ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಮೊತ್ತಕ್ಕೆ ಕುಸಿದ ಶ್ರೀಲಂಕಾ; ಕರುಣಾರತ್ನೆ ಏಕಾಂಗಿ ಹೋರಾಟ

ಹೆನ್ರಿ, ಫರ್ಗ್ಯುಸನ್ ವಿಕೆಟ್ ಬೇಟೆ
Last Updated 1 ಜೂನ್ 2019, 13:10 IST
ಅಕ್ಷರ ಗಾತ್ರ

ಕಾರ್ಡಿಫ್: ಈ ಬಾರಿಯ ಟೂರ್ನಿಯ ಮತ್ತೊಂದು ಅಲ್ಪಮೊತ್ತದ ಆಟ ದಾಖಲಾಯಿತು.

ಶನಿವಾರ ಕಾರ್ಡಿಫ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ಎದುರು 29.2 ಓವರ್‌ಗಳಲ್ಲಿ 136 ರನ್‌ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ಮ್ಯಾಟ್ ಹೆನ್ರಿ (29ಕ್ಕೆ3) ಮತ್ತು ಲಾಕಿ ಫರ್ಗ್ಯುಸನ್ (22ಕ್ಕೆ3) ಅವರ ಸ್ವಿಂಗ್ ದಾಳಿಗೆ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಮಂಡಿಯೂರಿದರು.

ಆದರೆ, ನಾಯಕ ದಿಮುತ ಕರುಣಾರತ್ನೆ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಆರಂಭಿಕ ಬ್ಯಾಟ್ಸ್‌ಮನ್ ದಿಮುತ 84 ಎಸೆತಗಳನ್ನು ಎದುರಿಸಿ ಔಟಾಗದೆ 52 ರನ್‌ ಗಳಿಸಿದರು. ಅವರಿಗೆ ಕೇವಲ ನಾಲ್ಕು ಬೌಂಡರಿ ಗಳಿಸಲು ಮಾತ್ರ ಸಾಧ್ಯವಾಯಿತು. ಇಡೀ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ.

ಪಂದ್ಯದ ಎರಡನೇ ಎಸೆತದಲ್ಲಿಯೇ ವಿಕೆಟ್ ಗಳಿಸಿದ ಮ್ಯಾಟ್‌ ಹೆನ್ರಿ ತಮ್ಮ ತಂಡದ ಅಭಿಯಾನಕ್ಕೆ ಚಾಲನೆ ನೀಡಿದರು. ಅವರ ನೇರ ಎಸೆತವು ಎಡಗೈ ಬ್ಯಾಟ್ಸ್‌ಮನ್ ಲಾಹಿರು ತಿರಿಮಾನ್ನೆ ಅವರ ಪ್ಯಾಡ್‌ಗೆ ಅಪ್ಪಳಿಸಿತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇದರಿಂದಾಗಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಡಿಆರ್‌ಎಸ್ ಮೊರೆ ಹೋದರು. ತಿರಿಮಾನ್ನೆ ಔಟ್ ಎಂದು ತೀರ್ಪು ಹೊರಹೊಮ್ಮಿತು.

ಕುಶಾಲ ಪೆರೆರಾ (29 ರನ್) ಮತ್ತು ತಿಸಾರ ಪೆರೆರಾ (27 ರನ್) ಅವರಿಬ್ಬರೇ ಎರಡಂಕಿ ಮೊತ್ತ ದಾಖಲಿಸಿದರು. ಉಳಿಎ ಎಲ್ಲ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಇದರಿಂದಾಗಿ ತಂಡವು 60 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಕರುಣಾರತ್ನೆ ಒಬ್ಬರೇ ಹೋರಾಟ ಮುಂದುವರಿಸಿದರು. ಒಂದು ಕಡೆ ವಿಕೆಟ್‌ ಗಳು ಉರುಳುತ್ತಿದ್ದರೆ ಇನ್ನೊಂದೆಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಸಾಧ್ಯವಾದಷ್ಟೂ ವೇಗದಲ್ಲಿ ರನ್‌ಗಳನ್ನು ಗಳಿಸುವ ಒತ್ತಡ ಅವರ ಮೇಲಿತ್ತು. ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಅವರು ಕೊನೆಗೂ ಸಫಲರಾದರು.

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 105 ರನ್‌ಗಳಿಗೆ ಆಲೌಟ್‌ ಆಗಿತ್ತು. ವೆಸ್ಟ್‌ ಇಂಡೀಸ್ ತಂಡವು ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT