ಗುರುವಾರ , ಜನವರಿ 21, 2021
18 °C
ಐಎಸ್‌ಎಲ್‌: ನೌಶಾದ್ ಮೂಸಾ ಮಾರ್ಗದರ್ಶನ: ಚೆಟ್ರಿ ಪಡೆಗೆ ಈಸ್ಟ್ ಬೆಂಗಾಲ್ ಎದುರಾಳಿ

ಹಂಗಾಮಿ ಕೋಚ್ ಮಾರ್ಗದರ್ಶನದಲ್ಲಿ ಬಿಎಫ್‌ಸಿಗೆ ‘ಹೊಸ’ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಸತತ ಮೂರು ಸೋಲುಗಳ ಬೆನ್ನಲ್ಲೇ ಕೋಚ್‌ ಕಾರ್ಲಸ್ ಕ್ವದ್ರತ್‌ ತಂಡವನ್ನು ತೊರೆದು ಹೋದ ನಂತರ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಹೊಸ ಸವಾಲಿಗೆ ಸಜ್ಜಾಗಿದೆ. ಹಂಗಾಮಿ ಮುಖ್ಯ ಕೋಚ್ ನೌಶಾದ್ ಮೂಸಾ ಮಾರ್ಗದರ್ಶನದಲ್ಲಿ ಮೊದಲ ಬಾರಿ ಸುನಿಲ್ ಚೆಟ್ರಿ ಬಳಗ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹೊಸ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಬಿಎಫ್‌ಸಿ ಸೆಣಸಲಿದೆ. 

‘ಇದು ತಂಡಕ್ಕೆ ಬಹಳ ಮುಖ್ಯ ಪಂದ್ಯ. ಆಟಗಾರರೆಲ್ಲರಿಗೂ ಅದು ಚೆನ್ನಾಗಿ ಗೊತ್ತಿದೆ. ತಂಡದ ಈ ವರೆಗಿನ ದಾರಿಯಲ್ಲಿ ಇದೇ ಮೊದಲ ಬಾರಿ ಸತತ ಮೂರು ಪಂದ್ಯಗಳನ್ನು ಸೋತಿದೆ. ಈ ಕಹಿಯನ್ನು ಅರಗಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಆದರೂ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. ನಾಳಿನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ’ ಎಂದು ಮೂಸಾ ಹೇಳಿದರು.

ಈಸ್ಟ್ ಬೆಂಗಾಲ್ ತನ್ನ ಮೊದಲ ಪ್ರಯತ್ನದಲ್ಲಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುತ್ತಿಲ್ಲ. ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದ ತಂಡ  ಎಂಟನೇ ಪಂದ್ಯದಲ್ಲಿ ಮೊದಲ ಜಯ ಸಾಧಿಸಿತ್ತು. ಒಡಿಶಾ ಎಫ್‌ಸಿಯನ್ನು 3–1ರಿಂದ ಮಣಿಸಿದ ತಂಡ ಕಳೆದ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ 1–1ರಿಂದ ಡ್ರಾ ಸಾಧಿಸಿತ್ತು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋತಿಲ್ಲ ಎಂಬುದು ವಿಶೇಷ. ಹೀಗಾಗಿ ಅದು ಅಪಾಯಕಾರಿ ಎಂಬುದನ್ನು ಮೂಸಾ ಒಪ್ಪಿಕೊಂಡಿದ್ದಾರೆ.   

ಸತತ ಗೋಲುಗಳನ್ನು ಬಿಟ್ಟುಕೊಟ್ಟಿರುವುದು ಬಿಎಫ್‌ಸಿಯ ವೈಫಲ್ಯಕ್ಕೆ ಪ್ರಮುಖ ಕಾರಣ. ಸುನಿಲ್ ಚೆಟ್ರಿ ಒಳಗೊಂಡಂತೆ ಫಾರ್ವರ್ಡ್ ವಿಭಾಗಕ್ಕೆ ನಿರೀಕ್ಷೆಗೆ ತಕ್ಕಂತೆ ಮಿಂಚಲು ಆಗಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಾಣಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಸಾ ಹೇಳಿದ್ದಾರೆ. ಫಾರ್ವರ್ಡ್ ವಿಭಾಗದಲ್ಲಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಲಾಗುವುದು, ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಲು ‍ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಫ್‌ಸಿ ಗೋವಾ ಮೇಲಿನ ಡ್ರಾ ನಂತರ ಈಸ್ಟ್ ಬೆಂಗಾಲ್ ತಂಡದ ವಿಶ್ವಾಸ ವೃದ್ಧಿಸಿದೆ. ಗೋವಾ ವಿರುದ್ಧದ ಪಂದ್ಯದಲ್ಲಿ ಒಬ್ಬ ಆಟಗಾರ ರೆಡ್ ಕಾರ್ಡ್ ಪಡೆದು ಹೊರನಡೆದಿದ್ದರೂ ಸೋಲಿನಿಂದ ಪಾರಾಗುವಲ್ಲಿ ಅದು ಯಶಸ್ವಿಯಾಗಿತ್ತು. ಎಲ್ಲ ಪಂದ್ಯಗಳಲ್ಲೂ ಮಿಂಚಿರುವ ಮತ್ತು ತಂಡಕ್ಕೆ ಗೋಲುಗಳನ್ನು ತಂದುಕೊಟ್ಟಿರುವ ಬ್ರೈಟ್ ಎನೊಬಖಾರೆ ಅವರ ಮೇಲೆ ಭರವಸೆ ಹೆಚ್ಚಿದ್ದು ಬಿಎಫ್‌ಸಿ ವಿರುದ್ಧವೂ ಅವರು ಕೈ ಹಿಡಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದೆ. 

ಸತತ ಎರಡು ಬಾರಿ ಎಚ್ಚರಿಕೆಗೆ ಒಳಗಾಗಿರುವ ಈಸ್ಟ್ ಬೆಂಗಾಲ್ ಕೋಚ್ ರಾಬಿ ಫಾವ್ಲರ್ ಶನಿವಾರ ತಂಡದೊಂದಿಗೆ ಇರುವುದಿಲ್ಲ. ನಾಯಕ ಡ್ಯಾನ್ ಫಾಕ್ಸ್ ಕೂಡ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಬಿಎಫ್‌ಸಿ ವಿರುದ್ಧದ ಪಂದ್ಯಕ್ಕೆ ತಂಡ ಯಾವ ತಂತ್ರವನ್ನು ಅನುಸರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕುತೂಹಲದ ವಿಷಯವೆಂದರೆ, ಬಿಎಫ್‌ಸಿಯಲ್ಲಿ ಆಡುತ್ತಿರುವ ಈಸ್ಟ್ ಬೆಂಗಾಲ್ ತಂಡದ ಮಾಜಿ ಆಟಗಾರ ಹರ್ಮನ್‌ಜ್ಯೋಗ್ ಖಾಬ್ರಾ ಅವರೂ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು