ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಯುಎಇ ವಿರುದ್ಧ ಭಾರತಕ್ಕೆ ಮೊದಲ ಜಯದ ಕನಸು

Last Updated 28 ಮಾರ್ಚ್ 2021, 12:55 IST
ಅಕ್ಷರ ಗಾತ್ರ

ದುಬೈ: ಒಮಾನ್ ಎದುರು ಎಡವಟ್ಟು ಮಾಡಿಕೊಂಡು ಸೋಲಿಗೆ ಒಳಗಾಗಿದ್ದ ಭಾರತ ಫುಟ್‌ಬಾಲ್ ತಂಡ ಎರಡನೇ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸೋಮವಾರ ಯುಎಇ ಎದುರು ಸೆಣಸಲಿದೆ. ಇಲ್ಲಿನ ಜಬೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಭಾರತ ತಂಡ ಮತ್ತೊಮ್ಮೆ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆ ಇದೆ.

ಕೋವಿಡ್‌–19ರಿಂದಾಗಿ ಒಂದು ವರ್ಷ ಅಂತರರಾಷ್ಟ್ರೀಯ ಸ್ಪರ್ಧಾಕಣದಿಂದ ದೂರ ಉಳಿದಿದ್ದ ಭಾರತ ಮೂರು ದಿನಗಳ ಹಿಂದೆ ನಡೆದಿದ್ದ ಮೊದಲ ಪಂದ್ಯದಲ್ಲಿ ಒಮಾನ್ ಎದುರು 1–1ರ ಡ್ರಾ ಸಾಧಿಸಿತ್ತು. ಆ ಪಂದ್ಯದಲ್ಲಿ ಉಡುಗೊರೆ ಗೋಲು ನೀಡಿ ತಂಡ ನಿರಾಸೆ ಅನುಭವಿಸಿತ್ತು.

ಒಮಾನ್ ಎದುರಿನ ಪಂದ್ಯದಲ್ಲಿ 10 ಮಂದಿ ಅಂತರರಾಷ್ಟ್ರೀಯ ಕಣಕ್ಕೆ ಪದಾರ್ಪಣೆ ಮಾಡಿದ್ದರು. ಫಿಫಾ ರ‍್ಯಾಂಕಿಂಗ್‌ನಲ್ಲಿ ತನಗಿಂತ 23 ಸ್ಥಾನ ಮೇಲೆ ಇರುವ ತಂಡವನ್ನು ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. ಒಂದು ಗೋಲು ಕೂಡ ಬಿಟ್ಟುಕೊಡದೆ ರಕ್ಷಣಾ ವಿಭಾಗದವರು ಮೇಲುಗೈ ಸಾಧಿಸಿದ್ದರು. ಮತ್ತೊಮ್ಮೆ ಅದೇ ರೀತಿಯ ಸಾಮರ್ಥ್ಯ ಪ್ರದರ್ಶಿಸಲು ತಂಡ ಸಜ್ಜಾಗಿದೆ. ಯುಎಇ ತಂಡ ಏಷ್ಯಾದಲ್ಲಿ ಎಂಟನೇ ರ‍್ಯಾಂಕ್ ಹೊಂದಿದ್ದು ಫಿಫಾ ಪಟ್ಟಿಯಲ್ಲಿ 74ನೇ ಸ್ಥಾನದಲ್ಲಿದೆ. ಭಾರತ 104ನೇ ಸ್ಥಾನ ಹೊಂದಿದೆ. ಒಂದು ದಶಕದಲ್ಲಿ ಉಭಯ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿದ್ದು ಮೂರರಲ್ಲಿ ಯುಎಇ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾಗೊಂಡಿದೆ.

ಆದರೆ 2019ರ ಏಷ್ಯಾಕಪ್ ಗುಂಪು ಹಂತದ ಪಂದ್ಯದಲ್ಲಿ ದುಬೈ ವಿರುದ್ಧ ಭಾರತ ಉತ್ತಮ ಸಾಮರ್ಥ್ಯ ತೋರಿತ್ತು. 0–2ರಿಂದ ಆ ಪಂದ್ಯದಲ್ಲಿ ಸೋತಿದ್ದರೂ ಅನೇಕ ಬಾರಿ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸೋಮವಾರವೂ ಭರವಸೆಯಿಂದಲೇ ಕಣಕ್ಕೆ ಇಳಿಯಲಿದೆ.

ಎದುರಾಳಿಗಳು ಪ್ರಬಲರಾಗಿದ್ದರೂ ಹೊಸ ಆಟಗಾರರಿಗೆ ಅವಕಾಶ ನೀಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಕೋಚ್ ಇಗರ್ ಸ್ಟಿಮ್ಯಾಕ್ ತಿಳಿಸಿದ್ದಾರೆ. ಅನುಭವಿ ಡಿಫೆಂಡರ್ ಸಂದೇಶ್ ಜಿಂಗಾನ್ ಅವರಿಗೆ ಆಡುವ 11ರಲ್ಲಿ ಸ್ಥಾನ ನೀಡಲಾಗುವುದಿಲ್ಲ. ಅಮರಿಂದರ್ ಸಿಂಗ್ ಬದಲಿಗೆ ಗುರುಪ್ರೀತ್ ಸಿಂಗ್ ಗೋಲ್ ಕೀಪಿಂಗ್ ಮಾಡಲಿದ್ದು ನಾಯಕತ್ವವನ್ನು ನಿಭಾಯಿಸುವರು ಎಂದು ಅವರು ವಿವರಿಸಿದ್ದಾರೆ.

ಕೋವಿಡ್ ನಂತರ ಯುಎಇ ತಂಡ ಭಾರತಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದೆ. ಒಟ್ಟು ನಾಲ್ಕು ಪಂದ್ಯಗಳ ಪೈಕಿ ತಜಿಕಿಸ್ತಾನ ವಿರುದ್ಧ ಮಾತ್ರ ಜಯ ಗಳಿಸಿದೆ. ಉಜ್ಬೆಕಿಸ್ತಾನ ಮತ್ತು ಬಹರೇನ್ ವಿರುದ್ಧ ಸೋತಿರುವ ತಂಡ ಕೊನೆಯ ಪಂದ್ಯದಲ್ಲಿ ಇರಾಕ್ ಎದುರು ಡ್ರಾ ಮಾಡಿಕೊಂಡಿದೆ.

ಪಂದ್ಯ ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ); ನೇರ ಪ್ರಸಾರ: ಯೂರೊ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT