗೆ ನಡೆಸಬಹುದು ಎಂಬುದನ್ನು ಇಂಗ್ಲಿಷ್‌ ಕೌಂಟಿ ಬೋರ್ಡ್‌ (ಇಸಿಬಿ) ಮತ್ತು ಇತರ ಸದಸ್ಯ ರಾಷ್ಟ್ರಗಳು ತೋರಿಸಿಕೊಟ್ಟಿವೆ. ಇದನ್ನು ನಾವು ಮುಂದುವರಿಸುತ್ತೇವೆ. ಜೂನ್‌ನಲ್ಲಿ ಲಂಡನ್‌ನ ಸೌತಾಂಪ್ಟನ್‌ನ ಪಂದ್ಯ ಕೂಡ ನಿಗದಿಯಂತೆಯೇ ನಡೆಯಲಿದೆ’ ಎಂದು ಐಸಿಸಿ ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಹಂತದಲ್ಲಿ ಏನೂ ಹೇಳುವುದು ಕಷ್ಟ. ಜೂನ್‌ನಲ್ಲಿ ಫೈನಲ್‌ ನಡೆಯುವ ವೇಳೆಗೆ ಭಾರತ ಪ್ರಯಾಣದ ಕೆಂಪುಪಟ್ಟಿಯಿಂದ ಹೊರಗಿರಬಹುದು ಎಂಬ ವಿಶ್ವಾಸವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹೊಂದಿದೆ’ ಎಂದು ಮಂಡಳಿಯ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ.

ಓದಿ: 

‘ಜೂನ್‌ ವೇಳೆಗೆ ‍ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಹೇಳಲಾಗದು. ಪ್ರಯಾಣ ಸಂಬಂಧಿ ಮಾರ್ಗಸೂಚಿಗಳು ಕೋವಿಡ್‌ ಸಂದರ್ಭಕ್ಕೆ ಅನುಗುಣವಾಗಿ ಚಾಲ್ತಿಯಲ್ಲಿರುತ್ತವೆ. ಜೂನ್‌ ಆರಂಭದಲ್ಲಿ ಭಾರತ, ಅಲ್ಲಿಗೆ ತೆರಳುವಾಗ ಭಾರತವು ಪ್ರಯಾಣ ನಿರ್ಬಂಧ ಪಟ್ಟಿಯಿಂದ ಹೊರಗಿರಬಹುದು’ ಎಂದು ತಿಳಿಸಿದೆ.

ಅಗತ್ಯಬಿದ್ದರೆ ಸೌತಾಂಪ್ಟನ್‌ನ ರೋಸ್‌ಬೌಲ್‌ ಮತ್ತು ಹೋಟೆಲ್‌ ತಾಣಗಳನ್ನು ‘ಪ್ರಯಾಣ ನಿರ್ಬಂಧ’ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿದೆ. ಕಳೆದ ಋತುವಿನಲ್ಲಿ ಕೆಲವು ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲಿ ಬಯೊಬಬಲ್‌ ಸುರಕ್ಷಾ ವ್ಯವಸ್ಥೆಯಡಿ ಯಶಸ್ವಿಯಾಗಿ ನಡೆದಿವೆ ಎಂದು ಇಂಗ್ಲೆಂಡ್‌ನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಭಾರತ ಮಹಿಳಾ ಕ್ರಿಕೆಟ್‌ ತಂಡವೂ, ಆಗಸ್ಟ್‌ 4ರಂದು ಆರಂಭವಾಗುವ ಐದು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಹೋಗಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು