ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಫುಟ್‌ಬಾಲ್ ಮೇಲೆ ಫಿಫಾ ಗದಾ ಪ್ರಹಾರ

Last Updated 7 ಏಪ್ರಿಲ್ 2021, 15:07 IST
ಅಕ್ಷರ ಗಾತ್ರ

ಕರಾಚಿ: ಬಾಹ್ಯಶಕ್ತಿಗಳ ಹಸ್ತಕ್ಷೇಪ ವಿರೋಧಿಸಿ ಪಾಕಿಸ್ತಾನ ಫುಟ್‌ಬಾಲ್ ಫೆಡರೇಷನ್ (ಪಿಎಫ್‌ಎಫ್‌) ಮೇಲೆ ಕ್ರಮ ಕೈಗೊಂಡಿರುವ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (ಫಿಫಾ) ಪಾಕಿಸ್ತಾನ ಫೆಡರೇಷನ್‌ನ ಕಚೇರಿಯನ್ನು ಖಾಲಿ ಮಾಡುವಂತೆ ಅನಧಿಕೃತ ಸಮಿತಿಗೆ ಆದೇಶ ನೀಡಿದೆ.

ಫಿಫಾ ನೇಮಕ ಮಾಡಿರುವ ಸಮಿತಿಯೊಂದು 2019ರಿಂದ ಪಾಕಿಸ್ತಾನ ಫುಟ್‌ಬಾಲ್‌ ಫೆಡರೇಷನ್‌ನ ಆಡಳಿತ ನಿರ್ವಹಿಸುತ್ತಿದೆ. ಆದರೆ ಚುನಾವಣೆ ನಡೆಸುವಂತೆ ಒತ್ತಾಯಿಸಿದ ಕೆಲವರು ಲಾಹೋರ್‌ನಲ್ಲಿರುವ ಕಚೇರಿಯ ಈ ಸಮಿತಿ ಸದಸ್ಯರನ್ನು ಹೊರಹಾಕಿದ್ದರು.

ಹೀಗಾಗಿ ಪಿಎಫ್‌ಎಫ್‌ ಅಮಾನತು ಮಾಡಿ ಫಿಫಾ ಬುಧವಾರ ಆದೇಶ ಹೊರಡಿಸಿತ್ತು. ಅಮಾನತು ವಾಪಸ್ ತೆಗೆದುಕೊಳ್ಳುವ ವರೆಗೆ ಪಾಕಿಸ್ತಾನ ಯಾವುದೇ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಾಕೀತು ಮಾಡಿತ್ತು. 2019ರಲ್ಲಿ ಕಾಂಬೋಡಿಯಾ ವಿರುದ್ಧ ಪಾಕಿಸ್ತಾನ ಕೊನೆಯದಾಗಿ ಪಂದ್ಯ ಆಡಿತ್ತು. ಅಮಾನತಿನಿಂದಾಗಿ ಫಿಫಾದ ಅನುದಾನ ಕೂಡ ಪಿಎಫ್‌ಎಫ್‌ಗೆ ಸಿಗುವುದಿಲ್ಲ.

1960 ಮತ್ತು 70ರ ದಶಕದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಪಾಕಿಸ್ತಾನ ಫುಟ್‌ಬಾಲ್ ತಂಡದೈದ್ಯಶಕ್ತಿಯಾಗಿತ್ತು. ಆದರೆ ಫೆಡರೇಷನ್ ಚಟುವಟಿಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಎರಡು ಬಾರಿ ಪಿಎಫ್‌ಎಫ್‌ ಮೇಲೆ ಅಮಾನತು ಹೇರಲಾಗಿತ್ತು.

2019ರಲ್ಲಿ ಪಿಎಫ್‌ಎಫ್‌ಗೆ ಚುನಾವಣೆ ನಡೆಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಚುನಾವಣೆಯಲ್ಲಿ ಉದ್ಯಮಿ ಅಶ್ಫಾಕ್ ಹುಸೇನ್ ಗೆಲುವು ಸಾಧಿಸಿದ್ದರು. ಆದರೆ ಈ ಫಲಿತಾಂಶವನ್ನು ಏಷ್ಯನ್ ಫುಟ್‌ಬಾಲ್ ಫೆಡರೇಷನ್ ಮಾನ್ಯ ಮಾಡಿರಲಿಲ್ಲ. ಹೀಗಾಗಿ ಸಮಿತಿಯೊಂದನ್ನು ಫಿಫಾ ನೇಮಕ ಮಾಡಿತ್ತು. ಕಳೆದ ವಾರ ನಡೆದ ಅಹಿತಕರ ಘಟನೆಗಳಿಗೆ ಅಶ್ಫಾಕ್ ಅವರ ಬೆಂಬಲಿಗರೇ ಕಾರಣ ಎನ್ನಲಾಗಿದೆ.

ಫಿಫಾದಲ್ಲಿ 210 ದೇಶಗಳ ತಂಡಗಳು ಇದ್ದು ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ 200ನೇ ಸ್ಥಾನದಲ್ಲಿದೆ. ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿ ಚಾಡ್ ಫುಟ್‌ಬಾಲ್ ಸಂಸ್ಥೆಯನ್ನು ಕೂಡ ಫಿಫಾ ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT