ಸೋಮವಾರ, ಜುಲೈ 4, 2022
21 °C
ಫಿಟ್‌ನೆಸ್‌ಗಾಗಿ ಬೈಸಿಕಲ್‌ ಸವಾರಿ

ಕುಂದಾನಗರಿಯಲ್ಲಿ ಸೈಕ್ಲಿಂಗ್, ಟ್ರೆಕ್ಕಿಂಗ್ ಕ್ರೇಜ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ದಿನ ದಿನಗಳಲ್ಲೂ ಬದುಕು ಬಯಸಿ ಉಸಿರಾಡುವಂಥವರು ನಾವು. ಇದಕ್ಕಾಗಿ ದೈಹಿಕವಾಗಿ ಸದೃಢವಾಗಿರಬೇಕು; ಬೆವರು ಹರಿಸಬೇಕು. ಫಿಟ್‌ನೆಸ್‌ ಕಾಪಾಡಿಕೊಳ್ಳಲೇಬೇಕು. ಇದಕ್ಕಾಗಿ ನಾವು ಸೈಕ್ಲಿಂಗ್‌ ಅಥವಾ ಟ್ರೆಕ್ಕಿಂಗ್ (ಚಾರಣ) ಮಾರ್ಗ ಆಯ್ದುಕೊಂಡಿದ್ದೇವೆ. ಪರಿಸರದೊಂದಿಗೆ ಬೆರೆತಿರಲು ಇಷ್ಟಪಡುತ್ತೇವೆ. ಕಾಡಿನಲ್ಲಿ ಸಿಗುವ ಶುದ್ಧ ಗಾಳಿ ಫಿಟ್‌ನೆಸ್‌ ವೃದ್ಧಿಸುವ ದೊಡ್ಡ ಶಕ್ತಿ’.

– ನಿಯಮಿತವಾಗಿ ಸೈಕ್ಲಿಂಗ್ ಮತ್ತು ಟ್ರೆಕ್ಕಿಂಗ್‌ ಮಾಡುವ ಬೆಳಗಾವಿಯ ಪರಿಸರಪ್ರೇಮಿಗಳ ತಂಡದ ಸದಸ್ಯ ನಿರಂಜನ ಪಾಟೀಲ ತಮ್ಮ ಫಿಟ್‌ನೆಸ್‌ ಮಂತ್ರದ ಕುರಿತು ಹೇಳುವುದು ಹೀಗೆ.

‌ವಿವಿಧ ಇಲಾಖೆಗಳ ಅಧಿಕಾರಿಗಳು, ಉದ್ಯಮಿಗಳು, ಹವ್ಯಾಸಿಗಳು ಈ ಕ್ರಿಯಾಶೀಲ ತಂಡದಲ್ಲಿದ್ದಾರೆ. ನಿರಂಜನ ಪಾಟೀಲ, ರಘುರಾಮ್‌ ನಿಡವಂದ, ದೀಪದ ದಡೋತಿ, ಸಂಜಯ ಲದಡ್, ಅನಿಲ್‌ ಶಹಾಪುರಕರ, ಮಹೇಶ್‌, ಸಂಜಯ್, ಅಮಿತ್, ಪ್ರಕಾಶ ಸೋನಲಾಲ್ಕರ್, ಸಂಗಮೇಶ್‌ ಪ್ರಭಾಕರ್‌... ಹೀಗೆ ಹಲವರು ಈ ತಂಡದಲ್ಲಿದ್ದಾರೆ. ಅವರ ಕುಟುಂಬದ ಬಾಲಕರೂ ಇವರೊಂದಿಗೆ ಸಾಹಸಕ್ಕೆ ಕೂಡಿಕೊಳ್ಳುತ್ತಾರೆ.

ಪ್ರಸನ್ನ ವಾತಾವರಣದಲ್ಲಿ

ಪಶ್ಚಿಮ ಘಟ್ಟದ ಸೆರಗಿನಲ್ಲಿ ಹರಡಿರುವ ಖಾನಾಪುರ, ದಾಂಡೇಲಿ ಕಡೆಗೆ ಕಿ.ಮೀ. ಗಟ್ಟಲೆ ಬೈಸಿಕಲ್‌ಗಳನ್ನು ಏರಿ ಹೊರಟು ಬಿಡುತ್ತಾರೆ. ಅಲ್ಲಿ, ಬೆಟ್ಟ, ಗುಡ್ಡಗಳನ್ನು ಹತ್ತಿ ಉತ್ತಮ ಪರಿಸರದಲ್ಲಿ ವಾರಾಂತ್ಯವನ್ನು ಅರ್ಥಪೂರ್ಣವಾಗಿ ಕಳೆಯುತ್ತಾರೆ. ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ನಡೆಯುವ ಈ ಬೈಸಿಕಲ್ ಸವಾರಿ ಅವರಿಗೆ ಫಿಟ್‌ನೆಸ್‌ ತಂದುಕೊಡುತ್ತಿದೆಯಂತೆ.

ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ಯೋಗ, ಪ್ರಾಣಾಯಾಮ, ವಾಕಿಂಗ್, ಜಾಗಿಂಗ್ ಮೂಲಕ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಒಂದೊಂದು ವಿಧಾನವಾದರೆ, ಸೈಕ್ಲಿಂಗ್‌ ಹಾಗೂ ಟ್ರೆಕ್ಕಿಂಗ್‌ ಕೂಡ ಬೆಳಗಾವಿಯಲ್ಲಿ ಟ್ರೆಂಡ್ ಆಗುತ್ತಿದೆ. ಹಲವು ಮಂದಿ ಹೀಗೆ ತಂಡ ತಂಡಗಳಾಗಿ ಸೈಕ್ಲಿಂಗ್‌ ಮಾಡುತ್ತಿರುತ್ತಾರೆ. ಒಮ್ಮೆ ಹೊರಟರೆ 80ರಿಂದ 90 ಕಿ.ಮೀ. ಹಾದಿಯನ್ನು ಅವರು ಕ್ರಮಿಸುತ್ತಾರೆ.

ಖಾನಾಪುರ, ಜಾಂಬೋಟಿ, ಶಿರೂರ ಡ್ಯಾಂ, ಕಾಡಂಚಿನ ಹಳ್ಳಿಗಳು, ದಾಂಡೇಲಿ ಮೊದಲಾದ ಕಡೆಗಳಿಗೆ ‌ಹೋಗುವ ಇವರು, ಉತ್ಸಾಹ ಹೆಚ್ಚಿಸಿಕೊಂಡು ವಾಪಸಾಗುತ್ತಾರೆ. ಕೆಲವರಿಗೆ ಇರುವ ಅಭ್ಯಾಸವೂ ಹೌದು; ಹವ್ಯಾಸವೂ ಹೌದು; ಆರೋಗ್ಯದ ಕಾಳಜಿ ಕೂಡ.

ತಪ್ಪು ಹೆಜ್ಜೆ ಕಡಿಮೆಯಾಗಲೆಂದು

ಇವರು ಸೈಕ್ಲಿಂಗ್ ಹೋದಾಗ ವಿಶೇಷವಾಗಿ ಕಾಡಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಸುವುದಿಲ್ಲ. ವನ್ಯಜೀವಿಗಳು, ಕಾಡಿನ ಮೇಲೆ ಪ್ರೀತಿಯುಳ್ಳವರಿವರು. ಅಲ್ಲಿ ವಾಸಿಸುವವರ ಬಗ್ಗೆ ಹೆಮ್ಮೆಯ ಭಾವನೆ ಹೊಂದಿರುವವರು. ಪರಿಸರಕ್ಕೆ ಮಾರಕವಾಗುವ ‘ತಪ್ಪು ಹೆಜ್ಜೆ’ಗಳನ್ನು ಕಡಿಮೆ ಇಡಬೇಕು, ಕಾರ್ಬನ್ ಬಳಕೆ ಕಡಿಮೆಯಾಗಬೇಕು ಎನ್ನುವ ಉದ್ದೇಶ–ಆಶಯ ಇವರದು.

‘ಸೈಕ್ಲಿಂಗ್, ಟ್ರೆಕ್ಕಿಂಗ್‌ನಿಂದ ದೈಹಿಕ ಹಾಗೂ ಮಾನಸಿಕವಾಗಿ ಬಹಳ ಅನುಕೂಲವಾಗಿದೆ. ಅಲಸ್ಯವನ್ನು ಹೋಗಲಾಡಿಸಿ, ಕ್ರಿಯಾಶೀಲವಾಗಿರಲು ಪೂರಕವಾಗಿದೆ. ಬೈಸಿಕಲ್‌ ಸಜ್ಜುಗೊಳಿಸಿಕೊಂಡು ಬೆಳ್ಳಂಬೆಳಿಗ್ಗೆಯೇ ಹೊರಟರೆ ಸಮಯ ಸಾಗುವುದು ಗೊತ್ತಾಗುವುದಿಲ್ಲ. ಒಂದಷ್ಟು ಡ್ರೈಫ್ರೂಟ್ಸ್‌, ಎನರ್ಜಿ ಡ್ರಿಂಕ್ಸ್‌ ಒಯ್ದಿರುತ್ತೇವೆ. ಪ್ರಶಾಂತ ವಾತಾವರಣದಲ್ಲಿ ಜಂಜಾಟಗಳನ್ನು ಮರೆಯುತ್ತೇವೆ’ ಎನ್ನುತ್ತಾರೆ ರಘುರಾಂ.

‘10 ಕಿ.ಮೀ. ದೂರವನ್ನು 46 ನಿಮಿಷಗಳಲ್ಲಿ ಓಡಿ ಕ್ರಮಿಸಬಲ್ಲೆ ಎನ್ನುವ ವಿಶ್ವಾಸ ಹಾಗೂ ಸಾಮರ್ಥ್ಯ ನನಗೆ ಬಂದಿದೆ. ಇದಕ್ಕೆ ನಿಯಮಿತವಾಗಿ ಸೈಕ್ಲಿಂಗ್ ಹಾಗೂ ಟ್ರೆಕ್ಕಿಂಗ್‌ ಮಾಡುತ್ತಿರುವುದು ಕಾರಣವಾಗಿದೆ. ಕನಿಷ್ಠ 10 ವರ್ಷವಾದರೂ ಪಿಂಚಣಿ ತೆಗೆದುಕೊಳ್ಳಬೇಕು, ಮುಂದಿನ ಜೀವನವನ್ನು ಅನುಭವಿಸಬೇಕು ಎನ್ನುವುದು ನನ್ನ ಆಸೆ. ಹೀಗಾಗಿ, ಕ್ರಿಯಾಶೀಲವಾಗಿರಲು ಸೈಕ್ಲಿಂಗ್‌ ಸಾಕಷ್ಟು ನೆರವಾಗುತ್ತಿದೆ. ಉತ್ಸಾಹದಿಂದ ಇರಲು ಸಾಧ್ಯವಾಗಿದೆ’ ಎಂದು ನಿರಂಜನ ಪಾಟೀಲ ಅನಿಸಿಕೆ ಹಂಚಿಕೊಂಡರು.

ಹಲವು ಅನುಕೂಲ

‘ಫಿಟ್‌ ಆಗಿರುವುದರಿಂದ ಹಾಗೂ ನಿಯಮಿತವಾಗಿ ಸೈಕ್ಲಿಂಗ್ ಮಾಡುವುದರಿಂದ ಏನೇ ಆಹಾರ (ಶಾಕಾಹಾರಿ) ಕೊಟ್ಟರೂ ತಿನ್ನುವುದಕ್ಕೆ ಹಿಂಜರಿಯುವುದಿಲ್ಲ. ಬೊಜ್ಜು ಕರಗಿಸುವ ವಿಧಾನ ಗೊತ್ತಿದೆಯಲ್ಲಾ, ಸೈಕ್ಲಿಂಗ್ ಇದೆಯಲ್ಲಾ?!’ ಎಂದು ವಿಶ್ವಾಸದಿಂದ ಹೇಳಿದರು.

ದೂರದವರೆಗೆ ಸೈಕ್ಲಿಂಗ್ ಮಾಡುವುದಕ್ಕೆ ಮುಖ್ಯವಾಗಿ ಮನೋಬಲ ಬೇಕು. ಶಿಸ್ತು ಇರಬೇಕು. ಎಲ್ಲರನ್ನೂ ಒಳಗೊಳ್ಳುವ, ಮೇಲು–ಕೀಳು ಇಲ್ಲ ಎನ್ನುವ ಮನೋಭಾವ ಅಗತ್ಯ ಎನ್ನುವುದು ಅವರ ಅನುಭವದ ಮಾತು. ಇದು, ಎಲ್ಲರೊಂದಿಗೂ ಬೆರೆಯುವ ವಿಶಾಲ ಮನೋಭಾವವನ್ನೂ ಕಲಿಸುತ್ತದೆ. ಹಿಂದೆ ಬಿದ್ದವರನ್ನು ಜೊತೆಯಲ್ಲಿ ಕರೆದೊಯ್ಯುವ, ಸಂಕಷ್ಟದ ಸಂದರ್ಭದಲ್ಲಿ ನೆರವಾಗುವ ಗುಣವೂ ಬೆಳೆಯುತ್ತದೆ ಎಂದು ಸೈಕ್ಲಿಂಗ್‌ನ ಇನ್ನೊಂದು ಅನುಕೂಲವನ್ನು ತೆರೆದಿಟ್ಟರು.‌

ಬೆಳಗಾವಿಯಲ್ಲಿ, ಇವರಂತೆಯೇ ಹಲವು ಮಂದಿ ಫಿಟ್‌ನೆಸ್‌ಗಾಗಿ ಸೈಕ್ಲಿಂಗ್‌, ಚಾರಣದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ವಾರಾಂತ್ಯಗಳಲ್ಲಿ ಈ ಸಾಹಸಯಾತ್ರೆಗಳು ನಡೆಯುತ್ತಲೇ ಇರುತ್ತವೆ. ಮಳೆಗಾಲ, ಚಳಿಗಾಲದಲ್ಲೂ ಈ ಕ್ರೇಜ್‌ ನಿಲ್ಲುವುದಿಲ್ಲ. ಏಕೆಂದರೆ, ಇದು  ಆರೋಗ್ಯಕ್ಕೆ ಪೂರಕವಾದ ಕ್ರೇಜ್‌!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು