ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಜಿಯಂಗೆ ’ಉಡುಗೊರೆ’ ಬ್ರೆಜಿಲ್‌ಗೆ ‘ಬರೆ’

ಖಳನಾಯಕನಾದ ಫರ್ನಾಂಡಿನೊ * ಸೆಮಿಫೈನಲ್‌ಗೆ ‘ಕಪ್ಪು ಕುದುರೆ’ ಬೆಲ್ಜಿಯಂ
Last Updated 7 ಜುಲೈ 2018, 20:14 IST
ಅಕ್ಷರ ಗಾತ್ರ

ಕಜನ್‌: ನಾಲ್ಕು ವರ್ಷಗಳ ಹಿಂದಿನ ಸೆಮಿಫೈನಲ್‌ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲನ್ನು ಮರೆತು ಆರನೇ ಬಾರಿ ವಿಶ್ವಕಪ್‌ ಎತ್ತಿ ಹಿಡಿಯುವ ಬ್ರೆಜಿಲ್‌ ತಂಡದ ಕನಸು ನುಚ್ಚುನೂರಾಯಿತು. ಹಿಂದಿನ ವಿಶ್ವಕಪ್‌ನಲ್ಲಿ ಆ‌ದಂತೆ ಈ ಬಾರಿಯೂ ಬ್ರೆಜಿಲ್‌, ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿತ್ತು.

ಇಲ್ಲಿನ ಕಜನ್‌ ಅರೆನಾದಲ್ಲಿ ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಈ ಸಲದ ಟೂರ್ನಿಯ ‘ಕಪ್ಪು ಕುದುರೆ’ಗಳೆಂದೇ ಪರಿಗಣಿತವಾಗಿರುವ ಬೆಲ್ಜಿಯಂ ತಂಡವು ಸಾಂಬಾ ಪಡೆಯನ್ನು 2–1 ಗೊಲುಗಳಿಂದ ಮಣಿಸಿತು. ಬ್ರೆಜಿಲ್‌ನ ಫರ್ನಾಂಡಿನೊ ನೀಡಿದ ಉಡುಗೊರೆ ಗೋಲು ಹಾಗೂ ಕೆವಿನ್‌ ಡಿ ಬ್ರುಯ್ನ್‌ ಅವರು ಗಳಿಸಿದ ಅಮೋಘ ಗೋಲಿನ ನೆರವಿನಿಂದವಿಶ್ವಕಪ್‌ ಇತಿಹಾಸದಲ್ಲಿ ಬೆಲ್ಜಿಯಂ ತಂಡವು ಎರಡನೇ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿತು.

ರೋಚಕ ಹಣಾಹಣಿಗೆ ಸಾಕ್ಷಿಯಾದ ಪಂದ್ಯದ ಮೊದಲಾರ್ಧದಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಬೆಲ್ಜಿಯಂ ಶ್ರೇಷ್ಠ ಆಟ ಆಡಿತು.

ಹಿಂದಿನ 15 ಪಂದ್ಯಗಳಲ್ಲಿ ಸೋಲು ಅನುಭವಿಸದ ಬ್ರೆಜಿಲ್‌ ತಂಡವು ವಿಶ್ವಾಸದಲ್ಲೇ ಅಂಗಳಕ್ಕಿಳಿದಿತ್ತು. ಬಲಿಷ್ಠ ಅಟ್ಯಾಕಿಂಗ್‌ ವಿಭಾಗ ಹೊಂದಿರುವ ಬೆಲ್ಜಿಯಂ ತಂಡವು ಪಂದ್ಯದ ಆರಂಭದಿಂದಲೂ ಎಚ್ಚರಿಕೆಯ ಆಟ ಆಡಿತು. ಪಂದ್ಯದ 13ನೇ ನಿಮಿಷದಲ್ಲಿ ‘ಕಪ್ಪು ಕುದುರೆ’ಗಳ ಅದೃಷ್ಟದ ಬಾಗಿಲು ತೆರೆಯಿತು. ಎಡ ಕಾರ್ನರ್‌ನಿಂದ ಬಂದ ಚೆಂಡನ್ನು ತಡೆಯಲು ಹೋಗಿ ಹೆಡರ್‌ ಮಾಡಿದ ಬ್ರೆಜಿಲ್‌ನ ಫರ್ನಾಂಡಿನೊ ಅವರು ‘ಉಡುಗೊರೆ’ ಗೋಲು ನೀಡಿದರು. ಇದರಿಂದಾಗಿ ಬೆಲ್ಜಿಯಂ 1–0ಯಿಂದ ಮುನ್ನಡೆ ಗಳಿಸಿತು.

ಅನೇಕ ಬಾರಿ ಬ್ರೆಜಿಲ್‌ನ ಯುವ ಪಡೆಯಿಂದ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಬೆಲ್ಜಿಯಂ ಸಫಲವಾಯಿತು. ಇದೇ ವೇಳೆ, ನಾಲ್ಕು ಗೋಲು ಗಳಿಸಿ ಚಿನ್ನದ ಬೂಟು ಪ್ರಶಸ್ತಿ ಗೆಲ್ಲುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊಮೆಲು ಲುಕಾಕು ಅವರು ಚೆಂಡನ್ನು ಡ್ರಿಬ್ಲಿಂಗ್‌ ಮಾಡುತ್ತಾ ಮುಂದೆ ಸಾಗಿದರು. ಚೆಂಡಿನ ಮೇಲೆ ಅವರು ಹೊಂದಿದ್ದ ನಿಯಂತ್ರಣ ನೋಡುತ್ತಿದ್ದ ಸಾವಿರಾರು ಅಭಿಮಾನಿಗಳು ಇನ್ನೇನೂ ಎರಡನೇ ಗೋಲು ಹೊರಹೊಮ್ಮುತ್ತದೆ ಎಂದೇ ನಿರೀಕ್ಷಿಸುತ್ತಿದ್ದರು. ಆದರೆ, ಕೂಡಲೇ ಎಚ್ಚೆತ್ತ ಬ್ರೆಜಿಲ್‌ನ ರಕ್ಷಣಾ ವಿಭಾಗದ ಆಟಗಾರರು ಲುಕಾಕು ಮೇಲೆ ಮುಗಿಬಿದ್ದರು. ಕೂಡಲೇ ಲುಕಾಕು ಅವರು ಚೆಂಡನ್ನು ಕೆವಿನ್‌ ಡಿ ಬ್ರುಯ್ನ್‌ ಅವರಿಗೆ ಪಾಸ್‌ ಮಾಡಿದರು.

ತಮ್ಮಡೆಗೆ ಬಂದ ಚೆಂಡನ್ನು ಅಮೋಘವಾಗಿ ನೆಟ್‌ನೊಳಗೆ ಸೇರಿಸಿದ ಕೆವಿನ್‌ ಅವರು ಕ್ರೀಡಾಂಗಣದಲ್ಲಿ ಹರ್ಷದ ಹೊನಲು ಮೂಡಿಸಿದರು. ಸಾಂಬಾ ಪಡೆಯು ಒತ್ತಡಕ್ಕೆ ಸಿಲುಕಿತು. ಆದರೆ, ಬೆಲ್ಜಿಯಂ ಕೋಟೆಯನ್ನು ಬೇಧಿಸುವ ಅದರ ಹಲವು ಪ್ರಯತ್ನಗಳು ಕೈಗೂಡಲಿಲ್ಲ. ಅಷ್ಟರಲ್ಲಿ ಪಂದ್ಯದ ಮೊದಲಾರ್ಧ ಮುಗಿದಿತ್ತು.

ದ್ವಿತೀಯಾರ್ಧದ ಆರಂಭದಿಂದಲೇ ಬ್ರೆಜಿಲ್‌ ತಂಡದ ಆಟಗಾರರು ಅನನ್ಯ ಸಾಮರ್ಥ್ಯ ತೋರಿದರು. ರೊಮೆಲು ಲುಕಾಕು ಅವರಿಗೆ ಒಂದು ಬಾರಿಯೂ ಚೆಂಡು ಸಿಗದಂತೆ ನೋಡಿಕೊಂಡರು. ನೇಮರ್‌, ಫಿಲಿಫ್‌ ಕುಟಿನ್ಹೊ, ಥಿಯಾಗೊ ಸಿಲ್ವಾ ಹಾಗೂ ಇನ್ನಿತರ ಪ್ರಮುಖ ಆಟಗಾರರು ಗೊಲು ಗಳಿಸಲು ಹರಸಾಹಸಪಟ್ಟರು. ಇದೇ ಕಾರಣದಿಂದ ಈ ಅವಧಿಯಲ್ಲಿ ಚೆಂಡು ಹೆಚ್ಚು ಸಮಯ ಬ್ರೆಜಿಲ್‌ ಬಳಿಯಿತ್ತು. ಎಷ್ಟೆಲ್ಲ ಪ್ರಯತ್ನ ಮಾಡಿದರೂ ಗೋಲು ಗಳಿಸುವ ಅದರ ತಂತ್ರಗಳೆಲ್ಲ ಸಫಲವಾಗಲಿಲ್ಲ. 73ನೇ ನಿಮಿಷದಲ್ಲಿ ಬ್ರೆಜಿಲ್‌ನ ಕೆಸೆಮಿರೊ ಅವರ ಬದಲಿಗೆ ರೆನಾಟೊ ಆಗಸ್ಟೊ ಕಣಕ್ಕಿಳಿದರು.

76ನೇ ನಿಮಿಷದಲ್ಲಿ ಕೆಸೆಮಿರೊ ಅವರು ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಮೂಡಿಸಿದರು. ಸೊಗಸಾಗಿ ಹೆಡರ್‌ ಮಾಡುವ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದರು. 2–1ರಿಂದ ತಗ್ಗಿದ ಮುನ್ನಡೆಯಿಂದಾಗಿ ಬ್ರೆಜಿಲ್‌ ಬಿರುಸಿನ ಆಟಕ್ಕಿಳಿಯಿತು. ಈ ಪಂದ್ಯವೂ ನಿಗದಿತ ಸಮಯದಲ್ಲಿ ಸಮಬಲದಲ್ಲಿ ಕೊನೆಗಾಣಬಹುದು ಎಂಬ ನಿರೀಕ್ಷೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಮೂಡಿತು. ಆದರೆ ಬೆಲ್ಜಿಯಂ ತಂಡದ ಎಡೆನ್ ಹಜಾರ್ಡ್‌ ಅವರು ಅಮೋಘವಾಗಿ ಆಡಿ ಸಾಂಬಾ ಪಡೆಯ ಮುಂಚೂಣಿ ವಿಭಾಗದ ಆಟಗಾರರನ್ನು ಕಟ್ಟಿಹಾಕಿದರು.

ಪಂದ್ಯದ ಕೊನೆಯ ನಿಮಿಷದಲ್ಲಿ ಬ್ರೆಜಿಲ್‌ನ ತಾರಾ ಆಟಗಾರ ನೇಮರ್‌ ಅವರು ಅದ್ಭುತವಾದ ರೀತಿಯಲ್ಲಿ ಡ್ರಿಬ್ಲಿಂಗ್‌ ಮಾಡುತ್ತಾ ಚೆಂಡನ್ನು ಗುರಿಯತ್ತ ಒದ್ದರು. ನೇಮರ್‌ ಈ ಟೂರ್ನಿಯ ಶ್ರೇಷ್ಠ ಗೋಲು ದಾಖಲಿಸಿದರು ಎನ್ನುವಷ್ಟರಲ್ಲಿಯೇ ಬೆಲ್ಜಿಯಂನ ಗೋಲ್‌ ಕೀಪರ್‌ ಥಿಬೌಟ್‌ ಕರ್ಟೊಯಿಸ್‌ ಅವರು ಅದನ್ನು ತಡೆದರು. ಇದರೊಂದಿಗೆ ಬ್ರೆಜಿಲ್‌ ಆಟಗಾರರು ಹಾಗೂ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದರು. ಹೊಸ ಕನಸಿನೊಂದಿಗೆ ಮುನ್ನಡೆದ ಬೆಲ್ಜಿಯಂ ಗೆಲುವಿನ ನಗೆ ಬೀರಿತು.

‘ಭವಿಷ್ಯದ ಬಗ್ಗೆ ಯೋಚಿಸುತ್ತಿಲ್ಲ’
‘ತಂಡ ಸೋತಿದೆ. ಆದರೆ, ಭವಿಷ್ಯದ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಅದರ ಕುರಿತು ಯೋಚನೆ ಮಾಡುತ್ತಿಲ್ಲ’ ಎಂದು ಬ್ರೆಜಿಲ್‌ ತಂಡದ ತರಬೇತುದಾರ ಟಿಟೆ ಹೇಳಿದ್ದಾರೆ.

ಬೆಲ್ಜಿಯಂ ಎದುರಿನ ಪಂದ್ಯದ ನಂತರ ಅವರು ಮಾತನಾಡಿದರು.

‘ತಂಡವು ಒಟ್ಟಾರೆ ತೋರಿದ ಸಾಮರ್ಥ್ಯದ ಬಗ್ಗೆ ಮಾತನಾಡುತ್ತೇನೆ. ಯಾವುದೇ ಒಬ್ಬ ಆಟಗಾರನ ಕುರಿತು ಹೇಳಿಕೆ ನೀಡುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ದ್ವಿತೀಯಾರ್ಧದಲ್ಲಿ ಹೆಚ್ಚು ಸಮಯ ನಮ್ಮ ನಿಯಂತ್ರಣದಲ್ಲಿದ್ದ ಚೆಂಡನ್ನು ಗೊಲುಗಳಾಗಿ ಪರಿವರ್ತಿಸಲು ನಾವು ವಿಫಲವಾದೆವು. ಆದರೆ, ಮೊದಲಾರ್ಧದಲ್ಲಿಯೇ ಬೆಲ್ಜಿಯಂ ಮುನ್ನಡೆ ಸಾಧಿಸಿತು. ಅವರು ನಮಗಿಂತ ಶ್ರೇಷ್ಠ ಆಟವಾಡಲಿಲ್ಲ. ಆದರೆ, ಸಮರ್ಥವಾಗಿ ಮುನ್ನಡೆದರು’ ಎಂದೂ ಅವರು ತಿಳಿಸಿದ್ದಾರೆ.


ಪಂದ್ಯದ ನಂತರ ಹತಾಶೆಯಲ್ಲಿ ಮುಳುಗಿದ ಬ್ರೆಜಿಲ್‌ ತಂಡದ ಆಟಗಾರರು

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT