ಮಂಗಳವಾರ, ನವೆಂಬರ್ 24, 2020
21 °C
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ ನಿರ್ಧಾರ: ಫಿಫಾ ಪ್ರವೇಶಕ್ಕೆ ಅವಕಾಶದ ನಿರೀಕ್ಷೆ

ರೆಫರಿಗಳಿಗೆ ವಿಶೇಷ ಕೋಚ್‌ಗಳ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೆಫರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಸರಿಯಾದ ದಿಶೆಯಲ್ಲಿ ಹೆಜ್ಜೆ ಹಾಕುವಂತೆ ಮಾಡುವುದಕ್ಕಾಗಿ ವಿಶೇಷ ತರಬೇತಿ ನೀಡಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್‌) ಕೋಚ್‌ಗಳನ್ನು ನೇಮಕ ಮಾಡಿದೆ. ದೇಶದಲ್ಲಿ ಫುಟ್‌ಬಾಲ್‌ ಬೆಳವಣಿಗೆಯಲ್ಲಿ ರಾಷ್ಟ್ರೀಯ ಫೆಡರೇಷನ್ ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಇದನ್ನು ಫಿಫಾ ಮಾಜಿ ರೆಫರಿಯೂ ಆಗಿರುವ ಎಐಎಫ್‌ಎಫ್‌ ರೆಫರಿಗಳ ನಿರ್ದೇಶಕ ಜೆ.ರವಿಶಂಕರ್ ಬಣ್ಣಿಸಿದ್ದಾರೆ.

‘ಎಐಎಫ್‌ಎಫ್‌ ಟಿವಿ ಜೊತೆ ಗುರುವಾರ ಮಾತನಾಡಿದ ರವಿಶಂಕರ್ ’ಪ್ರತಿ ತಂಡಕ್ಕೂ ಒಬ್ಬ ಕೋಚ್ ಇರುತ್ತಾರೆ. ರೆಫರಿಗಳದೂ ಒಂದು ತಂಡವೇ. ಆದ್ದರಿಂದ ಈ ತಂಡಕ್ಕೂ ತರಬೇತುದಾರ ಇರುವುದು ಒಳ್ಳೆಯದು ಎಂದೆನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ರೆಫರಿ ಅಸೆಸರ್ (ಆರ್‌ಎ) ಪ್ರತಿ ಪಂದ್ಯದಲ್ಲೂ ರೆಫರಿಗಳ ಕಾರ್ಯವೈಖರಿಯನ್ನು ಗಮನಿಸುತ್ತಿರುತ್ತಾರೆ. ಈಗ, ಕೋಚ್‌ಗೂ ಮೌಲ್ಯಮಾಪನದ ಅವಕಾಶ ಸಿಗಲಿದೆ’ ಎಂದು ಅವರು ವಿವರಿಸಿದರು.

‘ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಸಂದರ್ಭದಲ್ಲಿ ಇಂಗ್ಲೆಂಡ್‌ನ ಪ್ರೊಫೆಷನಲ್ ಗೇಮ್‌ ಮ್ಯಾಚ್ ಅಫೀಷಿಯಲ್ಸ್ ಲಿಮಿಟೆಡ್ ಸಂಸ್ಥೆಯ ಕೋಚ್‌ಗಳು ಬರುತ್ತಿದ್ದರು. ಕೆಲವು ಪಂದ್ಯಗಳಲ್ಲಿ ರೆಫರಿಗಳ ಕಾರ್ಯವೈಖರಿಯನ್ನು ನೋಡಿ ವರದಿ ಸಲ್ಲಿಸುತ್ತಿದ್ದರು. ಈ ಮೌಲ್ಯಮಾಪನದ ವರದಿಯನ್ನು ರೆಫರಿಗಳ ಗಮನಕ್ಕೆ ತರಲಾಗುತ್ತಿತ್ತು. ವಿಡಿಯೊ ತುಣುಕುಗಳು ಮತ್ತು ಪೂರಕ ದಾಖಲೆಗಳನ್ನು ಆವರು ನೀಡುತ್ತಿದ್ದರು. ಅವರು ನೀಡುತ್ತಿದ್ದ ಮಾಹಿತಿಗಳಲ್ಲಿ ಟೀಕೆ ಇರುತ್ತಿರಲಿಲ್ಲ. ಗುಣಮಟ್ಟ ಹೆಚ್ಚಿಸಲು ಬೇಕಾದ ಸಲಹೆಗಳು ಮಾತ್ರ ಇರುತ್ತಿದ್ದವು. ಆದ್ದರಿಂದ ಅದೊಂದು ಉತ್ತಮ ವಿಧಾನವಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟರು. 

‘ಇತ್ತೀಚೆಗೆ ಫಿಫಾ ರೆಫರಿಗಳ ತಂಡದಲ್ಲಿ ಭಾರತದ ಸಾಕಷ್ಟು ರೆಫರಿಗಳಿಗೆ ಅವಕಾಶ ಸಿಗುತ್ತಿದೆ. ಆರು ರೆಫರಿಗಳು ಮತ್ತು ಎಂಟು ಮಂದಿ ಸಹಾಯಕ ರೆಫರಿಗಳು, ಮಹಿಳಾ ವಿಭಾಗದಿಂದ ತಲಾ ಇಬ್ಬರು ರೆಫರಿಗಳು ಮತ್ತು ಸಹಾಯಕ ರೆಫರಿಗಳಿಗೆ ಅವಕಾಶ ಇರುತ್ತದೆ. ಇದಕ್ಕಾಗಿ ಕಠಿಣ ಪರಿಶ್ರಮದ ಅಗತ್ಯವಿದೆ. ಈ ಪರಿಶ್ರಮಕ್ಕೆ ಪೂರಕವಾಗಿ ಎಐಎಫ್‌ಎಫ್‌ ಕೋಚ್‌ಗಳ ನೇಮಕ ಮಾಡಿದೆ. ಫಿಟ್‌ನೆಸ್ ಮತ್ತು ಅನುಭವವೇ ಆಯ್ಕೆಯ ಪ್ರಮುಖ ಮಾನದಂಡ. ಆದರೆ ಅವರು ಪಂದ್ಯ ನಿಯಂತ್ರಿಸಲು ಅಂಗಣದಲ್ಲಿ ತೋರುವ ಸಾಮರ್ಥ್ಯವನ್ನು ಪರಿಗಣಿಸಲು ಎಐಎಫ್‌ಎಫ್ ಮುಂದಾಗಿದೆ’ ಎಂದು ರವಿಶಂಕರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.