ಬುಧವಾರ, ಜನವರಿ 29, 2020
30 °C

ಬಿಡಿಎಫ್‌ಎ ಮಹಿಳಾ ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡವು ಕರ್ನಾಟಕ ಮಹಿಳಾ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ 4–1 ಗೋಲುಗಳಿಂದ ಬೆಂಗಳೂರು ಸಾಕರ್‌ ಗ್ಯಾಲಕ್ಸಿ ತಂಡವನ್ನು ಮಣಿಸಿತು.

ವಿಜಯೀ ತಂಡದ ಬಿಬಿ ನೌಶೀಬ್‌ ಮಮೋದ್‌ (6), ಚಾಮುಂಡೇಶ್ವರಿ (53) ಮತ್ತು ವಿ.ರೆಂಗುಗಾ (70) ತಲಾ ಒಂದು ಗೋಲು ಹೊಡೆದರು. ಬೆಂಗಳೂರು ಸಾಕರ್‌ ತಂಡದ ನೀಲಿ 15ನೇ ನಿಮಿಷದಲ್ಲಿ ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಕಿಕ್‌ಸ್ಟಾರ್ಟ್‌ ತಂಡದ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.

ದಿನದ ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ಯುನೈಟೆಡ್‌ ಎಫ್‌ಸಿ 1–0 ಗೋಲಿನಿಂದ ಮಂಗಳೂರು ಯುನೈಟೆಡ್‌ ಎಫ್‌ಸಿ ತಂಡವನ್ನು ಸೋಲಿಸಿತು.

33ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅಂಜಲಿ ಹಿಂಡಾಲ್ಗೇಕರ್‌ ಅವರು ಬೆಳಗಾವಿ ತಂಡದ ಗೆಲುವಿನ ರೂವಾರಿಯಾದರು.

ಪರಿಕ್ರಮ ಎಫ್‌ಸಿ ಮತ್ತು ಮಿಸಾಕ ಯುನೈಟೆಡ್‌ ಎಫ್‌ಸಿ ನಡುವಣ ಪಂದ್ಯವು 1–1 ಗೋಲುಗಳಿಂದ ಸಮಬಲವಾಯಿತು. 

ಮಿಸಾಕ ತಂಡದ ಪಿ.ಮಾಳವಿಕ 53ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಜೂದಿತ್‌ ಸೋನಾಲಿ ಜಾನ್‌ 90+2ನೇ ನಿಮಿಷದಲ್ಲಿ ಗೋಲು ಹೊಡೆದು ಪರಿಕ್ರಮ ತಂಡದ ಸೋಲು ತಪ್ಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು