ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ | ಮೂರು ಪಂದ್ಯಗಳ ಫೈನಲ್‌ನಿಂದ ಅನುಕೂಲ: ಯುವರಾಜ್

ಭಾರತ ತಂಡದ ಸಾಧ್ಯತೆ ಬಗ್ಗೆ ಯುವರಾಜ್ ಸಿಂಗ್‌ ಆತಂಕ
Last Updated 6 ಜೂನ್ 2021, 14:06 IST
ಅಕ್ಷರ ಗಾತ್ರ

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮೂರು ಪಂದ್ಯಗಳಿಂದ ಕೂಡಿದ್ದರೆ ಅನುಕೂಲ ಆಗುತ್ತಿತ್ತು ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಒಂದೇ ಫೈನಲ್‌ನಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

‘ನ್ಯೂಜಿಲೆಂಡ್ ಈಗಾಗಲೇ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ. ಭಾರತಕ್ಕೆ ಫೈನಲ್‌ಗೂ ಮೊದಲು ಅಭ್ಯಾಸಕ್ಕೆ ಹೆಚ್ಚು ಅವಕಾಶವಿಲ್ಲ. ಫೈನಲ್‌ ಮೂರು ಪಂದ್ಯಗಳಿಂದ ಕೂಡಿದ್ದರೆ ಮೊದಲ ಪಂದ್ಯದಲ್ಲಿ ಸೋತರೂ ಚೇತರಿಸಿಕೊಳ್ಳಲು ಮತ್ತೆ ಎರಡು ಅವಕಾಶಗಳಿರುತ್ತಿತ್ತು‘ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

‘ಭಾರತ ಬಲಿಷ್ಠ ತಂಡ. ಈಚೆಗೆ ವಿದೇಶಗಳಲ್ಲಿ ನಡೆದ ಸರಣಿಗಳಲ್ಲಿ ವಿರಾಟ್ ಬಳಗ ಅತ್ಯುತ್ತಮ ಸಾಮರ್ಥ್ಯ ತೋರಿದೆ. ಆದರೆ ಈಗ ಬ್ಯಾಟಿಂಗ್‌ನಷ್ಟು ಬೌಲಿಂಗ್ ಬಲಿಷ್ಠವಾಗಿಲ್ಲ’ ಎಂದ ಯುವರಾಜ್ ‘ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಅವಕಾಶವಿದೆಯಾದರೂ ಅಭ್ಯಾಸ ಪಂದ್ಯಗಳಿಂದ ಆಗುವ ಪರಿಣಾಮವೇ ಬೇರೆ’ ಎಂದರು.

‘ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದ ಪ್ರತಿಯೊಂದು ಅವಧಿಯೂ ಭಿನ್ನವಾಗಿರುತ್ತದೆ. ಬೆಳಿಗ್ಗಿನ ಅವಧಿಯಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ವೇಗವೂ ಹೆಚ್ಚು ಇರುತ್ತದೆ. ಭೋಜನಾನಂತರದ ಅವಧಿಯಲ್ಲಿ ರನ್‌ಗಳು ಹರಿದುಬರುತ್ತವೆ. ಚಹಾ ವಿರಾಮದ ನಂತರ ಮತ್ತೆ ಚೆಂಡು ಸ್ವಿಂಗ್ ಆಗುತ್ತದೆ. ಈ ಎಲ್ಲ ಸಂದರ್ಭಗಳಿಗೂ ಹೊಂದಿಕೊಳ್ಳಲು ಸಾಧ್ಯವಾದರೆ ಯಶಸ್ಸು ಸಿಗಬಲ್ಲುದು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT