ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ಅಂಗಣದಲ್ಲಿ ನವೋದಯ

Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ನಂತರ ಬೆಲ್ಜಿಯಂ ತಂಡದ ಗೋಲ್‌ಕೀಪರ್‌ ತಿಬೌಟ್‌ ಕಾಟೋಯ್ಸ್‌ ಎದುರಾಳಿ ಫ್ರಾನ್ಸ್ ತಂಡದ ಮೇಲೆ ವಿಚಿತ್ರ ಆರೋಪವೊಂದನ್ನು ಹೊರಿಸಿದ್ದರು. ಫ್ರಾನ್ಸ್‌ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮಾತ್ರ ಒತ್ತು ನೀಡಿ ಫುಟ್‌ಬಾಲ್‌ ಕ್ರೀಡೆಗೆ ಅವಮಾನ ಮಾಡಿದ್ದಾರೆ ಎಂಬುದಾಗಿತ್ತು ಅವರ ದೂರು.

ಹೌದು, ಆ ಪಂದ್ಯದಲ್ಲಿ ಫ್ರಾನ್ಸ್‌ ರಕ್ಷಣೆಗೆ ಆದ್ಯತೆ ನೀಡಲು ತಂತ್ರ ಹೆಣೆದಿತ್ತು. ಅವರ ರಕ್ಷಣಾ ವ್ಯೂಹದಿಂದಲೇ ಎದ್ದು ಬಂದ ಸ್ಯಾಮ್ಯುಯೆಲ್‌ ಟಿಟಿ ಗೋಲು ಗಳಿಸಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.

24 ವರ್ಷ ವಯಸ್ಸಿನ ಟಿಟಿ ರಷ್ಯಾಗೆ ಬರುವ ಮುನ್ನ ಅಂತರರಾಷ್ಟ್ರೀಯ ಮಟ್ಟದ 19 ಪಂದ್ಯಗಳನ್ನು ಆಡಿದ್ದರು. ಎರಡು ಗೋಲುಗಳನ್ನೂ ಗಳಿಸಿದ್ದರು. ಆದರೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಬೆಲ್ಜಿಯಂ ವಿರುದ್ಧ ಗಳಿಸಿದ ಏಕೈಕ ಗೋಲು ಅವರನ್ನು ವಿಶ್ವಕ್ಕೇ ಪರಿಚಯಿಸಿತ್ತು.

ಎಡಬದಿಯಿಂದ ನೀಡಿದ ಕ್ರಾಸ್‌ಗೆ ತಲೆಯೊಡ್ಡಿದ ಅವರು ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದ ಮೋಹಕ ನೋಟಕ್ಕೆ ಫುಟ್‌ಬಾಲ್ ಜಗತ್ತು ತಲೆದೂಗಿತ್ತು. ಮರುದಿನ ಪ್ಯಾರಿಸ್‌ನ ಬೀದಿ ಬೀದಿಗಳಲ್ಲಿ ಅವರ ಹೆಸರು ರಾರಾಜಿಸಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಟಿಟಿ ಅವರಂತೆ ದಿಢೀರ್ ಬೆಳಕಿಗೆ ಬಂದ ಯುವ ಆಟಗಾರರು ಸಾಕಷ್ಟು ಮಂದಿ ಇದ್ದಾರೆ.

ಅದ್ಭುತ ಆಟಗಾರ ನೇಮರ್‌, ಎದುರಾಳಿ ತಂಡದ ಆಟಗಾರರನ್ನು ಕಚ್ಚುವ ಮೂಲಕ ಸುದ್ದಿಯಾಗುತ್ತಿದ್ದ ಲೂಯಿಸ್ ಸ್ವಾರೆಜ್‌, ನಿವೃತ್ತಿಯ ಅಂಚಿಗೆ ತಲುಪಿರುವ ಲಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮುಂತಾದವರ ಆಟವನ್ನು ಸವಿಯಲು ಕ್ರೀಡಾಂಗಣಗಳ ಕಡೆಗೆ ಲಗ್ಗೆ ಹಾಕಿದವರ ನಿರೀಕ್ಷೆ ಹುಸಿಯಾಯಿತು. ಆದರೆ ಹೊಸ ಆಟಗಾರರ ಕಾಳ್ಚಳಕಕ್ಕೆ ಬೆರಗಾದ ಅವರಲ್ಲಿ ಭರವಸೆಯ ಕಿರಣಗಳು ಮೂಡಿವೆ.

ರೊನಾಲ್ಡೊ, ಮೆಸ್ಸಿ, ನೇಮರ್ ಮುಂತಾದವರ ತಂಡಗಳು ಅನಿರೀಕ್ಷಿತವಾಗಿ ಟೂರ್ನಿಯಿಂದ ಹೊರಬಿದ್ದ ನಂತರ ಫ್ರಾನ್ಸ್, ಬೆಲ್ಜಿಯಂ, ಇಂಗ್ಲೆಂಡ್‌, ಕ್ರೊವೇಷ್ಯಾ ಮತ್ತಿತರ ತಂಡಗಳ ಆಟಗಾರರು ಅಮೋಘ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಕೈಲಿಯನ್ ಬಾಪೆ, ಟಿಟಿ, ಹ್ಯಾರಿ ಕೇನ್‌, ರೊಮೆಲು ಲುಕಾಕು, ಯೆರಿ ಮೀನ, ಈಡನ್‌ ಹಜಾರ್ಡ್‌, ಲೂಕಾ ಮಾಡ್ರಿಚ್, ಫಿಲಿಪ್ ಕುಟಿನ್ಹೊ, ಈಗರ್ ಅಕಿನ್‌ಫೀವ್‌, ಹ್ಯೂಗೊ ಲಾರಿಸ್‌, ಆಂಟೋನ್ ಗ್ರೀಜ್‌ಮನ್‌...ಹೀಗೆ ಸಾಗುತ್ತದೆ ಈ ಬಾರಿ ಮಿಂಚಿದ ಹೊಸ ಆಟಗಾರರ ಪಟ್ಟಿ.

ಟೂರ್ನಿಯಲ್ಲಿ ಫ್ರಾನ್ಸ್‌ ತಂಡದ ಮೊದಲ ಪಂದ್ಯದಲ್ಲಿ ಆಂಟೋನ್ ಗ್ರೀಜ್‌ಮನ್‌ ಪೆನಾಲ್ಟಿ ಮೂಲಕ ಗಳಿಸಿದ ಗೋಲು, ಇದೇ ತಂಡದ ಪೆರು ಎದುರಿನ ಪಂದ್ಯದಲ್ಲಿ 19 ವರ್ಷದ ಬಾಪೆ ಗಳಿಸಿದ ಏಕೈಕ ಗೋಲು, ಟ್ಯುನೀಷಿಯಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿ ಇಂಗ್ಲೆಂಡ್‌ಗೆ ಜಯ ದೊರಕಿಸಿಕೊಟ್ಟ ಹ್ಯಾರಿ ಕೇನ್‌ ಅವರ ಸಾಮರ್ಥ್ಯ, ಸ್ವಿಟ್ಜರ್‌ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್‌ನ ಗೌರವ ಉಳಿಸಿದ ಫಿಲಿಪ್ ಕುಟಿನ್ಹೊ...ಹೀಗೆ ಈ ಬಾರಿ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರು ಒಬ್ಬರೇ...ಇಬ್ಬರೇ...?

ವ್ಯಾಪ್ತಿಯ ಮೇರೆ ಮೀರಿ ನಿಂತವರು
ಒಂದು ಕಾಲವಿತ್ತು. ಫುಟ್‌ಬಾಲ್‌ನಲ್ಲಿ ಗೋಲು ಗಳಿಸುವವರೆಲ್ಲರೂ ಫಾರ್ವರ್ಡ್ ವಿಭಾಗದವರಾಗಿರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಿಡ್‌ಫೀಲ್ಡ್‌ ಮತ್ತು ರಕ್ಷಣಾ ವಿಭಾಗದಿಂದ ಕೂಡ ಗೋಲು ಗಳಿಸುವವರು ಉದಯಿಸುತ್ತಿದ್ದಾರೆ.

ಕೊಲಂಬಿಯಾದ ಡಿಫೆಂಡರ್‌ ಯೆರಿ ಮೀನ ಆಡಿದ ಮೂರು ಪಂದ್ಯಗಳಲ್ಲಿ ಮೂರು ಗೋಲುಗಳನ್ನು ದಾಖಲಿಸಿ ಅಮೋಘ ಸಾಧನೆ ಮಾಡಿದ್ದಾರೆ. ಮೂರು ಬಾರಿಯೂ ಅವರು ಚೆಂಡನ್ನು ತಲೆಯಲ್ಲಿ ಬಡಿದು ಗುರಿ ಸೇರಿಸಿದ್ದರು. ಐದು ಪಂದ್ಯಗಳಲ್ಲಿ ಎರಡು ಗೋಲು ಗಳಿಸಿದ ಬ್ರೆಜಿಲ್‌ನ ಫಿಲಿಪ್ ಕುಟಿನ್ಹೊ ಮಿಡ್‌ಫೀಲ್ಡ್ ವಿಭಾಗದಿಂದ ಬೆಳಗಿದ ಆಟಗಾರ.

ಈ ಬಾರಿ ಟೂರ್ನಿಯಲ್ಲಿ ಎರಡು ಗೋಲು ಗಳಿಸಿದ ಕ್ರೊವೇಷ್ಯಾದ ಲೂಕಾ ಮ್ಯಾಡ್ರಿಚ್ ಕೂಡ ಮಿಡ್‌ಫೀಲ್ಡ್ ವಿಭಾಗದ ಆಟಗಾರ. ರಕ್ಷಣಾ ವಿಭಾಗದಿಂದ ಮುನ್ನುಗ್ಗಿ ಬಂದು ಹೆಡರ್‌ ಮೂಲಕ ಎರಡು ಗೋಲು ಗಳಿಸಿದ ಇಂಗ್ಲೆಂಡ್‌ನ ಜಾನ್ ಸ್ಟೋನ್ಸ್ ಕೂಡ ಪ್ರಶಂಸಾರ್ಹ ಸಾಧನೆ ಮಾಡಿದ್ದಾರೆ. ರಾಫೆಲ್ ವಾರೆನ್‌, ಪಾಲ್ ಪೊಗ್ಬಾ ಮುಂತಾದವರು ಕೂಡ ಇದೇ ಸಾಲಿಗೆ ಸೇರುವ ಆಟಗಾರರು.

*


ಪಾಲ್‌ ಪೊಗ್ಬಾ

*


*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT