ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದಲಿ.. ಪ್ರಶಸ್ತಿ ಕನಸಿನಲಿ...

Last Updated 30 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಡಿಸೆಂಬರ್‌ 27ರಂದು ನಡೆದ ಒಮನ್ ಎದುರಿನ ಸೌಹಾರ್ದ ಪಂದ್ಯ ಗೋಲುರಹಿತ ಸಮಬಲದಲ್ಲಿ ಮುಕ್ತಾಯಗೊಂಡಾಗ ಭಾರತ ಫುಟ್‌ಬಾಲ್ ತಂಡದವರು ನಿಟ್ಟುಸಿರು ಬಿಟ್ಟರು. ಕೋಚ್‌ ಸ್ಟೀಫನ್ ಕಾನ್‌ಸ್ಟಂಟೇನ್ ಅವರ ಮುಖದಲ್ಲಿ ಮಂದಹಾಸ ಮೂಡಿತು. ಫಿಫಾ ಮತ್ತು ಏಷ್ಯಾದ ರ‍್ಯಾಂಕಿಂಗ್‌ನಲ್ಲಿ ತನಗಿಂತ ಐದು ಸ್ಥಾನ ಮೇಲೆ ಇರುವ ಒಮನ್‌ ವಿರುದ್ಧದ ಈ ‘ನೈತಿನ ಜಯ’ ತಂಡದ ವಿಶ್ವಾಸ ಮತ್ತು ಭರವಸೆಯನ್ನು ಇಮ್ಮಡಿಗೊಳಿಸಿತ್ತು.

ಇದು, ಜನವರಿ ಐದರಂದು ಯುಎಇಯಲ್ಲಿ ಆರಂಭವಾಗಲಿರುವ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲ್ಲುವ ಛಲದೊಂದಿಗೆ ಕಣಕ್ಕೆ ಇಳಿಯಲು ಸುನಿಲ್ ಚೆಟ್ರಿ ಪಡೆಗೆ ಬಲ ತುಂಬಲಿದೆ.

62 ವರ್ಷಗಳ ಇತಿಹಾಸ ಇರುವ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾರತ ಈ ಹಿಂದೆ ಕೇವಲ ಮೂರು ಬಾರಿ ಆಡಿದೆ. ಅದರಲ್ಲಿ ಒಮ್ಮೆ ರನ್ನರ್ ಅಪ್ ಆಗಿದೆ. ಮೊದಲ ಎರಡು ಟೂರ್ನಿಗಳಲ್ಲಿ ಆಡಲು ಅರ್ಹತೆ ಗಳಿಸದ ಭಾರತ ತಂಡ 1964ರಲ್ಲಿ, ಮೂರನೇ ಪ್ರಯತ್ನದಲ್ಲಿ ಮೊದಲ ಬಾರಿ ಅಂಗಣಕ್ಕೆ ಇಳಿಯಿತು. ನಾಲ್ಕೇ ತಂಡಗಳು ಸ್ಪರ್ಧಿಸಿದ್ದ ಆ ವರ್ಷ ಎರಡನೇ ಸ್ಥಾನ ಗಳಿಸಿತು. ಇಸ್ರೇಲ್‌ ಚಾಂಪಿಯನ್ ಆಗಿತ್ತು.

ನಂತರ ನಾಲ್ಕು ಬಾರಿ ನಡೆಸಿದ ಪ್ರಯತ್ನಕ್ಕೂ ಫಲ ಸಿಗಲಿಲ್ಲ. ಭಾಗವಹಿಸುವ ತಂಡಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಭಾರತದ ಆಸೆಯೂ ಕಮರಿತು. 1960ರಲ್ಲಿ ಭಾಗವಹಿಸಿದ ತಂಡಗಳ ಸಂಖ್ಯೆ ಮೊದಲ ಬಾರಿ ಎರಡಂಕಿ ದಾಟಿತ್ತು. 1984ರಲ್ಲಿ ಮತ್ತೆ ಭಾರತ ಅರ್ಹತೆ ಗಳಿಸಿತು. ಆದರೆ ಗುಂಪು ಹಂತದಲ್ಲೇ ಹೊರಬಿದ್ದು ಕೊನೆಯ ಸ್ಥಾನದಲ್ಲಿ ಉಳಿಯಿತು.

ನಂತರ 2007ರ ವರೆಗೆ ಸತತ ಆರು ಬಾರಿ ಅರ್ಹತೆ ಗಳಿಸದೇ ನಿರಾಸೆ ಕಂಡಿತು. 2011ರಲ್ಲಿ 16 ತಂಡಗಳು ಟೂರ್ನಿಯಲ್ಲಿ ಇದ್ದವು. ಮೊದಲ ಸುತ್ತಿನಲ್ಲೇ ಹೊರ ಬಿದ್ದ ಭಾರತ 16ನೇ ಸ್ಥಾನದಲ್ಲಿ ಉಳಿಯಿತು.

ಇಂಡಿಯನ್ ಸೂಪರ್ ಲೀಗ್‌ನ ಬಲ:ಕಳೆದ ಬಾರಿ, 2015ರಲ್ಲಿ ಭಾರತ ತಂಡ ಮತ್ತೆ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಯಿತು. ಆದರೆ ಈ ನಡುವೆ ಆರಂಭಗೊಂಡ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿ ಇಲ್ಲಿನ ಫುಟ್‌ಬಾಲ್‌ಗೆ ಹೊಸ ಆಯಾಮ ನೀಡಿತು. ನಿರಂತರ ಫುಟ್‌ಬಾಲ್ ಚಟುವಟಿಕೆಗೆ ಕಾರಣವಾದ ಲೀಗ್‌, ವಿದೇಶಿ ಆಟಗಾರರ ಜೊತೆ ದೇಶದ ಯುವ ಆಟಗಾರರು ಅನುಭವಗಳನ್ನು ಹಂಚಿಕೊಳ್ಳಲು ನೆರವಾಗಿದೆ. ಇದರಿಂದಾಗಿ ಇಲ್ಲಿನವರ ತಂತ್ರ, ಶೈಲಿ ಮೊನಚು ಪಡೆದುಕೊಂಡಿದೆ.

‘ಸಾಕಷ್ಟು ಲೀಗ್‌ಗಳಲ್ಲಿ ಆಡಿದ ಅನುಭವದೊಂದಿಗೆ ಬರುವ ವಿದೇಶಿ ಆಟಗಾರರ ಜೊತೆ ಅಂಗಣ ಮತ್ತು ಡ್ರೆಸಿಂಗ್ ಕೊಠಡಿ ಹಂಚಿಕೊಳ್ಳುವುದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಐಎಸ್‌ಎಲ್‌ನಿಂದ ಆಗಿರುವ ದೊಡ್ಡ ಲಾಭಗಳಲ್ಲಿ ಇದು ಕೂಡ ಒಂದು’ ಎಂದು ಯುವ ಮಿಡ್‌ಫೀಲ್ಡರ್‌ ಉದಾಂತ ಸಿಂಗ್ ಹೇಳುತ್ತಾರೆ.

ಭಾರತ ತಂಡದವರು ಏಷ್ಯಾಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದಾರೆ.
ಭಾರತ ತಂಡದವರು ಏಷ್ಯಾಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದಾರೆ.

ಐಎಸ್‌ಎಲ್‌ನಲ್ಲಿ ನಿರಂತರವಾಗಿ ಆಡಿರುವ ಆಟಗಾರರು ಭಾರತ ತಂಡದಲ್ಲಿದ್ದಾರೆ. ಒಟ್ಟು 103 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿ ಸುನಿಲ್ ಚೆಟ್ರಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಎಸ್‌ಎಲ್‌ನ ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿಯ ಪ್ರಬುದ್ಧ ಆಟಗಾರ ಜೆಜೆ ಲಾಲ್‌ಫೆಕ್ಲುವಾ, ಬಿಎಫ್‌ಸಿಯ ಭರವಸೆಯ ಆಟಗಾರ ಉದಾಂತ ಸಿಂಗ್‌, ಗೋಲ್‌ಕೀಪರ್‌ಗಳಾದ ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್‌ ಸೇರಿದಂತೆ ತಂಡದಲ್ಲಿರುವ ಪ್ರಮುಖರೆಲ್ಲರೂ ಐಎಸ್‌ಎಲ್‌ನಲ್ಲಿ ಕಾಲ್ಚಳಕ ತೋರಿದ್ದಾರೆ. ಆದ್ದರಿಂದ ಈ ಬಾರಿ ತಂಡದಿಂದ ಉತ್ತಮ ಸಾಧನೆ ನಿರೀಕ್ಷಿಸಲಾಗಿದೆ.

ಜಪಾನ್‌, ಸೌದಿ, ಕೊರಿಯಾ ಸವಾಲು:ಭಾರತ ಈಗ ಫಿಫಾ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದೆ. ಎಎಫ್‌ಸಿ ರ‍್ಯಾಂಕಿಂಗ್‌ನಲ್ಲಿ ತಂಡದ ಸ್ಥಾನ 15ನೆಯದು. ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಜಪಾನ್‌, ತಲಾ ಮೂರು ಬಾರಿ ಚಾಂಪಿಯನ್‌ ಆಗಿರುವ ಸೌದಿ ಅರೆಬಿಯಾ ಮತ್ತು ಇರಾನ್‌, ಪ್ರಬಲ ಶಕ್ತಿಗಳಾಗಿರುವ ದಕ್ಷಿಣ ಕೊರಿಯಾ, ಇಸ್ರೇಲ್‌, ಕುವೈತ್‌, ಆಸ್ಟ್ರೇಲಿಯಾ, ಇರಾಕ್ ಮುಂತಾದ ತಂಡಗಳ ಸವಾಲನ್ನೂ ಭಾರತ ಮೆಟ್ಟಿ ನಿಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT