ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡುರಾಂಡ್‌ ಕಪ್‌: ಸೆಮಿಗೆ ಬಿಎಫ್‌ಸಿ, ಮೋಹನ್ ಬಾಗನ್

Published 23 ಆಗಸ್ಟ್ 2024, 17:30 IST
Last Updated 23 ಆಗಸ್ಟ್ 2024, 17:30 IST
ಅಕ್ಷರ ಗಾತ್ರ

ಕೋಲ್ಕತ್ತ: ಅರ್ಜೆಂಟೀನಾದವರಾದ ಜಾರ್ಜ್ ಪೆರೀರಾ ಡಯಾಝ್ ಅವರು ಇಂಜುರಿ ಅವಧಿಯಲ್ಲಿ ಗಳಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡ, ಡುರಾಂಡ್‌ ಕಪ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು 1–0 ಗೋಲಿನಿಂದ ಸೋಲಿಸಿತು.

ಯುವಭಾರತಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ಪಂದ್ಯ ಶೂಟೌಟ್‌ಗೆ ಹೋಗುವಂತೆ ಕಾಣುವಾಗಲೇ 90+4ನೇ ನಿಮಿಷ ಪೆರೀರಾ ಗಳಿಸಿದ ಗೋಲು ಸುನಿಲ್ ಚೆಟ್ರಿ ಬಳಗದ ಪಾಲಿಗೆ ನಿರ್ಣಾಯಕವಾಯಿತು. ಕಾರ್ನರ್‌ನಲ್ಲಿ ಚೆಟ್ರಿ ಅವರಿಂದ ಚೆಂಡನ್ನು ಪಡೆದ ಪೆರೀರಾ ಗುರಿತಲುಪಿಸುವಲ್ಲಿ ಎಡವಲಿಲ್ಲ.

ಇದಕ್ಕೆ ಮೊದಲು ಜಮ್ಷೆಡ್‌ಪುರದ ಜೆಆರ್‌ಡಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯ ‘ಸಡನ್‌ ಡೆತ್‌’ವರೆಗೆ ಬೆಳೆದು ಮೋಹನ್ ಬಾಗನ್ ತಂಡ 6–5 ರಿಂದ ಪಂಜಾಬ್ ಎಫ್‌ಸಿ ತಂಡದ ಮೇಲೆ ಗೆಲುವು ಪಡೆದು ಸೆಮಿಗೆ ಮುನ್ನಡೆಯಿತು.

ನಿಗದಿ ಅವಧಿಯ ಆಟ ಮುಗಿದಾಗ ಸ್ಕೋರ್‌ 3–3ರಲ್ಲಿ ಸಮನಾಯಿತು. ಶೂಟೌಟ್‌ನಲ್ಲೂ 3–3 ಸಮಬಲ ಆಯಿತು. ಹೀಗಾಗಿ ಸಡನ್ ಡೆತ್ ಮೊರೆಹೋಗಬೇಕಾಯಿತು.

ಲುಕಾ ಮೇಸೆನ್ (17ನೇ ನಿಮಿಷ, ಪೆನಾಲ್ಟಿ ಮೂಲಕ) ಪಂಜಾಬ್‌ಗೆ ಮುನ್ನಡೆ ಒದಗಿಸಿದ್ದರು. ಆದರೆ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ಸುಹೇಲ್ ಭಟ್ ಬಾಗನ್ ಪರ ಸಮ ಮಾಡಿದರು. ವಿರಾಮದ ವೇಳೆ ಸ್ಕೋರ್ 1–1 ರಲ್ಲಿ ಸಮನಾಗಿತ್ತು.

ಮನ್ವೀರ್ ಸಿಂಗ್ 48ನೇ ನಿಮಿಷ ಬಾಗನ್‌ಗೆ ಮುನ್ನಡೆ ಒದಗಿಸಿದರು. ಆದರೆ 71 ನಿಮಿಷಗಳಾಗುವಷ್ಟರಲ್ಲಿ ಪಂಜಾಬ್‌ 3–2 ಮುನ್ನಡೆ ಪಡೆಯಿತು. 63ನೇ ನಿಮಿಷ ಫಿಲಿಪ್‌ ಮ್ರಿಲ್‌ಜಾಕ್, 71ನೇ ನಿಮಿಷ ನಾರ್ಬರ್ಟೊ ಎಝೆಕಿಲ್ ವಿಡಾಲ್ ಪಂಜಾಬ್‌ಗೆ ಮೇಲುಗೈ ಒದಗಿಸಿದರು. ಆದರೆ ಎಂಟು ನಿಮಿಷಗಳ ನಂತರ ಆಸ್ಟ್ರೇಲಿಯಾದ ಆಟಗಾರ ಜೇಸನ್ ಕಮಿಂಗ್ಸ್‌ ಬಾಗನ್ ತಂಡ 3–3 ಸಮಮಾಡಿಕೊಳ್ಳಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT