ಮಂಗಳವಾರ, ಸೆಪ್ಟೆಂಬರ್ 22, 2020
25 °C

ಫಿಫಾ ವಿಶ್ವಕಪ್‌: ಏಷ್ಯನ್‌ ಅರ್ಹತಾ ಪಂದ್ಯಗಳು ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2022ರ ಫಿಫಾ ವಿಶ್ವಕಪ್‌ಗೆ ಏಷ್ಯಾ ತಂಡಗಳ ಅರ್ಹತೆಗಾಗಿ ಈ ವರ್ಷದ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ನಿಗದಿಯಾಗಿದ್ದ ಪಂದ್ಯಗಳು 2021ಕ್ಕೆ ಮುಂದೂಡಿಕೆಯಾಗಿವೆ. ಹೀಗಾಗಿ ಭಾರತ ಫುಟ್‌ಬಾಲ್‌ ತಂಡ ಈ ವರ್ಷ ಯಾವುದೇ ಟೂರ್ನಿಗಳಲ್ಲಿ ಆಡುತ್ತಿಲ್ಲ. ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌‌ (ಎಎಫ್‌ಸಿ), ಕೋವಿಡ್‌ ಹಿನ್ನೆಲೆಯಲ್ಲಿ ಬುಧವಾರ ಈ ನಿರ್ಧಾರ ತಳೆದಿದೆ.

ಕತಾರ್‌ನಲ್ಲಿ ನಿಗದಿಯಾಗಿರುವ 2022ರ ಪುರುಷರ ವಿಶ್ವಕಪ್‌ ಟೂರ್ನಿಯ ಹಾಗೂ 2023ರ ಏಷ್ಯಾಕಪ್‌‌ ಅರ್ಹತಾ ಪಂದ್ಯಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಭಾರತ ತಂಡ ತನ್ನ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಒಮನ್‌ ತಂಡದ ವಿರುದ್ಧ ಹೋದ ವರ್ಷದ ನವೆಂಬರ್‌ನಲ್ಲಿ ಆಡಿತ್ತು. ಮಸ್ಕತ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ಈ ಅರ್ಹತಾ ಪಂದ್ಯವನ್ನು 1–0ಯಿಂದ ಒಮನ್‌ ಗೆದ್ದುಕೊಂಡಿತ್ತು.

ವಿಶ್ವಕಪ್‌ನ ಮುಂಬರುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಭಾರತ ಕಳೆದುಕೊಂಡಿದ್ದರೂ, ಚೀನಾದಲ್ಲಿ ನಡೆಯಬೇಕಿರುವ 2023ರ ಏಷ್ಯಾಕಪ್‌ನಲ್ಲಿ ಸ್ಥಾನ ಗಳಿಸುವ ಲೆಕ್ಕಾಚಾರದಲ್ಲಿದೆ. ತವರಿನಲ್ಲಿ ಅಕ್ಟೋಬರ್‌ 8ರಂದು ಕತಾರ್‌ ಹಾಗೂ ನವೆಂಬರ್‌ನಲ್ಲಿ ಅಫ್ಗಾನಿಸ್ತಾನ ತಂಡವನ್ನು ಎದುರಿಸಬೇಕಿತ್ತು. ನವೆಂಬರ್‌ನಲ್ಲಿಯೇ ಬಾಂಗ್ಲಾದೇಶದ ವಿರುದ್ಧ ಅದರ ನೆಲದಲ್ಲೇ ಆಡಬೇಕಿತ್ತು. ಇ ಗುಂಪಿನಲ್ಲಿರುವ ಭಾರತ ತಂಡಕ್ಕೆ ಮೂರನೇ ಸ್ಥಾನ ಗಳಿಸಿದರೆ 2023ರ ಏಷ್ಯಾಕಪ್‌ ಅರ್ಹತಾ ಟೂರ್ನಿಗೆ ನೇರ ಪ್ರವೇಶ ಗಳಿಸುವ ಅವಕಾಶವಿದೆ.

‘ಕೋವಿಡ್‌–19 ಸೋಂಕು ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿರುವ ಸದ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವಕಪ್‌ ಹಾಗೂ ಎಎಫ್‌ಸಿ ಅರ್ಹತಾ ಪಂದ್ಯಗಳನ್ನು ಮುಂದೂಡಲು ಎರಡೂ ಮಂಡಳಿಗಳು ಜಂಟಿಯಾ‌ಗಿ ತೀರ್ಮಾನ ಕೈಗೊಂಡಿವೆ. 2021ರಲ್ಲಿ ಈ ಪಂದ್ಯಗಳನ್ನು ಮರು ನಿಗದಿ ಮಾಡಲಾಗುವುದು‘ ಎಂದು ಫಿಫಾ  ಹಾಗೂ ಎಎಫ್‌ಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಗುಂಪಿನಲ್ಲಿ ಭಾರತ ತಂಡ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಐದು ಪಂದ್ಯಗಳ ಮೂಲಕ ಮೂರು ಪಾಯಿಂಟ್ಸ್‌ಗಳನ್ನು ಕಲೆಹಾಕಿದೆ. 13 ಪಾಯಿಂಟ್ಸ್‌ ಹೊಂದಿರುವ ಕತಾರ್‌ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು