ರೊನಾಲ್ಡೊ ‘ಹ್ಯಾಟ್ರಿಕ್‌’

ಭಾನುವಾರ, ಮಾರ್ಚ್ 24, 2019
33 °C
ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌: ಕ್ವಾರ್ಟರ್‌ಗೆ ಯುವೆಂಟಸ್‌

ರೊನಾಲ್ಡೊ ‘ಹ್ಯಾಟ್ರಿಕ್‌’

Published:
Updated:
Prajavani

ಟ್ಯುರಿನ್‌, ಇಟಲಿ: ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಬುಧವಾರ ಯುವೆಂಟಸ್‌ ಕ್ರೀಡಾಂಗಣದಲ್ಲಿ ಕಾಲ್ಚಳಕ ತೋರಿ ಅಭಿಮಾನಿಗಳನ್ನು ರಂಜಿಸಿದರು.

ರೊನಾಲ್ಡೊ ಗಳಿಸಿದ ‘ಹ್ಯಾಟ್ರಿಕ್‌’ ಗೋಲುಗಳ ನೆರವಿನಿಂದ ಯುವೆಂಟಸ್‌ ತಂಡ ಚಾಂ‍ಪಿಯನ್ಸ್‌ ಲೀಗ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು.

ಬುಧವಾರ ನಡೆದ ಎರಡನೇ ಲೆಗ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಯುವೆಂಟಸ್‌ 3–0 ಗೋಲುಗಳಿಂದ ಅಟ್ಲೆಟಿಕೊ ಮ್ಯಾಡ್ರಿಡ್‌ ಎದುರು ಗೆದ್ದಿತು.

ಮೊದಲ ಲೆಗ್‌ನ ಹೋರಾಟದಲ್ಲಿ 0–2 ಗೋಲುಗಳಿಂದ ಸೋತಿದ್ದ ಯುವೆಂಟಸ್‌ ಬುಧವಾರದ ಹೋರಾಟದಲ್ಲಿ 3–0 ಅಂತರದಿಂದ ಗೆಲ್ಲಲೇಬೇಕಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿದಿದ್ದ ತಂಡ ತವರಿನ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣ ಬಡಿಸಿತು.

ಅಟ್ಲೆಟಿಕೊ ತಂಡದ ರಕ್ಷಣಾ ಕೋಟೆಯನ್ನು ಧ್ವಂಸ ಮಾಡಿದ ರೊನಾಲ್ಡೊ, ಚಾಂಪಿಯನ್ಸ್ ಲೀಗ್‌ನಲ್ಲಿ ಎಂಟನೇ ಬಾರಿ ಹ್ಯಾಟ್ರಿಕ್‌ ಗೋಲು ಹೊಡೆದ ಸಾಧನೆ ಮಾಡಿದರು. ಜೊತೆಗೆ ಅಟ್ಲೆಟಿಕೊ ಎದುರು 25 ಗೋಲು ದಾಖಲಿಸಿದ ಹಿರಿಮೆಗೂ ಪಾತ್ರರಾದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ಯುವೆಂಟಸ್‌ ತಂಡ ಮೂರನೇ ನಿಮಿಷದಲ್ಲಿ ಖಾತೆ ತೆರೆಯಿತು. ರೊನಾಲ್ಡೊ ‘ಫೌಲ್’ ಮಾಡಿದ್ದು ವೀಡಿಯೊ ಅಸಿಸ್ಟೆಂಟ್‌ ರೆಫರಿ (ವಿಎಆರ್‌)ನಿಂದ ಖಚಿತವಾದ ಕಾರಣ ಪಂದ್ಯದ ರೆಫರಿ ಗೋಲು ಮಾನ್ಯ ಮಾಡಲಿಲ್ಲ.

ಹೀಗಿದ್ದರೂ ಆತಿಥೇಯ ಆಟಗಾರರು ಎದೆಗುಂದಲಿಲ್ಲ. 27ನೇ ನಿಮಿಷದಲ್ಲಿ ರೊನಾಲ್ಡೊ ಮತ್ತೆ ಯುವೆಂಟಸ್‌ ಪಾಳಯದಲ್ಲಿ ಸಂಭ್ರಮ ಅಲೆ ಮೂಡಿಸಿದರು. ಪಾಲ್‌ ಡಿಬಾಲ ನೀಡಿದ ‘ಕ್ರಾಸ್‌’ನಲ್ಲಿ ಕ್ರಿಸ್ಟಿಯಾನೊ, ಚೆಂಡನ್ನು ತಲೆತಾಗಿಸಿ (ಹೆಡರ್‌) ಗುರಿ ಮುಟ್ಟಿಸಿದ್ದು ಮನ ಸೆಳೆಯುವಂತಿತ್ತು.

35ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿಕೊಳ್ಳಲು ಆತಿಥೇಯ ತಂಡಕ್ಕೆ ಉತ್ತಮ ಅವಕಾಶ ಲಭ್ಯವಿತ್ತು. ಇದನ್ನು ಬರ್ನಾರ್ಡ್‌ಸೆಚಿ ಕೈಚೆಲ್ಲಿದರು.

49ನೇ ನಿಮಿಷದಲ್ಲಿ ರೊನಾಲ್ಡೊ ಮತ್ತೊಮ್ಮೆ ಕಾಲ್ಚಳಕ ತೋರಿದರು. ಹೀಗಾಗಿ ಯುವೆಂಟಸ್‌ ಮುನ್ನಡೆ 2–0ಗೆ ಹೆಚ್ಚಿತು. ಜೊತೆಗೆ ಈ ತಂಡದ ಕ್ವಾರ್ಟರ್‌ ಫೈನಲ್‌ ಪ್ರವೇಶದ ಕನಸಿಗೆ ಮತ್ತಷ್ಟು ಬಲ ಬಂದಿತು.

ನಂತರದ ಅವಧಿಯಲ್ಲಿ ಯುವೆಂಟಸ್‌ ಆಟಗಾರರು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದರು. ಈ ತಂಡದ ಪ್ರಯತ್ನಕ್ಕೆ 86ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರೊನಾಲ್ಡೊ ತವರಿನ ಅಭಿಮಾನಿಗಳ ಮನ ಗೆದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !