ಬುಧವಾರ, ಮೇ 12, 2021
27 °C
ತಂಡದ ಸಂಯೋಜನೆಯು ಅತ್ಯಂತ ದುರ್ಬಲವಾಗಿತ್ತು ಎಂದ ಮಾಜಿ ಆಲ್ರೌಂಡರ್‌

ವಿಶ್ವಕಪ್‌ 2019: ರಾಯುಡುಗೆ ಅವಕಾಶ ನೀಡದ ಆಯ್ಕೆ ಸಮಿತಿ ವಿರುದ್ಧ ಯುವಿ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಭಾರತ ತಂಡದ ಸಂಯೋಜನೆಯು ಅತ್ಯಂತ ದುರ್ಬಲವಾಗಿತ್ತು ಎಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಗುಡುಗಿದ್ದಾರೆ.

ಹಿಂದಿ ವಾಹಿನಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಯುವರಾಜ್‌, ‘ಮಧ್ಯಮ ಕ್ರಮಾಂಕದ ಆಯ್ಕೆಯಲ್ಲಿ ಗೊಂದಲಗಳಿದ್ದವು. ವಿಶ್ವಕಪ್‌ ಟೂರ್ನಿಗೆ ಅಂಬಟಿ ರಾಯುಡು ಅವರನ್ನು ಕೈಬಿಟ್ಟು, ಅನನುಭವಿ ರಿಷಭ್‌ ಪಂತ್‌ ಹಾಗೂ ವಿಜಯ್‌ ಶಂಕರ್‌ ಅವರನ್ನು ಆಯ್ಕೆ ಮಾಡಲಾಯಿತು. ನಾನು ಈ ಇಬ್ಬರ ವಿರುದ್ಧವಾಗಿ ಮಾತನಾಡುತ್ತಿಲ್ಲ. ಆದರೆ, ಕೇವಲ ಐದು ಏಕದಿನ ಪಂದ್ಯಗಳನ್ನು ಆಡಿದ್ದವರು ದೊಡ್ಡ ಗೆಲುವುಗಳನ್ನು ತಂದುಕೊಡಬಲ್ಲರು ಎಂದು ಹೇಗೆ ನಿರೀಕ್ಷಿಸಿದ್ದಿರಿ?’ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

‘ನಾನು ಹೇಳುವುದೇನೆಂದರೆ, ಸೆಮಿಫೈನಲ್ ಪಂದ್ಯದಲ್ಲಿ ಇದ್ದಕ್ಕಿದ್ದಂತೆ ದಿನೇಶ್‌ ಕಾರ್ತಿಕ್‌ ಸ್ಥಾನ ಪಡೆದದ್ದು ಹೇಗೆ? ಧೋನಿಯಂತಹ ಬ್ಯಾಟ್ಸ್‌ಮನ್‌ ಏಳನೇ ಕ್ರಮಾಂಕದಲ್ಲಿ ಆಡಿದ್ದು ಹೇಗೆ ಎಂಬುದು ಗೊಂದಲದ ವಿಚಾರ. ಮಹತ್ವದ ಪಂದ್ಯಗಳಲ್ಲಿ ನೀವು ಆ ರೀತಿ ಮಾಡಲು ಸಾಧ್ಯವಿಲ್ಲ. ನಿಮ್ಮಲ್ಲಿ ಸ್ಪಷ್ಟತೆ ಇರಬೇಕು’ ಎಂದು ಕಿಡಿಕಾರಿದ್ದಾರೆ.

‘ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ (ಪಂತ್‌) ಟೂರ್ನಿಯಲ್ಲಿ ಗಳಿಸಿದ ಗರಿಷ್ಠ ಮೊತ್ತ 48. ಹಾಗಾಗಿಯೇ ನಾನು ಹೇಳುವುದು ತಂಡದ ಸಂಯೋಜನೆ ಅತ್ಯಂತ ದುರ್ಬಲವಾಗಿತ್ತು. ಯಾಕೆಂದರೆ ಅವರು (ಆಯ‌್ಕೆ ಸಮಿತಿ) ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಎಣಿಸಿದ್ದರು. ಅಂತಹ ಲೆಕ್ಕಾಚಾರದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಒಂದು ವೇಳೆ ನೀವು 2003, 2007, 2015ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದತ್ತ ನೋಡಿದರೆ, ತಂಡದ ಸಂಯೋಜನೆಯ ಬಗ್ಗೆ ತಿಳಿಯುತ್ತದೆ. ನಮ್ಮ ಯೋಜನೆ ಸಂಪೂರ್ಣ ಕೆಟ್ಟದಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು