ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್ ಫಿಕ್ಸಿಂಗ್: ಮೌನ ಮುರಿದ ಧೋನಿ

ಚೆನ್ನೈ ಸೂಪರ್ ಕಿಂಗ್ಸ್‌ ಕುರಿತ ‘ರೋರ್ ಆಫ್ ದ ಲಯನ್’ ಸಾಕ್ಷ್ಯಚಿತ್ರದಲ್ಲಿ ಮನದಾಳ
Last Updated 21 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 2013ರ ಆವೃತ್ತಿಯ ಸಂದರ್ಭವು ನನ್ನ ಜೀವನದ ಅತ್ಯಂತ ಯಾತನಾಮಯ ಘಟನೆಯಾಗಿತ್ತು ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಹೇಳಿದ್ದಾರೆ.

ಇದರೊಂದಿಗೆ ಅವರು ಐಪಿಎಲ್ ಇತಿಹಾಸದ ಅತ್ಯಂತ ದೊಡ್ಡ ಹಗರಣವಾದ 2013ರ ಸ್ಪಾಟ್ ಫಿಕ್ಸಿಂಗ್ ಬಗ್ಗೆ ತಮ್ಮ ದೀರ್ಘ ಮೌನವನ್ನು ಮುರಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ಕುರಿತು ಸಿದ್ಧಪಡಿಸಲಾಗಿರುವ ‘ರೋರ್ ಆಫ್ ದ ಲಯನ್’ ಸಾಕ್ಷ್ಯಚಿತ್ರದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಪ್ರಕರಣದಲ್ಲಿ ಸೂಪರ್ ಕಿಂಗ್ಸ್‌ ತಂಡವು ಎರಡು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿತ್ತು. ಹೋದ ವರ್ಷ ಟೂರ್ನಿಗೆ ಮರಳಿದ್ದ ತಂಡವು ಚಾಂಪಿಯನ್ ಆಗಿತ್ತು.

‘2007ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್‌ ಹಂತದಲ್ಲಿಯೇ ಭಾರತವು ಸೋತು ಹೊರಬಂದಾಗ ಬಹಳ ಬೇಸರವಾಗಿತ್ತು. ಅಲ್ಲಿ ನಾವು ಚೆನ್ನಾಗಿ ಆಡಿರಲಿಲ್ಲ. ಆದ್ದರಿಂದ ನಿರಾಶೆ ಅನುಭವಿಸಿದ್ದೆವು. ಆದರೆ, ಅದಕ್ಕಿಂತಲೂ ಹೆಚ್ಚು ದುಃಖವಾಗಿದ್ದು ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಿಂದಾಗಿ’ ಎಂದು ಧೋನಿ ಹೇಳಿದ್ದಾರೆ.

‘ಅಪರಾಧಕ್ಕೆ ಶಿಕ್ಷೆಯಾಗಲೇಬೇಕು. ಆದರೆ, ಶಿಕ್ಷೆಯ ಪ್ರಮಾಣದ ರೀತಿಯ ಬಗ್ಗೆ ಸ್ವಲ್ಪ ಮಿಶ್ರಭಾವ ಇತ್ತು. ತಂಡವನ್ನು ಎರಡು ವರ್ಷ ನಿಷೇಧ ಮಾಡಿದ್ದು ನಾಯಕನಾಗಿ ನನಗೆ ಆಘಾತ ತಂದಿತ್ತು. ಇಡೀ ತಂಡದ ತಪ್ಪೇನು ಎಂಬ ಪ್ರಶ್ನೆ ಕಾಡಿತ್ತು. ನಮ್ಮ ಫ್ರ್ಯಾಂಚೈಸ್‌ನ ಕೆಲವರಿಂದ ತಪ್ಪಾಗಿದ್ದು ನಿಜ. ಆದರೆ ನಾವು ಆಟಗಾರರಿಂದ ಯಾವುದೇ ಅಪರಾಧವಾಗಿರಲಿಲ್ಲ’ ಎಂದಿದ್ದಾರೆ.

‘ಪ್ರಕರಣದಲ್ಲಿ ನನ್ನ ಹೆಸರು ಕೂಡ ಚರ್ಚೆಯಾಯಿತು. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಲಳ್ಲಿ ನಮ್ಮ ತಂಡದ ಬಗ್ಗೆ ಬಹಳಷ್ಟು ಸುದ್ದಿಗಳು ಬಂದವು. ಆದರೆ ಇದು ಹೇಗೆ ಸಾಧ್ಯ. ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಯಾರು ಬೇಕಾದರೂ ಭಾಗಿಯಾಗಿರಬಹುದು. ಅಂಪೈರ್, ಬ್ಯಾಟ್ಸ್‌ಮನ್, ಬೌಲರ್‌ ಹೀಗೆ. ಆದರೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಹಾಗಾಗುವುದಿಲ್ಲ. ಅದರಲ್ಲಿ ಬಹಳಷ್ಟು ಆಟಗಾರರು ಭಾಗಿಯಾಗಿರುತ್ತಾರೆ’ ಎಂದು ಧೋನಿ ಹೇಳಿದ್ದಾರೆ.

‘ನಾನು ಈ ಪ್ರಕರಣದ ಕುರಿತು ಯಾರೋಂದಿಗೂ ಚರ್ಚಿಸಲು ಇಷ್ಟಪಟ್ಟಿಲ್ಲ. ಆದ್ದರಿಂದ ಮೌನವಾಗಿದ್ದೆ. ಆದರೆ ಯಾವಾಗಲೂ ನನಗೆ ಒಳಗಿನಿಂದ ಆ ಘಟನೆಯು ಕೊರೆಯುತ್ತಿತ್ತು. ನನ್ನ ಆಟ ಮತ್ತು ಕ್ರಿಕೆಟ್‌ ಮೇಲೆ ಯಾವುದೇ ಕರಿನೆರಳು ಬರದಂತೆ ನೋಡಿಕೊಳ್ಳುವುದಷ್ಟೇ ಗುರಿಯಾಗಿತ್ತು. ಎಲ್ಲಕ್ಕಿಂತ ಮತ್ತು ಎಲ್ಲರಿಗಿಂತ ಕ್ರಿಕೆಟ್ ಮುಖ್ಯ. ನಾನು ಇವತ್ತು ಕ್ರಿಕೆಟ್‌ನಿಂದಾಗಿಯೇ ಬೆಳೆದಿದ್ದೇನೆ ’ ಎಂದು ಹೇಳಿದರು.

‘ಇಂತಹ ಪ್ರಕರಣಗಳು ನಡೆದಾಗ ಆಟಗಾರರ ಆಟದ ಮೇಲೆ ಪರಿಣಾಮವಾಗುತ್ತದೆ. ಆದರೆ ಇಂತಹುಗಳನ್ನು ತಲೆಯಲ್ಲಿಟ್ಟುಕೊಂಡರೆ ಉತ್ತಮವಾಗಿ ಆಡಲು ಸಾಧ್ಯವಾಗುವುದಿಲ್ಲ. ಇವತ್ತು ಪತ್ರಿಕಾಗೋಷ್ಠಿಯಲ್ಲಿ ಯಾರು ಏನು ಮಾತನಾಡಿದರು ಎಂಬುದು ಹತ್ತು ವರ್ಷಗಳ ನಂತರ ಜನರಿಗೆ ನೆನಪೂ ಇರುವುದಿಲ್ಲ. ಆದರೆ, ತಂಡದ ಸಾಧನೆ ಮತ್ತು ವೈಫಲ್ಯಗಳು ಸದಾ ಕಾಲ ನೆನಪಿನಲ್ಲಿ ಉಳಿಯುತ್ತವೆ’ ಎಂದರು.

2013ರ ಪ್ರಕರಣದಲ್ಲಿ ಸೂಪರ್‌ ಕಿಂಗ್ಸ್ ಫ್ರ್ಯಾಂಚೈಸ್‌ನ ಪದಾಧಿಕಾರಿ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ಥಾನ ರಾಯಲ್ಸ್‌ ತಂಡದ ಸಹಮಾಲೀಕ ರಾಜ್ ಕುಂದ್ರಾ ಅವರು ಆರೋಪಿಗಳಾಗಿದ್ದರು. ಆದ್ದರಿಂಎ ಎರಡೂ ತಂಡಗಳನ್ನು 2015 ರಿಂದ ಎರಡು ವರ್ಷಗಳವರೆಗೆ ಅಮಾನತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT