ಗುರುವಾರ , ಡಿಸೆಂಬರ್ 5, 2019
24 °C

ಮೆಸ್ಸಿಗೆ ಬ್ಯಾಲನ್ ಡಿ‘ಓರ್: ಫುಟ್‌ಬಾಲ್ ಪ್ರೇಮಿಗಳ ಮನಗೆದ್ದ ಮ್ಯಾಡ್ರಿಕ್‌ ಟ್ವೀಟ್

Published:
Updated:

ದಾಖಲೆಯ ಆರನೇ ಬಾರಿ ಬ್ಯಾಲನ್‌ ಡಿ'ಒರ್‌ ಪ್ರಶಸ್ತಿ ಗೆದ್ದುಕೊಂಡಿರುವ ಅರ್ಜೆಂಟೀನಾ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರನ್ನು ಅಭಿನಂದಿಸಿ ಕ್ರೊವೇಷ್ಯಾದ ಲೂಕಾ ಮ್ಯಾಡ್ರಿಕ್‌ ಮಾಡಿರುವ ಟ್ವೀಟ್‌ ಫುಟ್‌ಬಾಲ್‌ ಅಭಿಮಾನಿಗಳ ಹೃದಯ ಗೆದ್ದಿದೆ.

ಫ್ರಾನ್ಸ್‌ ಫುಟ್‌ಬಾಲ್‌ ನಿಯತಕಾಲಿಕೆ ನೀಡುವ ಈ ಪ್ರಶಸ್ತಿ ಮೇಲೆ ಮೆಸ್ಸಿ ಹಾಗೂ ಪೋರ್ಚುಗಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ದಶಕಗಳಿಂದಲೂ ಹಿಡಿತ ಸಾಧಿಸಿದ್ದರು. ಅವರ ಅಧಿಪತ್ಯವನ್ನು ಕೊನೆಗಾಣಿಸಿದ್ದ ಮ್ಯಾಡ್ರಿಕ್‌ 2018ರಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಹೀಗಾಗಿ, ಪ್ಯಾರಿಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮ್ಯಾಡ್ರಿಕ್‌,  ಮೆಸ್ಸಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.

ಇದನ್ನೂ ಓದಿ: ರೊನಾಲ್ಡೊ ಹಿಂದಿಕ್ಕಿ 6ನೇ ಸಲ ಬ್ಯಾಲನ್‌ ಡಿ’ಓರ್‌ ಗೆದ್ದ ಮೆಸ್ಸಿ

ಆ ಸಂದರ್ಭದ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಮ್ಯಾಡ್ರಿಕ್‌, ‘ಕ್ರೀಡೆ ಮತ್ತು ಫುಟ್‌ಬಾಲ್‌ ಕೇವಲ ಗೆಲ್ಲುವುದಕ್ಕಾಗಿ ಮಾತ್ರವಲ್ಲ, ಅವು ಸಹ ಆಟಗಾರರನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಗೌರವಿಸುವುದಕ್ಕಾಗಿಯೂ ಇವೆ’ ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ ಸಾಕಷ್ಟು ವೈರಲ್‌ ಅಗಿದ್ದು, 1.77 ಲಕ್ಷ ಜನರು ಮೆಚ್ಚಿಕೊಂಡಿದ್ದಾರೆ. 29 ಸಾವಿರಕ್ಕೂ ಹೆಚ್ಚು ಜನರು ಮರು ಹಂಚಿಕೆ ಮಾಡಿಕೊಂಡಿದ್ದಾರೆ.

ಈ ಟ್ವೀಟ್‌ನಿಂದ ಸ್ಫೂರ್ತಿಗೊಂಡು ರಿಟ್ವೀಟ್‌ ಮಾಡಿಕೊಂಡಿರುವ ಬಾರ್ಸಿಲೋನಾ ಕ್ಲಬ್‌, ಮ್ಯಾಡ್ರಿಕ್‌ರನ್ನು ನಿಜವಾದ ಜಂಟಲ್‌ಮನ್‌ ಎಂದು ಸಂಬೋಧಿಸಿದೆ. ಮೆಸ್ಸಿ ಬಾರ್ಸಿಲೋನಾ ಕ್ಲಬ್‌ ಪರವೂ ಆಡುತ್ತಾರೆ.

ಈ ಬಾರಿ ಪ್ರಶಸ್ತಿಗಾಗಿ ಮೆಸ್ಸಿ, ರೊನಾಲ್ಡೊ ಹಾಗೂ ನೆದರ್ಲೆಂಡ್ಸ್‌ನ ವರ್ಜಿಲ್‌ ವ್ಯಾನ್‌ ಡಿಕ್‌ ನಡುವೆ ಪೈಪೋಟಿ ಇತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು