ರೈತರಿಗೆ ಯುವಿ ಬೆಂಬಲ; ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯಲು ಪ್ರಾರ್ಥನೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ 39ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಆದರೆ ನವದೆಹಲಿ ಗಡಿ ಭಾಗದಲ್ಲಿ ರೈತರು ಭಾರಿ ಪ್ರತಿಭಟನೆಯನ್ನು ನಡೆಸುತ್ತಿರುವುದರಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಕೇಂದ್ರ ಸರಕಾರವನ್ನು ವಿರೋಧಿಸಿ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಪಟ್ಟಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯು ಶೀಘ್ರ ಬಗೆಹರಿಯಬೇಕೆಂದು ಯುವರಾಜ್ ಸಿಂಗ್ ಪ್ರಾರ್ಥಿಸಿದರು. ಅಲ್ಲದೆ ತಮ್ಮ ತಂದೆಯ ಸಿದ್ಧಾಂತಗಳಿಂದ ವಿಭಿನ್ನ ನಿಲುವನ್ನು ಹೊಂದಿರುವುದಾಗಿ ತಿಳಿಸಿದರು.
'ರೈತರು ದೇಶದ ಜೀವನಾಡಿ ಎಂಬುದು ನಿಸ್ಸಂದೇಹ. ಶಾಂತಿಯುತ ಮಾತುಕತೆಯ ಮೂಲಕ ಬಿಕ್ಕಟ್ಟು ಬಗೆಹರಿಯುವುದಾಗಿ ನಂಬಿಕೆಯಿರಿಸಿದ್ದೇನೆ' ಎಂದು ಹೇಳಿದರು.
ಇದನ್ನೂ ಓದಿ: ಕ್ರೀಡಾ ಪ್ರಶಸ್ತಿ ಹಿಂದಿರುಗಿಸುವ ಕ್ರಮಕ್ಕೆ ಯೋಗರಾಜ್ ಬೆಂಬಲ
'ಹುಟ್ಟುಹಬ್ಬದಂದು ಆಸೆ, ಅಭಿಲಾಷೆ ಈಡೇರಿಸುವ ಅವಕಾಶವಾಗಿದೆ. ಈ ಜನ್ಮದಿನವನ್ನು ಆಚರಿಸುವ ಬದಲು ನಮ್ಮ ರೈತರು ಹಾಗೂ ಸರ್ಕಾರದ ನಡುವೆ ನಡೆಯುತ್ತಿರುವ ಮಾತುಕತೆಗಳು ತ್ವರಿತ ಪರಿಹಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದರು.
— Yuvraj Singh (@YUVSTRONG12) December 11, 2020
ಏತನ್ಮಧ್ಯೆ ಸೈದ್ಧಾಂತಿಕವಾಗಿ ತಮ್ಮ ತಂದೆಯ ನಿಲುವುಗಳನ್ನು ಬೆಂಬಲಿಸುವುದಿಲ್ಲ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದರು.
'ಮಿ. ಯೋಗರಾಜ್ ಸಿಂಗ್ ಅವರ ಹೇಳಿಕೆಗಳಿಂದ ನಾನು ದುಃಖಿತನಾಗಿದ್ದೇನೆ. ಅದವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ನನ್ನ ಸಿದ್ಧಾಂತಗಳು ಅದಕ್ಕೆ ಸಮಾನವಾಗಿರುವುದಿಲ್ಲ' ಎಂದರು.
ಇದನ್ನೂ ಓದಿ: ರೋಹಿತ್ ಶರ್ಮಾ ಫಿಟ್; ಆಸೀಸ್ ವಿಮಾನವನ್ನೇರಲಿರುವ 'ಹಿಟ್ಮ್ಯಾನ್'
ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕೆಂದು ಯುವರಾಜ್ ಸಿಂಗ್ ಕೋರಿದರು. ಕೋವಿಡ್ 19 ಇನ್ನೂ ಮುಗಿದಿಲ್ಲ, ವೈರಸ್ ಅನ್ನು ಸಂಪೂರ್ಣವಾಗಿ ಸೋಲಿಸಲು ನಾವು ಅತ್ಯಂತ ಜಾಗರೂಕರಾಗಿರಬೇಕು ಎಂದು ಹೇಳಿದರು.
ಅಂತಿಮವಾಗಿ 'ಜೈ ಜವಾನ್, ಜೈ ಕಿಸಾನ್! ಜೈ ಹಿಂದ್' ಘೋಷವಾಕ್ಯದೊಂದಿಗೆ ಯುವರಾಜ್ ಸಿಂಗ್ ತಮ್ಮ ಮಾತನ್ನು ಕೊನೆಗೊಳಿಸಿದರು.
ಈ ಮೊದಲು ಹೇಳಿಕೆ ನೀಡಿರುವ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, 'ರೈತರು ಸರಿಯಾದ ವಿಷಯವನ್ನು ಒತ್ತಾಯಿಸುತ್ತಿದ್ದಾರೆ. ಸರಕಾರವು ಅವರ ಮಾತನ್ನು ಆಲಿಸಬೇಕು. ಈ ನಿಟ್ಟಿನಲ್ಲಿ ಆದಷ್ಟು ಬೇಗ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅಲ್ಲದೆ ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಂದುಗಿರುಗಿಸುವ ಎಲ್ಲ ಕ್ರೀಡಾಪಟುಗಳಿಗೆ ನಾನು ಬೆಂಬಲ ನೀಡುತ್ತೇನೆ' ಎಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.