ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿ ಗೊವಾ ಸೇರಿದ ಫ್ರಂಕಿ ಭುವಾಮ್

Last Updated 18 ಸೆಪ್ಟೆಂಬರ್ 2020, 14:03 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಗೆ ಸಜ್ಜಾಗುತ್ತಿರುವ ಎಫ್‌ಸಿ ಗೋವಾ ತಂಡ ಮೇಘಾಲಯದ ಫ್ರಾಂಕಿ ಬುವಾನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

19 ವರ್ಷದ ಈ ಆಟಗಾರ ಮೂರು ವರ್ಷಗಳ ಕಾಲ ಎಫ್‌ಸಿ ಗೋವಾದೊಂದಿಗೆ ಇರುವರು ಎಂದು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕ್ಲಬ್‌ ತಿಳಿಸಿದೆ.

2018–19ರ ಋತುವಿನಲ್ಲಿ ಸೀನಿಯರ್ ವಿಭಾಗದಲ್ಲಿ ಆಡಲು ಆರಂಭಿಸಿದ ಫ್ರಾಂಕಿ ಅವರು ಐ–ಲೀಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದಾರೆ. ಒಟ್ಟು ಆರು ಗೋಲು ಗಳಿಸಿರುವ ಅವರು ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದ ಭಾರತದ ಮೂರನೇ ಆಟಗಾರ ಎನಿಸಿದ್ದರು.

‘ಎಫ್‌ಸಿ ಗೋವಾ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ನಾನು ರೋಮಾಂಚನಗೊಂಡಿದ್ದೇನೆ. ಇದು ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಒಂದಾಗಿದ್ದು ತಂಡದ ಸದಸ್ಯರೊಂದಿಗೆ ಕಣಕ್ಕೆ ಇಳಿಯಲು ಕಾತರನಾಗಿದ್ದೇನೆ’ ಎಂದು ಫ್ರಾಂಕಿ ಹೇಳಿದರು.

‘ಹಿಂದಿನ ಕೆಲವು ವರ್ಷಗಳಿಂದ ನಾನು ಎಫ್‌ಸಿ ಗೋವಾದ ಅಭಿಮಾನಿಯಾಗಿದ್ದೇನೆ. ಆಕ್ರಮಣಕಾರಿ ಆಟದೊಂದಿಗೆ ಮುನ್ನಡೆಯುವ ಈ ತಂಡದ ಶೈಲಿ ನನಗೆ ಹೆಚ್ಚು ಇಷ್ಟ’ ಎಂದು ಅವರು ತಿಳಿಸಿದರು.

ಮೇಘಾಲಯದ ಜೈಂಟಿಯಾ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಫ್ರಾಂಕಿ ಸಣ್ಣ ವಯಸ್ಸಿನಲ್ಲೇ ಫುಟ್‌ಬಾಲ್‌ ಮೇಲೆ ಆಸಕ್ತಿ ಹೊಂದಿದ್ದರು. 16 ಮತ್ತು 18 ವರ್ಷದೊಳಗಿನವರ ವಿಭಾಗದಲ್ಲಿ ರಾಯಲ್ ವಹಿಂಗ್ಡೊ ಪರ ಕಣಕ್ಕೆ ಇಳಿದಿದ್ದ ಅವರು ನಂತರ ಶಿಲಾಂಗ್ ಲಾಜೋಂಗ್ ಸೇರಿದರು.

2018ರಲ್ಲಿ ತಂಡ ಯೂತ್ ಲೀಗ್ ಟೂರ್ನಿಯ ಚಾಂಪಿಯನ್ ಆಗುವಲ್ಲಿ ಫ್ರಾಂಕ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ಋತುವಿನಲ್ಲಿ ಶಿಲಾಂಗ್ ಪ್ರೀಮಿಯರ್ ಲೀಗ್ ಮತ್ತು ಮೇಘಾಲಯ ರಾಜ್ಯ ಲೀಗ್ ಟೂರ್ನಿಗಳಲ್ಲಿ ಶಿಲಾಂಗ್ ಲಾಜೋಂಗ್ ತಂಡಕ್ಕೆ ಚಾಂಪಿಯನ್‌ ಪಟ್ಟ ದೊರಕಿಸಿಕೊಡುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಬೆಂಗಳೂರು ಯುನೈಟೆಡ್ ತಂಡ ಸೇರಿದ ಅವರು ಎರಡನೇ ಡಿವಿಷನ್ ಲೀಗ್‌ನಲ್ಲಿ ಆಡಿ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.

‘ಫ್ರಾಂಕಿ ಪ್ರಬುದ್ಧ ಆಟಗಾರ. ಗೋವಾ ತಂಡಕ್ಕೆ ಅವರು ಇನ್ನಷ್ಟು ಬಲತುಂಬಲಿದ್ದಾರೆ. ಗೋಲು ಗಳಿಸಲು ಸದಾ ಹಾತೊರೆಯುವ ಅವರು ತಾಂತ್ರಿಕವಾಗಿ ಬಲಿಷ್ಠರಾಗಿದ್ದು ತಂಡದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ’ ಎಂದು ಎಫ್‌ಸಿ ಗೋವಾದ ನಿರ್ದೇಶಕ ರವಿ ಪುಷ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT