ಭಾನುವಾರ, ಜುಲೈ 3, 2022
26 °C

ಇಂಡಿಯನ್ ಸೂಪರ್ ಲೀಗ್: ಈಸ್ಟ್ ಬೆಂಗಾಲ್‌ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಪ್ರಬಲ ಹೋರಾಟದ ಕೊನೆಯಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ತಂಡವನ್ನು 2–1 ಗೋಲುಗಳ ಅಂತರದಲ್ಲಿ ಮಣಿಸಿದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ‌

ಆರನೇ ನಿಮಿಷದಲ್ಲಿ ವಿಲ್ಲೋ ಮಾಟ್ಟಿ ಸ್ಟೀನ್ಮನ್ 68ನೇ ನಿಮಿಷದಲ್ಲಿ ಆ್ಯಂಟನಿ ಪಿಲ್ಕಿಂಗ್ಟನ್ ಗಳಿಸಿದ ಗೋಲುಗಳು ಈಸ್ಟ್ ಬೆಂಗಾಲ್‌ಗೆ ಗೆಲುವು ತಂದುಕೊಟ್ಟವು. ಜೆಮ್ಶೆಡ್‌ಪುರ ಎಫ್‌ಸಿ ತಂಡಕ್ಕಾಗಿ ಪೀಟರ್ ವಿಲಿಯಂ ಹಾರ್ಟ್ಲಿ 83ನೇ ನಿಮಿಷದಲ್ಲಿ ಗೋಲು ಗಳಿಸಿದರು. ಕೊನೆಯಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಒದಗಿದ್ದರೂ ಅವುಗಳನ್ನು ಈಸ್ಟ್ ಬೆಂಗಾಲ್ ತಂಡ ಕೈಚೆಲ್ಲಿತು.

ಆರಂಭದಲ್ಲೇ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಆರನೇ ನಿಮಿಷದಲ್ಲಿ ಬಲಭಾಗದಿಂದ ನಾರಾಯಣದಾಸ್ ತೆಗೆದ ಕಾರ್ನರ್ ಕಿಕ್ ಗಾಳಿಯಲ್ಲಿ ತೇಲಿ ಸ್ಟೀನ್ಮನ್ ಬಳಿ ತಲುಪಿತು. ಜರ್ಮನಿಯ ಆಟಗಾರ ಚೆಂಡಿಗೆ ತಲೆಯೊಡ್ಡಿ ಗುರಿ ಮುಟ್ಟಿಸಿದರು. ಈ ಮೂಲಕ ವೈಯಕ್ತಿಕ ಆರನೇ ಗೋಲು ಗಳಿಸಿ ಬೆಂಗಾಲ್ ಪರ ಅತಿಹೆಚ್ಚು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ ಆಟಗಾರ ಎಂದೆನಿಸಿಕೊಂಡರು. 68ನೇ ನಿಮಿಷದಲ್ಲಿ ಆ್ಯಂಟನಿ ಗಳಿಸಿದ ಗೋಲಿಗೂ ಸ್ಟೀನ್ಮನ್ ನೆರವಾದರು. ಬಲಭಾಗದಲ್ಲಿ ಚೆಂಡನ್ನು ನಿಯಂತ್ರಿಸಿದ ಸ್ಟೀನ್ಮನ್ ನೇರವಾಗಿ ಆ್ಯಂಟನಿ ಬಳಿಗೆ ತಳ್ಳಿದರು. ಐರ್ಲೆಂಡ್ ಆಟಗಾರ ಆ್ಯಂಟನಿ ಸುಲಭವಾಗಿ ಚೆಂಡನ್ನು ಗುರಿಯತ್ತ ತಳ್ಳಿದರು. ಐತೊರ್ ಮನ್ರೊಯ್ ನೀಡಿದ ಕಾರ್ನರ್‌ ಕಿಕ್‌ನಲ್ಲಿ ಪೀಟರ್ ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು. 

ತಿಲಕ್ ಮೈದಾನದಲ್ಲಿ ಸಂಜೆ ನಡೆದ ಹೈದರಾಬಾದ್ ಎಫ್‌ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಪಾಯಿಂಟ್ ಪಟ್ಟಿಯಲ್ಲಿ ಆತಿಥೇಯ ಗೋವಾ ತಂಡವನ್ನು ಹಿಂದಿಕ್ಕಿ ಒಂದು ಸ್ಥಾನ ಮೇಲೇರಲು ಎರಡೂ ತಂಡಗಳಿಗೆ ಸಾಧ್ಯವಾಯಿತು. ಹೈದರಾಬಾದ್ ಮೂರನೇ ಸ್ಥಾನದಲ್ಲೂ ನಾರ್ತ್ ಈಸ್ಟ್ ನಾಲ್ಕನೇ ಸ್ಥಾನದಲ್ಲೂ ಇವೆ.

ಮುಂಬೈ ಸಿಟಿ–ಎಫ್‌ಸಿ ಗೋವಾ ಹಣಾಹಣಿ

ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಎಫ್‌ಸಿ ಗೋವಾ ತಂಡಗಳು ಬ್ಯಾಂಬೊಲಿಮ್‌ನಲ್ಲಿ ಸೋಮವಾರ ಮುಖಾಮುಖಿಯಾಗಲಿವೆ. ಮೊದಲ ಲೆಗ್‌ನಲ್ಲಿ ಈ ಎರಡು ತಂಡಗಳು ಸೆಣಸಿದಾಗ ಮುಂಬೈ ಜಯ ಗಳಿಸಿತ್ತು. ಎಟಿಕೆ ಮೋಹನ್ ಬಾಗನ್ ತಂಡ ಮೂರು ಪಾಯಿಂಟ್‌ಗಳಿಂದ ಹಿಂದೆಯೇ ಇರುವುದರಿಂದ ಅಗ್ರಸ್ಥಾನ ಕಾಯ್ದುಕೊಳ್ಳಲು ಮುಂಬೈ ಸಿಟಿ ತಂಡಕ್ಕೆ ಸೋಮವಾರದ ಪಂದ್ಯದಲ್ಲಿ ಜಯ ಅಗತ್ಯ.

ಹಿಂದಿನ ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಗೋವಾ ಗೆಲುವಿಗಾಗಿ ಪ್ರಯತ್ನಿಸಲಿದೆ. ಹೈದರಾಬಾದ್ ಎಫ್‌ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ಸಮೀಪದಲ್ಲೇ ಗೋವಾ ತಂಡ ಇದ್ದು ಅವುಗಳನ್ನು ಹಿಂದಿಕ್ಕಿ ಮುನ್ನಡೆಯಬೇಕಾದರೆ ತಂಡಕ್ಕೆ ಉಳಿದ ಪಂದ್ಯಗಳಲ್ಲಿ ಜಯ ಗಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು