ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಆರ್ಮ್‌ಬ್ಯಾಂಡ್‌ಗೆ ₹ 55 ಲಕ್ಷ

Last Updated 2 ಏಪ್ರಿಲ್ 2021, 15:13 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್ (ಎಪಿ): ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊಹೋದ ವಾರ ನಡೆದಿದ್ದ ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ ಪಂದ್ಯದಲ್ಲಿ ಸಿಟ್ಟಿನಿಂದ ಬೀಸಾಕಿದ್ದ ಆರ್ಮ್‌ಬ್ಯಾಂಡ್‌ ಈಗ ₹ 55 ಲಕ್ಷಕ್ಕೆ ಮಾರಾಟವಾಗಿದೆ.

ಸರ್ಬಿಯಾದಲ್ಲಿ ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿರುವ ಆರು ತಿಂಗಳ ಗಂಡುಮಗುವಿನ ಚಿಕಿತ್ಸೆಗೆ ಈ ಹಣವನ್ನು ನೀಡಲಾಗಿದೆ ಎಂದು ಸರ್ಬಿಯನ್ ಸ್ಟೇಟ್ ಟಿವಿ ವರದಿ ಮಾಡಿದೆ.

ನೀಲಿ ಬಣ್ಣದ ಆರ್ಮ್‌ಬ್ಯಾಂಡ್‌ (ತೋಳುಪಟ್ಟಿ) ಅನ್ನು ಆನ್‌ಲೈನ್‌ನಲ್ಲಿ ಮಾನವಿಕ ಸಂಘಟನೆಯೊಂದು ಬಿಡ್ ಮಾಡಿತು. ಆದರೆ ಕೆಲವು ಕಿಡಿಗೇಡಿಗಳು ಬಿಡ್ ಪ್ರಕ್ರಿಯೆಗೆ ತಡೆಯೊಡ್ಡುವ ಪ್ರಯತ್ನ ಮಾಡಿದರು. ನಕಲಿ ಖಾತೆಗಳ ಮೂಲಕ ಅತಿ ದೊಡ್ಡ ಮೊತ್ತಗಳನ್ನು ಬಿಡ್ ಮಾಡಿದರು. ಸ್ಥಳೀಯ ಪೊಲೀಸರು ಅಂತಹವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹೋದ ಶನಿವಾರ ಇಲ್ಲಿ ನಡೆದಿದ್ದ ಪೂರ್ಚುಗಲ್ ಮತ್ತು ಸರ್ಬಿಯಾ ನಡುವಣ ಪಂದ್ಯವು 2–2ರಲ್ಲಿ ಸಮಬಲವಾಗಿತ್ತು. ಇಂಜುರಿ ಟೈಮ್‌ನಲ್ಲಿ ಗಳಿಸಿದ ಗೋಲಿಗೆ ರೆಫರಿ ಮಾನ್ಯತೆ ನೀಡದ ಕಾರಣ ರೊನಾಲ್ಡೊ ಅಂಗಣ ತೊರೆದು ಹೊರನಡೆದಿದ್ದರು. ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ಹಾದಿಯಲ್ಲಿ ಅಂಗಣದ ಟಚ್‌ಲೈನ್ ಬಳಿ ತಮ್ಮ ತೋಳುಪಟ್ಟಿಯನ್ನು ಕಿತ್ತು ಬೀಸಾಕಿದ್ದರು. ಆಗ ರೊನಾಲ್ಡೊ ನಡವಳಿಕೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಫಿಫಾ ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.

ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಅದನ್ನು ತೆಗೆದುಕೊಂಡು ಚಾರಿಟಿ ಸಂಸ್ಥೆಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT