ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಮಣಿದ ಚೆನ್ನೈಯಿನ್‌

ಇಂಡಿಯನ್‌ ಸೂಪರ್‌ ಲೀಗ್‌: ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ
Published 7 ಫೆಬ್ರುವರಿ 2024, 18:31 IST
Last Updated 7 ಫೆಬ್ರುವರಿ 2024, 18:31 IST
ಅಕ್ಷರ ಗಾತ್ರ

ಬೆಂಗಳೂರು: ರಿಯಾನ್ ವಿಲಿಯಮ್ಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ 1–0ಯಿಂದ ಚೆನ್ನೈಯಿನ್‌ ಎಫ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಿಯಾನ್‌ ಅವರು 62ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು. ಈ ಗೆಲುವಿನಿಂದಿಗೆ ಬಿಎಫ್‌ಸಿ ತಂಡವು ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಈತನಕ 14 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ ಮೂರರಲ್ಲಿ ಗೆಲುವು ಪಡೆದಿದೆ. ಐದು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರೆ, ಉಳಿದ ಆರರಲ್ಲಿ ಸೋತು ಒಟ್ಟು 14 ಪಾಯಿಂಟ್‌ ಸಂಪಾದಿಸಿದೆ. ಚೆನ್ನೈಯಿನ್‌ ತಂಡವು ಆಡಿರುವ 13 ಪಂದ್ಯಗಳಲ್ಲಿ ತಲಾ ಮೂರು ಪಂದ್ಯಗಳಲ್ಲಿ ಜಯ ಹಾಗೂ ಡ್ರಾ ಸಾಧಿಸಿದ್ದರೆ, ಉಳಿದ 7 ಪಂದ್ಯಗಳಲ್ಲಿ ಪರಾಭವಗೊಂಡು 12 ಅಂಕದೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಹೈದರಾಬಾದ್‌ ಎಫ್‌ಸಿಯಿಂದ ಈಚೆಗೆ ಬಿಎಫ್‌ಸಿ ತೆಕ್ಕೆಗೆ ಬಂದ ನಿಖಿಲ್‌ ಪೂಜಾರಿ ಮತ್ತು ಚಿಂಗಂಬಮ್ ಶಿವಾಲ್ಡೋ ಸಿಂಗ್‌ ಅವರಿಗೆ ಪಂದ್ಯ ಆರಂಭದ ಅವಕಾಶವನ್ನು ಬಿಎಫ್‌ಸಿ ಮುಖ್ಯ ಕೋಚ್‌ ಗೆರಾರ್ಡ್ ಜರಗೋಜಾ ಕಲ್ಪಿಸಿದರು. ಆದರೆ, ತಂಡಕ್ಕೆ ಈಚೆಗೆ ಸೇರಿಕೊಂಡ ಡೆನ್ಮಾರ್ಕ್‌ನ ಆಲಿವರ್ ಡ್ರೋಸ್ಟ್ ಬದಲಿ ಆಟಗಾರರಾಗಿ ಉಳಿದರು.

ಪಂದ್ಯದ ಆರಂಭದಿಂದಲೂ ರಕ್ಷಣಾತ್ಮಕವಾಗಿ ಆಟವಾಡಿದ ಬಿಎಫ್‌ಸಿ ಆಟಗಾರರಿಗೆ ಎದುರಾಳಿ ಆಟಗಾರರು ತೀವ್ರ ಸವಾಲು ಒಡ್ಡಿದರು. ಒಂದು ಹಂತದಲ್ಲಿ ಚೆನ್ನೈಯಿನ್‌ನ ಆಕಾಶ್ ಸಾಂಗ್ವಾನ್ ಮತ್ತು ರಹೀಮ್ ಅಲಿ ಅವರು ನಿಖಿಲ್‌ ಅವರನ್ನು ಬಲಭಾಗದಿಂದ ಸತಾಯಿಸಿದರು. ಆದರೆ, ಆತಿಥೇಯ ತಂಡದ ರೈಟ್ ಬ್ಯಾಕ್‌ ಆಟಗಾರ ರಕ್ಷಣಾತ್ಮಕವಾಗಿ ಚಾಣಾಕ್ಷ ಮೆರೆದರು. ಈ ಮಧ್ಯೆ ಜಾವಿ ಹೆರ್ನಾಂಡೆಜ್ ಅವರು ಫ್ರೀ ಕಿಕ್‌ನಲ್ಲಿ ಒದ್ದ ಚೆಂಡನ್ನು ಸುನಿಲ್‌ ಚೆಟ್ರಿ ಸಂಪರ್ಕಿಸಲು ವಿಫಲವಾಗಿ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಹೀಗಾಗಿ, ಮೊದಲಾರ್ಧದ ಪಂದ್ಯ ಗೋಲುರಹಿತವಾಗಿ ಮುಕ್ತಾಯವಾಯಿತು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ಆಟಗಾರರು ಮೇಲುಗೈ ಸಾಧಿಸಲು ಬಿರುಸಿನ ಹೋರಾಟ ನಡೆಸಿದರು. ಈ ಮಧ್ಯೆ ರಿಯಾನ್‌ ಬಿಎಫ್‌ಸಿ ತಂಡಕ್ಕೆ ಮುನ್ನಡೆ ಒದಗಿಸಿದ ಬಳಿಕ ಚೆನ್ನೈಯಿನ್‌ ಆಟಗಾರರು ಸಮಬಲಕ್ಕಾಗಿ ಪ್ರಬಲ ಬದಲಾವಣೆಯೊಂದಿಗೆ ಪ್ರತಿರೋಧ ತೋರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT