ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಅಗ್ರ ತಂಡಗಳ ಕುತೂಹಲಕಾರಿ ಹಣಾಹಣಿ

ಬಿಎಫ್‌ಸಿಗೆ ಮುಂಬೈ ಸಿಟಿ ಎಫ್‌ಸಿ ಸವಾಲು: ಸಂಧು, ಅಮರಿಂದರ್‌ ಆಕರ್ಷಣೆ
Last Updated 8 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ತಂಡಗಳ ಹಣಾಹಣಿ ನಗರದ ಫುಟ್‌ಬಾಲ್‌ ಪ್ರಿಯರಿಗೆ ಭಾನುವಾರ ರೋಮಾಂಚನ ನೀಡಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ.

ಪಾಯಿಂಟ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಬಿಎಫ್‌ಸಿ ಈ ಬಾರಿ ಒಂದು ಪಂದ್ಯವನ್ನೂ ಸೋಲದೆ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಮುಂಬೈ ಸಿಟಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ತಂಡ ಕಳೆದ ಆರು ಪಂದ್ಯಗಳಲ್ಲಿ ಅಜೇಯವಾಗಿದೆ. ಈ ಪೈಕಿ ಐದನ್ನು ಗೆದ್ದಿದೆ. ಆಕ್ರಮಣ ಮತ್ತು ರಕ್ಷಣಾ ವಿಭಾಗಗಳೆರಡರಲ್ಲೂ ಎರಡೂ ತಂಡಗಳು ಬಲಿಷ್ಠವಾಗಿವೆ. ಆದ್ದರಿಂದ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಛಲ ಬಿಡದೆ ಕಾದಾಡುವ ಗುಣವನ್ನು ಮೈಗೂಡಿಸಿಕೊಂಡಿರುವ ಬಿಎಫ್‌ಸಿ, ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸಿ ಪಂದ್ಯಕ್ಕೆ ತಿರುವು ನೀಡುವ ಸಾಮರ್ಥ್ಯ ಹೊಂದಿದೆ. ಈ ವರೆಗೆ ಗಳಿಸಿರುವ ಒಟ್ಟು 16 ಗೋಲುಗಳ ಪೈಕಿ ಆರನ್ನು ಕೊನೆಯ 20 ನಿಮಿಷಗಳ ಅವಧಿಯಲ್ಲಿ ಗಳಿಸಿದೆ. ಗಾಯಗೊಂಡಿರುವ ಮಿಕು ಅವರ ಅನುಪಸ್ಥಿತಿಯಲ್ಲೂ ತಂಡ ಆಕ್ರಮಣದಲ್ಲಿ ಲಯವನ್ನು ಕಾಯ್ದುಕೊಂಡಿದೆ.

ಮುಂಬೈ ಸಿಟಿ ಎಫ್‌ಸಿ 2014 ಮತ್ತು 2016ರ ಸಾಲಿನಲ್ಲಿ ಉತ್ತಮ ರಕ್ಷಣಾ ವಿಭಾಗವನ್ನು ಹೊಂದಿರುವ ತಂಡ ಎಂಬ ಹೆಸರು ಗಳಿಸಿತ್ತು. ಈ ಬಾರಿಯೂ ಇದೇ ಹಾದಿಯಲ್ಲಿ ತಂಡ ಸಾಗುತ್ತಿದ್ದು ಆಡಿರುವ 10 ಪಂದ್ಯಗಳಲ್ಲಿ 10 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ಏಳು ಪಂದ್ಯಗಳಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡಲಿಲ್ಲ. ಕಳೆದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೋಲು ಬಿಟ್ಟುಕೊಡಲಿಲ್ಲ. ಬಿಎಫ್‌ಸಿ ಕೂಡ ರಕ್ಷಣೆಯಲ್ಲಿ ಸುಲಭವಾಗಿ ಮಣಿಯುವ ತಂಡವಲ್ಲ. ಒಂಬತ್ತು ಪಂದ್ಯಗಳಲ್ಲಿ ಏಳು ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡ ಮೂರು ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT