ಸೋಮವಾರ, ಮಾರ್ಚ್ 20, 2023
25 °C
ಫರ್ನಾಂಡಿಸ್‌ ಎರಡು ಗೋಲು

FIFA 2022: ಉರುಗ್ವೆಗೆ ಸೋಲುಣಿಸಿದ ಪೋರ್ಚುಗಲ್‌- ನಾಕೌಟ್‌ಗೆ ರೊನಾಲ್ಡೊ ಬಳಗ

ಎಎಫ್‌ಪಿ/ ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ದೋಹಾ: ಬ್ರೂನೊ ಫರ್ನಾಂಡಿಸ್ ಗಳಿಸಿದ ಎರಡು ಸುಂದರ ಗೋಲುಗಳು ಪೋರ್ಚುಗಲ್ ತಂಡವನ್ನು ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ನಾಕೌಟ್‌ಗೆ ತಲುಪಿಸಿದವು.

ಲುಸೈಲ್‌ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ನಡೆದ ‘ಎಚ್‌’ ಗುಂಪಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್‌ 2–0ಯಿಂದ ಉರುಗ್ವೆ ತಂಡದ ಸವಾಲು ಮೀರಿತು.

ಗುಂಪುಹಂತದಲ್ಲಿ ಪೋರ್ಚುಗಲ್‌ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದು ಇದು ಎರಡನೇ ಬಾರಿ.

ಪಂದ್ಯದ ಮೊದಲಾರ್ಧದಲ್ಲಿ ಪೋರ್ಚುಗಲ್ ಪಾರಮ್ಯ ಮೆರೆದಿತ್ತು. ಹೆಚ್ಚು ಹೊತ್ತು ಚೆಂಡನ್ನು ತನ್ನಲ್ಲೇ ಉಳಿಸಿಕೊಂಡಿದ್ದ ತಂಡವು, ಗೋಲು ಗಳಿಕೆಯ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಆದರೆ ಉರುಗ್ವೆ ಗೋಲ್‌ಕೀಪರ್‌ ಸೆರ್ಗಿಯೊ ರೊಚೆಟ್‌ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ.

ಮೊದಲಾರ್ಧ ಮುಗಿದ ಎಂಟು ನಿಮಿಷಗಳ ಬಳಿಕ ಫರ್ನಾಂಡಿಸ್‌ ಮೋಡಿ ಮಾಡಿದರು. ಎಡಭಾಗದಿಂದ ಚೆಂಡನ್ನು ರೊನಾಲ್ಡೊ ಅವರತ್ತ ಕಿಕ್ ಮಾಡಿದರು. ಚೆಂಗನೆ ಜಿಗಿದ ರೊನಾಲ್ಡೊ ಚೆಂಡನ್ನು ಹೆಡ್‌ ಮಾಡಲು ಯತ್ನಿಸಿದರು. ಆದರೆ ಅವರಿಗೆ ತಾಗದ ಚೆಂಡು ಗೋಲ್‌ಪೋಸ್ಟ್‌ನೊಳಗೆ ಮಿಂಚಿನ ವೇಗದಲ್ಲಿ ಸೇರಿಕೊಂಡಿತು. ರೊನಾಲ್ಡೊ ಗೋಲು ಗಳಿಸಿದ ಸಂಭ್ರಮ ಆಚರಿಸಿದರು. ಆದರೆ ವಿಡಿಯೊ ಮರುಪರಿಶೀಲನೆಯ ಬಳಿಕ ಫಿಫಾ ಈ ಗೋಲನ್ನು ಫರ್ನಾಂಡಿಸ್‌ ಖಾತೆಗೆ ಸೇರಿಸಿತು.

ಈ ಗೋಲು ರೊನಾಲ್ಡೊ ಗಳಿಸಿದ್ದರೆ ವಿಶ್ವಕಪ್‌ ಟೂರ್ನಿಯಲ್ಲಿ ಅವರ ಒಂಬತ್ತನೇ ಗೋಲಾಗುತ್ತಿತ್ತು. ಆ ಮೂಲಕ ಅವರು ಪೋರ್ಚುಗಲ್ ತಂಡದ ದಿಗ್ಗಜ ಯುಸೆಬಿಯೊ ಅವರನ್ನು ಸರಿಟ್ಟುತ್ತಿದ್ದರು.

ಫರ್ನಾಂಡಿಸ್‌ ಗೋಲಿನ ಬಳಿಕ ಉರುಗ್ವೆ ವೇಗದ ಆಟಕ್ಕೆ ಮೊರೆಹೋಯಿತು. ತಂಡದ ಫಾರ್ವರ್ಡ್‌ ಆಟಗಾರ ಮ್ಯಾಕ್ಸಿ ಗೋಮೆಜ್‌ 20 ಯಾರ್ಡ್‌ನಿಂದ ಪಾಸ್‌ ಮಾಡಿದ ಚೆಂಡನ್ನು ಲೂಯಿಸ್‌ ಸ್ವಾರೆಜ್‌ ಗೋಲ್‌ಪೋಸ್ಟ್‌ನತ್ತ ತಳ್ಳಿದರು. ಆದರೆ ಚೆಂಡು ನೆಟ್‌ ಸಮೀಪದಿಂದ ಹಾಯ್ದುಹೋದಾಗ ನಿರಾಸೆ ಸ್ವಾರೆಜ್‌ ಅವರದಾಯಿತು.

ಇಂಜುರಿ ಅವಧಿಯಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಫರ್ನಾಂಡಿಸ್‌ ಅತಿ ಸುಲಭವಾಗಿ ಗೋಲಿನಲ್ಲಿ ಪರಿವರ್ತಿಸಿದರು. ಚೆಂಡನ್ನು ಗೋಲ್‌ಪೋಸ್ಟ್‌ನ ಬಲಭಾಗಕ್ಕೆ ಒದ್ದ ಅವರು ಗೋಲ್‌ಕೀಪರ್‌ ಸೆರ್ಗಿಯೊ ಅವರನ್ನು ವಂಚಿಸಿದರು.

ಇಂಜುರಿ ಅವಧಿಯಲ್ಲೇ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಸಾಧಿಸುವ ಫರ್ನಾಂಡಿಸ್‌ ಅವರಿಗಿತ್ತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ ಪೋರ್ಚುಗಲ್‌, ಈಗಾಗಲೇ 16ರ ಘಟ್ಟ ತಲುಪಿರುವ ಫ್ರಾನ್ಸ್ ಮತ್ತು ಬ್ರೆಜಿಲ್ ತಂಡಗಳ ಸಾಲಿಗೆ ಸೇರಿತು.

ಈ ಗುಂಪಿನಿಂದ ಉರುಗ್ವೆ ತಂಡಕ್ಕೂ ನಾಕೌಟ್‌ ಪ್ರವೇಶಿಸುವ ಅವಕಾಶವಿದೆ. ಗುಂಪಿನ ತನ್ನ ಕೊನೆಯ ಸೆಣಸಾಟದಲ್ಲಿ ಘಾನಾ ತಂಡವನ್ನು ಅದು ಮಣಿಸಬೇಕು. 

2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 16ರ ಘಟ್ಟದಲ್ಲಿ ಉರುಗ್ವೆ ತಂಡವು ಪೋರ್ಚುಗಲ್‌ಗೆ ಸೋಲುಣಿಸಿತ್ತು. ಅದೇ ರೀತಿಯ ಸಾಮರ್ಥ್ಯ ತೋರುವಲ್ಲಿ ತಂಡಕ್ಕೆ ಇಲ್ಲಿ ಸಾಧ್ಯವಾಗಲಿಲ್ಲ.

‘ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದು ಮಹತ್ವದ್ದು. ಬಲಿಷ್ಠ ಎದುರಾಳಿಯನ್ನು ಸೋಲಿಸಿದ್ದು ಇನ್ನೂ ಮಹತ್ವದ್ದು. ಕೊನೆಯ ಪಂದ್ಯದಲ್ಲೂ ಗೆಲ್ಲಬೇಕಿದೆ‘ ಎಂದು ಫರ್ನಾಂಡಿಸ್‌ ಹೇಳಿದ್ದಾರೆ.

 

ಗೋಲುಗಳ ವಿವರ

ಪೋರ್ಚುಗಲ್‌ 2

ಬ್ರೂನೊ ಫರ್ನಾಂಡೀಸ್‌ (54 ಮತ್ತು 90+3ನೇ ನಿಮಿಷ)

ಉರುಗ್ವೆ 0

 

ಅಂಗಣಕ್ಕೆ ನುಗ್ಗಿದ ಪ್ರತಿಭಟನಾಕಾರ

ಈ ವಿಶ್ವಕಪ್‌ನಲ್ಲಿ ಮೊದಲ ಬಾರಿ ಪ‍್ರತಿಭಟನಾಕಾರನೊಬ್ಬ ಅಂಗಣಕ್ಕೆ ನುಗ್ಗಿದ ಘಟನೆ ನಡೆಯಿತು. ಉರುಗ್ವೆ–ಪೋರ್ಚುಗಲ್ ಪಂದ್ಯದ ವೇಳೆ ಕಾಮನಬಿಲ್ಲಿನ ಧ್ವಜ ಹಿಡಿದಿದ್ದ ವ್ಯಕ್ತಿ ಅಂಗಣದೊಳಕ್ಕೆ ಓಡಿಬಂದ. ಆತನ ಟೀಶರ್ಟ್ ಮುಂಭಾಗದಲ್ಲಿ ‘ಉಕ್ರೇನ್‌ ರಕ್ಷಿಸಿ‘ ಎಂದಿದ್ದರೆ, ಹಿಂಭಾಗದಲ್ಲಿ ‘ಇರಾನಿ ಮಹಿಳೆಯರಿಗೆ ಗೌರವ‘ ಎಂದು ಬರೆದಿತ್ತು.

ಭದ್ರತಾ ಸಿಬ್ಬಂದಿ ಕೂಡಲೇ ಪ್ರತಿಭಟನಾಕಾರರನ್ನು ಹಿಡಿದರು. ಈ ವೇಳೆ ಅಂಗಣದಲ್ಲಿ ಬಿದ್ದ ಧ್ವಜವನ್ನು ರೆಫರಿ ಎತ್ತಿಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು