ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪೈರಿಂಗ್ ಎಡವಟ್ಟು

Last Updated 17 ಜೂನ್ 2019, 8:46 IST
ಅಕ್ಷರ ಗಾತ್ರ

ನಾಟಿಂಗಂನಲ್ಲಿ ಜೂನ್‌ 6ರಂದು ಆಸ್ಟ್ರೇಲಿಯಾ– ವೆಸ್ಟ್‌ ಇಂಡೀಸ್‌ ತಂಡಗಳು ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪರಸ್ಪರ ಪೈಪೋಟಿ ನಡೆಸಿದ್ದವು. ಆಸೀಸ್ ತಂಡ 15 ರನ್‌ಗಳಿಂದ ಜಯ ಸಾಧಿಸಿದ್ದ ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿರುವ ಎಡವಟ್ಟುಗಳು ಚರ್ಚೆಗೆ ಗ್ರಾಸ ಒದಗಿಸಿವೆ.

ಕ್ರಿಕೆಟ್‌ನಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದರೂ ತೀರ್ಪು ನೀಡುವಲ್ಲಿ ತಪ್ಪುಗಳು ಸಂಭವಿಸುತ್ತಿರುವುದು ಸೋಜಿಗದ ಸಂಗತಿ. ಆಸ್ಟ್ರೇಲಿಯಾ– ವೆಸ್ಟ್‌ ಇಂಡೀಸ್‌ ಪಂದ್ಯ ಅಂಪೈರಿಂಗ್‌ ಲೋಪಗಳಿಂದ ವಿವಾದಕ್ಕೆ ಗುರಿಯಾಗಿತ್ತು. ವಿಂಡೀಸ್‌ ತಂಡ ನಾಲ್ಕು ಸಲ ಅಂಪೈರ್‌ ತೀರ್ಪು ಮರುಪರಿಶೀಲನೆ ನಡೆಸಿ ಯಶಸ್ವಿಯಾಗಿತ್ತು.

ಈ ಪಂದ್ಯದ ಅಂಪೈರಿಂಗ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಆಸ್ಟ್ರೇಲಿಯಾ ಗೆಲುವಿಗೆ ಅಂಪೈರ್‌ಗಳು ಕೂಡ ಸಾಥ್‌ ನೀಡಿದರು ಎಂದು ಕ್ರಿಕೆಟ್‌ ಪ್ರೇಮಿಗಳು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಕಾಲೆಳೆದಿದ್ದಾರೆ.

ನ್ಯೂಜಿಲೆಂಡ್‌ನ ಅಂಪೈರ್ ಕ್ರಿಸ್‌ ಗಫಾನಿಮತ್ತು ಶ್ರೀಲಂಕಾದ ರುಚಿರ ಪಲ್ಲಿಯಗುರುಗೆ ಅವರು ಪಂದ್ಯದಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದರು. ಇದರಲ್ಲಿ ಗಫಾನಿ ಅವರಂತೂ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡು ಕ್ರಿಕೆಟ್‌ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಮಿಷೆಲ್‌ ಸ್ಟಾರ್ಕ್‌ ಬೌಲ್‌ ಮಾಡಿದ ಮೂರನೇ ಓವರ್‌ನಲ್ಲಿ ಗಫಾನಿ ಅವರು ಕ್ರಿಸ್‌ ಗೇಲ್‌ ಅವರಿಗೆ ಎರಡು ಸಲ ಔಟ್‌ ಎಂದು ತೀರ್ಪು ನೀಡಿದ್ದರು. ಆದರೆ ಎರಡೂ ಬಾರಿ ತೀರ್ಪು ಮರುಪರಿಶೀಲ‌ನೆ (ಡಿಆರ್‌ಎಸ್‌) ವೇಳೆ ಅವರು ನಾಟೌಟ್‌ ಎಂಬುದು ಸಾಬೀತಾಗಿತ್ತು.

ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ‘ಕಾಟ್‌ ಬಿಹೈಂಡ್‌ ದಿ ವಿಕೆಟ್‌’ ಮತ್ತು ಆರನೇ ಎಸೆತದಲ್ಲಿ ಎಲ್‌ಬಿಡಬ್ಲ್ಯು ಔಟ್‌ಗೆ ಆಸೀಸ್‌ ಆಟಗಾರರು ಮಾಡಿದ್ದ ಮನವಿಗಳನ್ನು ಅಂಪೈರ್‌ ಪುರಸ್ಕರಿಸಿದ್ದರು. ಅಂಪೈರ್‌ ನೀಡಿರುವ ತೀರ್ಪು ತಪ್ಪು ಎಂಬುದು ಡಿಆರ್‌ಎಸ್‌ನಲ್ಲಿ ಸಾಬೀತಾಗಿತ್ತು.

ಆದರೆ ಪಂದ್ಯದ ಐದನೇ ಓವರ್‌ನಲ್ಲಿ ಅಂಪೈರ್‌ ಮಾಡಿದ ಎಡವಟ್ಟು ಯಾರ ಕಣ್ಣಿಗೂ ಬೀಳಲಿಲ್ಲ. ಆ ಓವರ್‌ನ ಐದನೇ ಎಸೆತದಲ್ಲಿ ಗೇಲ್‌ ಎಲ್‌ಬಿಡಬ್ಲ್ಯು ಆದರು. ಅವರು ಔಟ್‌ ಎಂಬುದು ಡಿಆರ್‌ಎಸ್‌ನಲ್ಲೂ ಸಾಬೀತಾಯಿತು. ಆದರೆ ಸ್ಟಾರ್ಕ್‌ ಬೌಲ್‌ ಮಾಡಿದ ನಾಲ್ಕನೇ ಎಸೆತ ನೋಬಾಲ್‌ ಆಗಿತ್ತು. ಅವರ ಕಾಲು ಬೌಲಿಂಗ್‌ ಕ್ರೀಸ್‌ಗಿಂತ ಸುಮಾರು ನಾಲ್ಕು ಇಂಚುಗಳಷ್ಟು ಮುಂದೆ ಇತ್ತು. ಆ ಎಸೆತದ ಮರುಪ್ರಸಾರದಲ್ಲಿ ಇದು ಎದ್ದುಕಂಡಿತು.

ಅದನ್ನು ಅಂಪೈರ್‌ ಗಮನಿಸಿದ್ದರೆ ಮುಂದಿನ ಎಸೆತ ‘ಫ್ರೀ ಹಿಟ್‌’ ಆಗುತ್ತಿತ್ತು. ಆಗ ಗೇಲ್‌ ಔಟಾಗುತ್ತಿರಲಿಲ್ಲ. ಆದರೆ ಫ್ರೀ ಹಿಟ್‌ ಆಗಬೇಕಿದ್ದ ಎಸೆತದಲ್ಲಿ ಅವರು ಔಟಾದರು. ನೋಬಾಲ್ ಅಂಪೈರ್‌ ಕಣ್ಣಿಗೆ ಬೀಳದೇ ಆಸ್ಟ್ರೇಲಿಯಕ್ಕೆ ಲಾಭವಾಯಿತು!

‘ಅಂಪೈರ್‌ಗಳು ಕೂಡಾ ಮನುಷ್ಯರು. ಆದ್ದರಿಂದ ಕೆಲವೊಮ್ಮೆ ತಪ್ಪುಗಳು ಉಂಟಾಗುವುದು ಸಹಜ’ ಎಂಬುದು ಕೆಲವರ ವಾದ. ಈ ವಾದವನ್ನು ಒಪ್ಪಬಹುದು. ಆದರೆ ಅಂಪೈರ್‌ಗಳ ಎಡವಟ್ಟು ಪಂದ್ಯದ ಫಲಿತಾಂಶವನ್ನೇ ಬದಲಿಸುವಷ್ಟರ ಮಟ್ಟಿಗೆ ಪರಿಣಾಮ ಬೀರಿದರೆ ನಿಕಟ ಪೈಪೋಟಿಯಿರುವ ಪಂದ್ಯಗಳಲ್ಲಿ ಒಂದು ತಂಡಕ್ಕೆ ಅನ್ಯಾಯ ಎಸಗಿದಂತಾಗುತ್ತದೆ.

ವಿಶ್ವಕಪ್‌ ಪಂದ್ಯಗಳ ವೀಕ್ಷಕ ವಿವರಣೆಗಾರರ ತಂಡದಲ್ಲಿರುವ ವೆಸ್ಟ್‌ ಇಂಡೀಸ್‌ನ ಮಾಜಿ ವೇಗದ ಬೌಲರ್ ಮೈಕಲ್ ಹೋಲ್ಡಿಂಗ್‌ ಅವರು ವೀಕ್ಷಣೆ ವಿವರಣೆ ವೇಳೆ ಅಂಪೈರ್‌ ತೀರ್ಪನ್ನು ಪ್ರಶ್ನಿಸಿದ್ದರು. ಆದರೆ ಅಂಪೈರಿಂಗ್ ಲೋಪಗಳ ಬಗ್ಗೆ ಮಾತನಾಡದಂತೆ ಅವರಿಗೆ ಐಸಿಸಿ ಎಚ್ಚರಿಕೆ ಕೊಟ್ಟಿತ್ತು.

ಆದರೆ ಹೋಲ್ಡಿಂಗ್‌ ಅವರು ಐಸಿಸಿಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆ (ಫಿಫಾ) ನಡೆಸುವ ಟೂರ್ನಿಯಲ್ಲಿ ರೆಫರಿಯೊಬ್ಬರು ಈ ರೀತಿ ಎಡವಟ್ಟು ಮಾಡಿದರೆ, ಮರುದಿನವೇ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ತಪ್ಪು ಮಾಡಿದ ಬಳಿಕವೂ ಅವರನ್ನು ರಕ್ಷಿಸುವುದು ಸರಿಯೇ? ಕ್ರಿಕೆಟ್‌ನಲ್ಲಿ ಅಂಪೈರಿಂಗ್‌ ಗುಣಮಟ್ಟವನ್ನು ಹೆಚ್ಚಿಸಬೇಕಿದೆ ಎಂದು ಹೋಲ್ಡಿಂಗ್‌ ತಮ್ಮ ಪತ್ರದಲ್ಲಿ ಬರೆದಿದ್ದರು ಎನ್ನಲಾಗಿದೆ.

ಇತ್ತೀಚೆಗೆ ನಡೆದಿದ್ದ ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲೂ ಅಂಪೈರ್‌ಗಳ ತಪ್ಪುಗಳು ಸುದ್ದಿಯಾಗಿದ್ದವು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಂತೂ ಆಟದ ನಡುವೆಯೇ ಅಂಗಳಕ್ಕೆ ಬಂದು ಅಂಪೈರ್‌ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಸಂಗವೂ ನಡೆದಿತ್ತು.

ಅಂಪೈರ್‌ಗಳು ಮಾಡುತ್ತಿರುವ ಎಡವಟ್ಟುಗಳು ಕ್ರಿಕೆಟ್‌ನ ‘ಮಹಾಮೇಳ’ ಎನಿಸಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಘನತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂಬುದು ಕ್ರಿಕೆಟ್‌ ಪ್ರೇಮಿಗಳ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT