ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್‌ ಫುಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ಶೂಟೌಟ್‌ನಲ್ಲಿ ಹೊರಬಿದ್ದ ಫ್ರಾನ್ಸ್‌
Published 12 ಆಗಸ್ಟ್ 2023, 14:33 IST
Last Updated 12 ಆಗಸ್ಟ್ 2023, 14:33 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು 7–6 ರಿಂದ ಮಣಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡದವರು ಫಿಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.

ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೊಲಂಬಿಯ ಒಡ್ಡಿದ ಪ್ರಬಲ ಸವಾಲನ್ನು ಬದಿಗೊತ್ತಿದ್ದ (2–1) ಇಂಗ್ಲೆಂಡ್ ಕೂಡಾ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿತು.

ಬ್ರಿಸ್ಬೇನ್‌ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಆಸ್ಟ್ರೇಲಿಯಾ– ಫ್ರಾನ್ಸ್‌ ಪಂದ್ಯ  ರೋಚಕತೆಯಿಂದ ಕೂಡಿತ್ತು. ನಿಗದಿತ ಮತ್ತು ಹೆಚ್ಚುವರಿ ಅವಧಿಯ ಆಟದ ಬಳಿಕ ಉಭಯ ತಂಡಗಳು ಗೋಲುರಹಿತ ಡ್ರಾ ಸಾಧಿಸಿದ್ದವು.

ಪೆನಾಲ್ಟಿ ಶೂಟೌಟ್‌ನಲ್ಲೂ ಪಟ್ಟುಬಿಡದೆ ಪೈಪೋಟಿ ನಡೆಸಿದವು. ಇದರಿಂದ ಫಲಿತಾಂಶ ಹೊರಬರಲು ಎರಡೂ ತಂಡಗಳಿಗೆ 10 ಕಿಕ್‌ಗಳನ್ನು ತೆಗೆದುಕೊಳ್ಳಬೇಕಾಯಿತು.

ಒಂಬತ್ತು ಅವಕಾಶಗಳ ಬಳಿಕ 6–6 ರಲ್ಲಿ ಸಮಬಲ ಕಂಡುಬಂತು. ಫ್ರಾನ್ಸ್‌ ಪರ 10ನೇ ಕಿಕ್‌ ತೆಗೆದುಕೊಂಡ ವಿಕಿ ಬೆಕೊ ಚೆಂಡನ್ನು ಗುರಿ ಸೇರಿಸಲು ವಿಫಲರಾದರು. ಆಸ್ಟ್ರೇಲಿಯಾ ಪರ ಕೋಟ್ನಿ ವೈನ್‌ ಅವರು ಗೋಲು ಗಳಿಸಿ ಆತಿಥೇಯ ಪ್ರೇಕ್ಷಕರ ಸಂಭ್ರಮಕ್ಕೆ ಕಾರಣರಾದರು.

ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿರುವ ಕೊಲಂಬಿಯ ತಂಡ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ಒಡ್ಡಿತು. ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಆಡಿದ ಕೊಲಂಬಿಯ, 44ನೇ ನಿಮಿಷದಲ್ಲಿ ಲೀಸಿ ಸ್ಯಾಂಟೊಸ್‌ ಗಳಿಸಿದ ಗೋಲಿನ ನೆರವಿನಿಂದ ಮುನ್ನಡೆ ಗಳಿಸಿತು.

ಆದರೆ ಮೊದಲಾರ್ಧದ ಇಂಜುರಿ ಅವಧಿಯಲ್ಲಿ (45+7) ಲಾರೆನ್‌ ಹೆಂಪ್‌ ಅವರು ಇಂಗ್ಲೆಂಡ್‌ಗೆ ಸಮಬಲದ ಗೋಲು ತಂದಿತ್ತರೆ, 63ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಅಲೆಸ್ಸಿಯಾ ರುಸೊ ಗೆಲುವಿಗೆ ಕಾರಣರಾದರು.

ಕೊನೆಯ ನಿಮಿಷಗಳಲ್ಲಿ ಕೊಲಂಬಿಯ ಸಮಬಲದ ಗೋಲು ಗಳಿಸಲು ನಡೆಸಿದ ಪ್ರಯತ್ನಗಳನ್ನು ಇಂಗ್ಲೆಂಡ್‌ ಗೋಲ್‌ಕೀಪರ್‌ ಮತ್ತು ಡಿಫೆಂಡರ್‌ಗಳು ತಡೆಯುವಲ್ಲಿ ಯಶಸ್ವಿಯಾದರು.

ಸೆಮಿಫೈನಲ್‌ ಪಂದ್ಯಗಳು

ಆ.15: ಸ್ಪೇನ್‌–ಸ್ವೀಡನ್ (ಆರಂಭ: ಮಧ್ಯಾಹ್ನ 1.30)

ಆ.16: ಆಸ್ಟ್ರೇಲಿಯಾ– ಇಂಗ್ಲೆಂಡ್‌ (ಆರಂಭ: ಮಧ್ಯಾಹ್ನ 3.30)

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT