ಗುರುವಾರ , ಡಿಸೆಂಬರ್ 3, 2020
23 °C
ಫುಟ್‌ಬಾಲ್‌ ವಿಶ್ವಕಪ್‌: ದಕ್ಷಿಣ ಅಮೆರಿಕ ಅರ್ಹತಾ ಟೂರ್ನಿ

ಮಿಂಚಿದ ಕವಾನಿ, ಸ್ವಾರೆಜ್‌: ಉರುಗ್ವೆಗೆ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಾವೊ ಪಾಲೊ (ಬ್ರೆಜಿಲ್)‌: ಎಡಿಸನ್‌ ಕವಾನಿ ಹಾಗೂ ಲೂಯಿಸ್‌ ಸ್ವಾರೆಜ್‌ ಅವರ ಕಾಲ್ಚಳಕಗಳ ಬಲದಿಂದ ಉರುಗ್ವೆ ತಂಡವು ಕೊಲಂಬಿಯಾ ತಂಡವನ್ನು ಮಣಿಸಿತು. ವಿಶ್ವಕಪ್‌ ಅರ್ಹತೆಗೆ ದಕ್ಷಿಣ ಅಮೆರಿಕ ತಂಡಗಳ ಮಧ್ಯೆ ನಡೆಯುತ್ತಿರುವ ಅರ್ಹತಾ ಟೂರ್ನಿಯಲ್ಲಿ ಶುಕ್ರವಾರ ಉರುಗ್ವೆಗೆ 3–0 ಗೋಲುಗಳ ಜಯ ಒಲಿಯಿತು.

ವಿಜೇತ ತಂಡದ ಪರ 33 ವರ್ಷದ ಕವಾನಿ (6ನೇ ನಿಮಿಷ) ಹಾಗೂ ಸ್ವಾರೆಜ್‌ (54ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು. ಮತ್ತೊಂದು ಗೋಲು ಡಾರ್ವಿನ್‌ ನ್ಯೂನೆಜ್‌ (73ನೇ ನಿಮಿಷ) ಮೂಲಕ ಬಂತು.

ಉರುಗ್ವೆ ತಂಡವು ಪ್ರಮುಖ ಆಟಗಾರರಾದ ಗೋಲ್‌ಕೀಪರ್‌ ಮಾರ್ಟಿನ್‌ ಸಿಲ್ವಾ, ಡಿಫೆಂಡರ್‌ ಸೆಬಾಸ್ಟಿಯನ್‌ ಕೋಟ್ಸ್, ಮಿಡ್‌ಫೀಲ್ಡರ್‌ ಫೆಡರಿಕೊ ವಾಲ್ವರ್ಡ್‌ ಹಾಗೂ ಮ್ಯಾಕ್ಸಿ ಗೋಮೆಜ್‌ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು.

ಪಂದ್ಯದ ಆರಂಭದಲ್ಲೇ ಮುನ್ನಡೆ ಗಳಿಸಿದ ಉರುಗ್ವೆ ವಿಶ್ವಾಸದೊಂದಿಗೆ ಮುನ್ನುಗ್ಗಿತು. ನಹಿತಾನ್ ನಾಂದೇಜ್‌ ನೆರವಿನೊಂದಿಗೆ ಕವಾನಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ದಕ್ಷಿಣ ಅಮೆರಿಕ ಅರ್ಹತಾ ಟೂರ್ನಿಯ ಗೋಲು ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಸ್ವಾರೆಜ್‌ ಈ ಪಂದ್ಯದಲ್ಲಿ 25ನೇ ಗೋಲು ದಾಖಲಿಸಿದರು. ಉರುಗ್ವೆಗೆ 2–0 ಮುನ್ನಡೆ ಸಿಕ್ಕಿತು. ಪಂದ್ಯದ ಕೊನೆಯ ಹಂತದಲ್ಲಿ ಕಾಲ್ಚಳಕ ತೋರಿದ ನ್ಯೂನೆಜ್‌, ಉರುಗ್ವೆ ಸಂಭ್ರಮದ ಅಲೆಯಲ್ಲಿ ಮಿಂದೇಳುವಂತೆ ಮಾಡಿದರು.

ಈ ಗೆಲುವಿನೊಂದಿಗೆ ಉರುಗ್ವೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ಮಂಗಳವಾರ ನಡೆಯುವ ಹಣಾಹಣಿಯಲ್ಲಿ ಬಲಿಷ್ಠ ಬ್ರೆಜಿಲ್‌ ತಂಡವನ್ನು ಎದುರಿಸಲಿದೆ. ಕೊಲಂಬಿಯಾ ಆರನೇ ಸ್ಥಾನದಲ್ಲಿದ್ದು, ಮುಂದಿನ ಪಂದ್ಯದಲ್ಲಿ ಈಕ್ವೆಡಾರ್‌ ಎದುರು ಸೆಣಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು