ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಕಪ್‌ ವಿಜಯೋತ್ಸವವನ್ನು ವಿನಾಶಕಾರಿ ಘಟನೆ ಎಂದ ವಿಶ್ವ ಆರೋಗ್ಯ ಸಂಸ್ಥೆ

ಅಕ್ಷರ ಗಾತ್ರ

ಲಂಡನ್‌: ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದ ನಂತರ ನಡೆದ ವಿಜಯೋತ್ಸವದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನೆರೆದಿದ್ದ ಸಾವಿರಾರು ಜನರು ಕೋವಿಡ್‌ ಸಾಂಕ್ರಾಮಿಕವನ್ನು ಲೆಕ್ಕಿಸದೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಘಟನೆಯನ್ನು ವಿನಾಶಕಾರಿಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಭಾನುವಾರ ರಾತ್ರಿ ನಡೆದ ಯೂರೊ ಕಪ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಇಟಲಿ ತಂಡಗಳು ಪ್ರಶಸ್ತಿಗಾಗಿ ಸೆಣಸಿದವು. ಈ ಪಂದ್ಯವನ್ನು ವೀಕ್ಷಿಸಲು ಸುಮಾರು 60 ಸಾವಿರ ಪ್ರೇಕ್ಷಕರು ನೆರೆದಿದ್ದರು. ಇದಲ್ಲದೇ ಪಂದ್ಯದಲ್ಲಿ ಜಯಗಳಿಸಿದ ಇಟಲಿ ತಂಡದ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಜ್ಞಾನಿಗಳು ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

'ಜಾಗತಿಕವಾಗಿ, ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕಳೆದ ವಾರ 2.6 ದಶಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಯುರೋಪ್‌ನಲ್ಲಿ ಶೇ 30 ರಷ್ಟು ಏರಿಕೆ ಕಂಡುಬಂದಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಭಾನುವಾರ ರಾತ್ರಿ ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಇಟಲಿ ಚಾಂಪಿಯನ್‌ ಆಯಿತು.

ಐದೂವರೆ ದಶಕದಿಂದ ಪ್ರಶಸ್ತಿಯ ಬರ ಅನುಭವಿಸುತ್ತಿರುವ ಇಂಗ್ಲೆಂಡ್ ತಂಡ ಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿತು. ನಿಗದಿತ ಅವಧಿಯ ಆಟ 1-1 ರಲ್ಲಿ ಸಮನಾದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ 3-2 ಗೋಲುಗಳಿಂದ ಜಯಗಳಿಸಿತು.

ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೋಲ್‌ ದಾಖಲಿಸಿ ಉತ್ತಮ ಆರಂಭ ಕಂಡಿತು. ಆದರೆ 67ನೇ ನಿಮಿಷದಲ್ಲಿ ಇಟಲಿ ಕೂಡ ಗೋಲ್‌ ದಾಖಲಿಸಿತು. ಪಂದ್ಯ ಸಮನಾದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಜಯದ ನಗು ಬೀರುವ ಮೂಲಕ ಎರಡನೇ ಸಲ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT