ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್‌ ಗೇಮ್ಸ್‌ ಫುಟ್‌ಬಾಲ್‌ ಟೂರ್ನಿ:ಮೊದಲ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ

ಫುಟ್‌ಬಾಲ್‌: ಚೀನಾ ಎದುರು 1–5 ಗೋಲುಗಳ ಸೋಲು
Published 19 ಸೆಪ್ಟೆಂಬರ್ 2023, 17:09 IST
Last Updated 19 ಸೆಪ್ಟೆಂಬರ್ 2023, 17:09 IST
ಅಕ್ಷರ ಗಾತ್ರ

ಹಾಂಗ್‌ಝೌ: ಸೂಕ್ತ ತಯಾರಿ ಇಲ್ಲದೆಯೇ ಕಣಕ್ಕಿಳಿದ ಭಾರತ ತಂಡ, ಏಷ್ಯನ್‌ ಗೇಮ್ಸ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅತಿಥೇಯ ಚೀನಾ ಎದುರು 1–5 ಗೋಲುಗಳಿಂದ ಮುಗ್ಗರಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಗಿಯಾವೊ ತಿಯಾನ್‌ಯಿ (17ನೇ ನಿ.), ದಾಯ್ ವೆಯಿಜುನ್ (51 ನೇ ನಿ.), ತಾವೊ ಕ್ವಿಯಾಂಗ್‌ಲಾಂಗ್ (72 ಮತ್ತು 75ನೇ ನಿ.) ಮತ್ತು ಹಾವೊ ಫಾಂಗ್ (90+2) ಅವರು ಚೀನಾ ತಂಡದ ಪರ ಗೋಲು ಗಳಿಸಿದರು. ಭಾರತ ತಂಡದ ಏಕೈಕ ಗೋಲನ್ನು ರಾಹುಲ್‌ ಕೆ.ಪಿ (45+1) ಅವರು ಗಳಿಸಿದರು.

ಮುಂದಿನ ಹಂತ ಪ್ರವೇಶಿಸಬೇಕಾದರೆ ಭಾರತ ತಂಡವು ಗುಂಪಿನಲ್ಲಿ ಇನ್ನುಳಿದ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ತಂಡಗಳನ್ನು ಮಣಿಸಬೇಕು. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮ್ಯಾನ್ಮಾರ್‌ 4–2 ಗೋಲುಗಳಿಂದ ಬಾಂಗ್ಲಾದೇಶ ತಂಡವನ್ನು ಪರಾಭವಗೊಳಿಸಿತು.

ಭಾರತ ತಂಡದ ಆಟಗಾರರು ಸೋಮವಾರ ಸಂಜೆಯಷ್ಟೇ ‘ಕ್ರೀಡಾ ಗ್ರಾಮ’ ತಲುಪಿದ್ದರು. ಪ್ರಯಾಣದಿಂದ ಬಸವಳಿದಿದ್ದ ಆಟಗಾರರು ಸಾಕಷ್ಟು ವಿಶ್ರಾಂತಿ ಇಲ್ಲದೆಯೇ ಆಡಲಿಳಿದಿದ್ದರು.

ಮೊದಲ ಅವಧಿಯಲ್ಲಿ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡಿದ ಭಾರತ, ಎರಡನೇ ಅವಧಿಯಲ್ಲಿ ಆಟದ ಮೇಲಿನ ಹಿಡಿತ ಕೈಬಿಟ್ಟಿತು. ಸುನಿಲ್‌ ಚೆಟ್ರಿ ಮತ್ತು ಸಂದೇಶ್‌ ಜಿಂಗನ್‌ ಅವರನ್ನು ಹೊರತುಪಡಿಸಿದರೆ, ಮಂಗಳವಾರ ಕಣಕ್ಕಿಳಿದ ಆಟಗಾರರಲ್ಲಿ ಬಹುತೇಕ ಮಂದಿ ಅನನುಭವಿಗಳೇ ಆಗಿದ್ದರು. ಜಿಂಗನ್‌ ಅವರು ಎಂದಿನ ಲಯದಲ್ಲಿ ಆಡಲು ವಿಫಲರಾದರು.

ಚೆಟ್ರಿ 85 ನಿಮಿಷ ಕಣದಲ್ಲಿದ್ದರೂ, ಗೋಲು ಗಳಿಸಲು ಆಗಲಿಲ್ಲ. ಅವರಿಗೆ ನಿಖರ ಪಾಸ್‌ಗಳನ್ನು ನೀಡುವಲ್ಲಿ ಮಿಡ್‌ಫೀಲ್ಡರ್‌ಗಳು ಎಡವಿದರು. ಭಾರತದ ಪರ ರಾಹುಲ್‌ ಮಾತ್ರ ಗೋಲು ಗಳಿಸಲು ಯಶಸ್ವಿಯಾದರು. ಅಬ್ದುಲ್‌ ರಬೀಹ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಅವರು ಗುರಿ ಸೇರಿಸಿದರು.

ಏಷ್ಯನ್‌ ಗೇಮ್ಸ್‌ಗೆ ತಂಡದ ಆಯ್ಕೆ ಪ್ರಕ್ರಿಯೆ ವೇಳೆ ತಮ್ಮ ಆಟಗಾರರನ್ನು ಬಿಟ್ಟುಕೊಡಲು ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಹೆಚ್ಚಿನ ಕ್ಲಬ್‌ಗಳು ಹಿಂದೇಟು ಹಾಕಿದ್ದವು. ಈ ಕಾರಣ ಎಐಎಫ್‌ಎಫ್‌, ಅನುನುಭವಿಗಳೇ ಇರುವ ತಂಡವನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸಿದೆ.

ಏಷ್ಯನ್‌ ಗೇಮ್ಸ್‌ನ ಉದ್ಘಾಟನೆ ಸೆ.23 ರಂದು ನಡೆಯಲಿದೆಯಾದರೂ, ಫುಟ್‌ಬಾಲ್‌ ಸೇರಿದಂತೆ ಕೆಲವು ತಂಡ ಕ್ರೀಡೆಗಳು ಮುಂಚಿತವಾಗಿಯೇ ಶುರುವಾಗಿವೆ.

Cut-off box - ವಾಲಿಬಾಲ್‌ ತಂಡ ಶುಭಾರಂಭ ಭಾರತ ವಾಲಿಬಾಲ್‌ ತಂಡವು ಶುಭಾರಂಭ ಮಾಡಿತು. ಮಂಗಳವಾರ ನಡೆದ ಪುರುಷರ ವಿಭಾಗದ ‘ಸಿ’ ಗುಂಪಿನ ಪಂದ್ಯದಲ್ಲಿ 25–14 25–13 25–19 ರಿಂದ ಕಾಂಬೋಡಿಯ ವಿರುದ್ಧ ಗೆದ್ದಿತು. ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿರುವ ಪ್ರಬಲ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಈ ಬಾರಿ ಪುರುಷರ ವಿಭಾಗದಲ್ಲಿ ಒಟ್ಟು 19 ತಂಡಗಳು ಪಾಲ್ಗೊಂಡಿವೆ. ಜಪಾನ್‌ ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಪದಕ ಗೆಲ್ಲುವ ನೆಚ್ಚಿನ ತಂಡಗಳು ಎನಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT