ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: ಪಾಯಿಂಟ್ಸ್‌ ಆಧಾರದಲ್ಲಿ ಫೈನಲ್‌ ತಂಡಗಳ ನಿರ್ಧಾರ

ಐಸಿಸಿ ಸಭೆಯಲ್ಲಿ ಚರ್ಚೆ
Last Updated 15 ನವೆಂಬರ್ 2020, 12:57 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋವಿಡ್ –19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಬಾಧಿತವಾಗಿರುವ ಚೊಚ್ಚಲ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್‌ ಫೈನಲ್‌ ಆಡುವ ತಂಡಗಳ ಆಯ್ಕೆಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೂತನ ಪ್ರಸ್ತಾವವೊಂದನ್ನು ರೂಪಿಸಿದೆ.

’ತಂಡಗಳು ಈಗಾಗಲೇ ಆಡಿರುವ ಪಂದ್ಯಗಳಲ್ಲಿ ಗಳಿಸಿರುವ ಪಾಯಿಂಟ್ಸ್‌ಗಳ ಶೇಕಡಾವಾರು ಆಧಾರದಲ್ಲಿ ಫೈನಲ್‌ ತಂಡಗಳನ್ನು ನಿರ್ಧರಿಸಲಾಗುವುದು‘ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

ಸೋಮವಾರ ನಡೆಯಲಿರುವ ಐಸಿಸಿಯ ತ್ರೈಮಾಸಿಕ ಸಭೆಯಲ್ಲಿ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಕೋವಿಡ್‌ನಿಂದಾಗಿ ನಡೆಯದಿರುವ ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಪಂದ್ಯಗಳ ಅಂಕಗಳನ್ನು ಡ್ರಾ ಮಾದರಿಯಲ್ಲಿ ಹಂಚುವ ಕುರಿತು ಯೋಚಿಸಲಾಗುತ್ತಿದೆ.

ಟೂರ್ನಿಯ ವೇಳಾಪಟ್ಟಿಯಲ್ಲಿ ಈ ಮೊದಲು ನಿಗದಿಯಾಗಿರುವಂತೆ ಅಗ್ರಶ್ರೇಯಾಂಕದ ಒಂಬತ್ತು ತಂಡಗಳು ಎರಡು ವರ್ಷಗಳ ಅವಧಿಯಲ್ಲಿ ಆರು ಸರಣಿಗಳಲ್ಲಿ ಆಡಬೇಕಿತ್ತು. ಅಗ್ರ ಎರಡು ತಂಡಗಳು ಮುಂದಿನ ವರ್ಷದ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಫೈನಲ್‌ ನಲ್ಲಿ ಆಡಲಿವೆ.

’ಸದ್ಯ ಹೊಸ ಪ್ರಸ್ತಾವದ ಪ್ರಕಾರ; ಭಾರತವು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎಲ್ಲ ನಾಲ್ಕರಲ್ಲಿ ಸೋತು, ಅದರ ನಂತರದ ಇಂಗ್ಲೆಂಡ್ ವಿರುದ್ಧದ ಸರಣಿಯ ಐದೂ ಪಂದ್ಯಗಳನ್ನು ಗೆದ್ದರೆ, ಒಟ್ಟು 480 ಪಾಯಿಂಟ್ಸ್‌ಗಳು ಖಾತೆ ಸೇರುತ್ತವೆ. ಆಗ ಭಾರತ ತಂಡದ ಶೇಕಡಾವಾರು ಪಾಲು 66.67 ಆಗಲಿದೆ.

’ಒಂದೊಮ್ಮೆ ಭಾರತ ತಂಡವು ಇಂಗ್ಲೆಂಡ್ ಎದುರಿನ ಐದೂ ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ ಎದುರು 1–3ರಿಂದ ಸೋತರೆ ಶೇ 70ಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸುವುದು. ಅದೇ ಭಾರತ ತಂಡವು 5–0ಯಿಂದ ಇಂಗ್ಲೆಂಡ್ ವಿರುದ್ಧ ಜಯಿಸಿ; ಆಸ್ಟ್ರೇಲಿಯಾ ಎದುರು 2–0ಯಿಂದ ಸೋತರೂ ಒಟ್ಟು 500 ಪಾಯಿಂಟ್ಸ್ ದಾಟಲಿದೆ' ಎಂದು ಹೇಳಲಾಗಿದೆ.

ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತ ತಂಡವು (360 ಅಂಕ) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (296) ಮತ್ತು ಇಂಗ್ಲೆಂಡ್ (292) ಮತ್ತು ನ್ಯೂಜಿಲೆಂಡ್ (180) ನಂತರದ ಮೂರು ಸ್ಥಾನಗಳಲ್ಲಿವೆ. 166 ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT