ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fifa World Cup: ಜಿರೋಡ್‌ ಗೆಲುವಿನ ಗೋಲು -ಸೆಮಿಗೆ ಫ್ರಾನ್ಸ್, ಇಂಗ್ಲೆಂಡ್‌ ಔಟ್

ಪೆನಾಲ್ಟಿ ಕಿಕ್‌ನಲ್ಲಿ ಎಡವಿದ ಹ್ಯಾರಿ ಕೇನ್
Last Updated 11 ಡಿಸೆಂಬರ್ 2022, 13:22 IST
ಅಕ್ಷರ ಗಾತ್ರ

ದೋಹಾ: ಒಲಿವಿಯೆರ್‌ ಜಿರೋಡ್‌ ಅವರು ಎರಡನೇ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್‌, ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಅಲ್‌ ಖೊರ್‌ನ ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಫ್ರಾನ್ಸ್‌ 2–1 ಗೋಲುಗಳಿಂದ ಹ್ಯಾರಿ ಕೇನ್‌ ಬಳಗವನ್ನು ಮಣಿಸಿತು. ತಂಡಕ್ಕೆ ದೊರೆತ ಎರಡನೇ ಪೆನಾಲ್ಟಿ ಕಿಕ್‌ ಅವಕಾಶವನ್ನು ಕೈಚೆಲ್ಲಿದ ಕೇನ್‌ ‘ದುರಂತ ನಾಯಕ’ ಎನಿಸಿದರು.

ಯೂರೋಪ್‌ನ ಎರಡು ಬಲಿಷ್ಠ ತಂಡಗಳ ನಡುವಣ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಒರೆಲಿಯಾನ್ ಚುವಮೆನಿ (17ನೇ ನಿ.) ಮತ್ತು ಜಿರೋಡ್‌ (78ನೇ ನಿ.) ಅವರು ಫ್ರಾನ್ಸ್‌ ಪರ ಗೋಲು ಗಳಿಸಿದರೆ, ಇಂಗ್ಲೆಂಡ್‌ ತಂಡದ ಏಕೈಕ ಗೋಲನ್ನು ಕೇನ್‌ 54ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ತಂದಿತ್ತರು. ಬುಧವಾರ ರಾತ್ರಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಮೊರೊಕ್ಕೊ ವಿರುದ್ಧ ಪೈಪೋಟಿ ನಡೆಸಲಿದೆ.

ಟೂರ್ನಿಯಲ್ಲಿ ಐದು ಗೋಲು ಗಳಿಸಿರುವ ಸ್ಟಾರ್‌ ಆಟಗಾರ ಕಿಲಿಯಾನ್‌ ಎಂಬಾಪೆ ಅವರನ್ನು ಇಂಗ್ಲೆಂಡ್‌ನ ಡಿಫೆಂಡರ್‌ಗಳು ಕಟ್ಟಿಹಾಕಿದಾಗ, ಅನುಭವಿ ಜಿರೋಡ್‌ ತಂಡದ ನೆರವಿಗೆ ನಿಂತರು. ಎದುರಾಳಿ ತಂಡದ ಗೋಲು ಗಳಿಸುವ ಕೆಲವು ಪ್ರಯತ್ನಗಳನ್ನು ಅದ್ಭುತವಾಗಿ ತಡೆದ ಗೋಲ್‌ಕೀಪರ್‌ ಹ್ಯೂಗೊ ಲಾರಿಸ್‌ ಅವರೂ ಫ್ರಾನ್ಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಫ್ರಾನ್ಸ್‌ ತಂಡದ ಎರಡೂ ಗೋಲುಗಳಿಗೆ ‘ಅಸಿಸ್ಟ್‌’ ನೀಡಿದ ಆಂಟೋನ್‌ ಗ್ರೀಸ್‌ಮನ್ ಅವರ ಆಟವನ್ನೂ ಮರೆಯುವಂತಿಲ್ಲ.

ಫ್ರಾನ್ಸ್‌ ತಂಡ ಈ ಪಂದ್ಯದಲ್ಲಿ ನಿರೀಕ್ಷೆಗಿಂತಲೂ ಬೇಗನೇ ಗೋಲಿನ ಖಾತೆ ತೆರೆಯಿತು. ಉಸ್ಮಾನ್‌ ದೆಂಬೆಲೆ ಅವರಿಂದ ದೊರೆತ ಪಾಸ್‌ನಲ್ಲಿ ಗ್ರೀಸ್‌ಮನ್‌, ಚೆಂಡನ್ನು ಚುವಮೆನಿ ಅವರತ್ತ ಕಳುಹಿಸಿದರು. ಅವರು 25 ಮೀಟರ್ಸ್‌ ದೂರದಿಂದ ಬಿರುಸಿನ ವೇಗದಲ್ಲಿ ಒದ್ದ ಚೆಂಡು ಗೋಲ್‌ಕೀಪರ್‌ ಜೋರ್ಡನ್‌ ಪಿಕ್‌ಫೋರ್ಡ್‌ ಅವರನ್ನು ತಪ್ಪಿಸಿ ಗುರಿ ಸೇರಿತು.

ಎರಡನೇ ಅವಧಿಯ ಏಳನೇ ನಿಮಿಷದಲ್ಲಿ ಚುವಮೆನಿ, ಎದುರಾಳಿ ತಂಡದ ಬುಕಾಯೊ ಸಾಕಾ ಅವರನ್ನು ಪೆನಾಲ್ಟಿ ಆವರಣದಲ್ಲಿ ಬೀಳಿಸಿದರು. ರೆಫರಿ ಇಂಗ್ಲೆಂಡ್‌ಗೆ ಪೆನಾಲ್ಪಿ ಕಿಕ್‌ ಅವಕಾಶ ನೀಡಿದರು. ಕೇನ್‌ ಅವರು ಚೆಂಡನ್ನು ಯಶಸ್ವಿಯಾಗಿ ಗುರಿ ಸೇರಿಸಿ 1–1 ರಲ್ಲಿ ಸಮಬಲಕ್ಕೆ ಕಾರಣರಾದರು.

78ನೇ ನಿಮಿಷದಲ್ಲಿ ಫ್ರಾನ್ಸ್‌ ಮತ್ತೆ ಮುನ್ನಡೆ ಗಳಿಸಿತು. ಗ್ರೀಸ್‌ಮನ್‌ ಅವರು ನೀಡಿದ ಕ್ರಾಸ್‌ನಲ್ಲಿ ಜಿರೋಡ್‌ ಹೆಡರ್‌ ಮೂಲಕ ಗೋಲು ಗಳಿಸಿದರು.

ನಿಗದಿತ ಅವಧಿ ಕೊನೆಗೊಳ್ಳಲು ಆರು ನಿಮಿಷಗಳು ಇದ್ದಾಗ ಇಂಗ್ಲೆಂಡ್‌ಗೆ ಪೆನಾಲ್ಟಿ ಕಿಕ್‌ ದೊರೆಯಿತು. ಥಿಯೊ ಹೆರ್ನಾಂಡೆಜ್‌ ಅವರು ಇಂಗ್ಲೆಂಡ್‌ನ ಸಬ್‌ಸ್ಟಿಟ್ಯೂಟ್‌ ಆಟಗಾರ ಮೇಸನ್‌ ಮೌಂಟ್‌ ಅವರನ್ನು ಕೆಳಕ್ಕೆ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ನೀಡಿದರು. ಪಂದ್ಯದಲ್ಲಿ ತಮ್ಮ ಎರಡನೇ ಪೆನಾಲ್ಟಿ ಕಿಕ್‌ ತೆಗೆದುಕೊಂಡ ಕೇನ್‌, ಗುರಿ ಸೇರಿಸಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT