ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುರಾಂಡ್‌ ಕಪ್‌ ಟ್ರೋಫಿ ಪ್ರವಾಸಕ್ಕೆ ಚಾಲನೆ: 27 ವರ್ಷಗಳ ನಂತರ ವಿದೇಶಿ ತಂಡಗಳು ಭಾಗಿ

Published 30 ಜೂನ್ 2023, 16:56 IST
Last Updated 30 ಜೂನ್ 2023, 16:56 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾದ ಅತೀ ಹಳೆಯ ಫುಟ್‌ಬಾಲ್ ಟೂರ್ನಿ ಎನಿಸಿರುವ ಡ್ಯರಾಂಡ್‌ ಕಪ್‌ನಲ್ಲಿ 27 ವರ್ಷಗಳ ನಂತರ ವಿದೇಶಿ ತಂಡಗಳು ಭಾಗವಹಿಸಲಿವೆ ಎಂದು ಸಂಘಟಕರು ಶುಕ್ರವಾರ  ತಿಳಿಸಿದ್ದಾರೆ. ಇದು ದೇಶದ ಫುಟ್‌ಬಾಲ್‌ ಋತುವಿನ ಮೊದಲ ಟೂರ್ನಿ ಕೂಡ.

ವಿಶ್ವದ ಮೂರನೇ ಅತೀ ಹಳೆಯ ಟೂರ್ನಿಯೂ ಆಗಿರುವ ಡ್ಯುರಾಂಡ್‌ ಕಪ್‌ನಲ್ಲಿ ಈ ಬಾರಿ ನೇಪಾಳ, ಭೂತಾನ್‌, ಬಾಂಗ್ಲಾದೇಶದ ತಂಡಗಳೂ ಸೇರಿ 24 ತಂಡಗಳು ಭಾಗವಹಿಸಲಿವೆ.

ಆಗಸ್ಟ್‌ 3ರಂದು ಕೋಲ್ಕತ್ತದಲ್ಲಿ ಆರಂಭವಾಗುವ 132ನೇ ಡ್ಯುರಾಂಡ್‌ ಕಪ್‌ನ ಟ್ರೊಫಿ ಪ್ರವಾಸಕ್ಕೆ ಶುಕ್ರವಾರ ಚಾಲನೆ ಇಲ್ಲಿ ನೀಡಲಾಯಿತು.

ಭೂಸೇನಾ ಮುಖ್ಯಸ್ಥ ಜನರಲ್‌ ಮನೋಜ್ ಪಾಂಡೆ, ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಮತ್ತು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಟ್ರೋಫಿ ಪ್ರವಾಸಕ್ಕೆ ನಿಶಾನೆ ತೋರಿದರು.

ಕೋಲ್ಕತ್ತದ ಜೊತೆ ಗುವಾಹಟಿ, ಕೋಕ್ರಝಾರ್‌ ಮತ್ತು ಶಿಲ್ಲಾಂಗ್‌ನಲ್ಲೂ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಕೋಲ್ಕತ್ತದಲ್ಲಿ ನಿಗದಿಯಾಗಿದೆ. ಸೇನಾ ಪಡೆಗಳು ಸಂಘಟಿಸುವ ಈ ಟೂರ್ನಿ ದೇಶಕ್ಕೆ ಹಲವು ಫುಟ್‌ಬಾಲ್‌ ತಾರೆಗಳಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಿದೆ.

ಕೋಲ್ಕತ್ತದಲ್ಲಿ ಕಳೆದ ವರ್ಷ ಸುನೀಲ್‌ ಚೆಟ್ರಿ ವೃತ್ತಿ ಜೀವನದಲ್ಲೇ ಮೊದಲ ಬಾರಿ ಡ್ಯುರಾಂಡ್‌ ಕಪ್‌ ಟೂರ್ನಿ ಗೆದ್ದುಕೊಂಡಿದ್ದರು. ಅವರ ನೇತೃತ್ವದ ಬೆಂಗಳೂರು ಎಫ್‌ಸಿ ತಂಡ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ 2–1 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿ ಮೇಲೆ ಜಯಗಳಿಸಿತ್ತು.

1888ರಲ್ಲಿ ಮೊದಲ ಬಾರಿ ಈ ಟೂರ್ನಿ ‘ಆರ್ಮಿ ಕಪ್‌’ ಹೆಸರಿನಲ್ಲಿ ನಡೆದಿತ್ತು. ಆರಂಭದ ವರ್ಷಗಳಲ್ಲಿ ಈ ಟೂರ್ನಿ ಭಾರತದಲ್ಲಿರುವ ಬ್ರಿಟಿಷ್ ಸೇನಾ ತುಕಡಿಗಳಿಗೆ ಮಾತ್ರ ಇದು ಸೀಮಿತಗೊಂಡಿತ್ತು.

ಈ ಟೂರ್ನಿ ವಿಶಿಷ್ಠವಾಗಿದ್ದು, ವಿಜೇತ ತಂಡಕ್ಕೆ ಮೂರು ಟ್ರೋಫಿಗಳನ್ನು ನೀಡಲಾಗುತ್ತದೆ. ಡುರಾಂಡ್‌ ಕಪ್‌ (ರೋಲಿಂಗ್‌ ಶೀಲ್ಡ್ ಮತ್ತು ಮೂಲ ಬಹುಮಾನ), ಶಿಮ್ಲಾ ಟ್ರೋಫಿ (ಇದೂ ರೋಲಿಂಗ್‌ ಟ್ರೋಫಿ, 1904ರಲ್ಲಿ ಮೊದಲ ಬಾರಿ ಶಿಮ್ಲಾ ನಿವಾಸಿಗಳು ಇದನ್ನು ನೀಡಿದ್ದರು) ಮತ್ತು ಪ್ರೆಸಿಡೆಂಟ್ಸ್‌ ಕಪ್‌ (1956ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಇದನ್ನು ಮೊದಲ ಸಲ ಪ್ರದಾನ ಮಾಡಿದ್ದರು)– ಈ ಮೂರು ಟ್ರೋಫಿಗಳು.

ಮುಂದಿನ ಒಂದು ತಿಂಗಳು ದೇಶದ ಪ್ರಮುಖ ನಗರಗಳಾದ ಶಿಮ್ಲಾ, ಉಧಾಮಪುರ, ಜೈಪುರ, ಮುಂಬೈ, ಪುಣೆ, ಬೆಂಗಳೂರು, ಭುವನೇಶ್ವರ, ಕೋಕ್ರಝಾರ್‌, ಗುವಾಹಟಿ, ಶಿಲ್ಲಾಂಗ್‌ ಪ್ರವಾಸ ಮುಗಿಸಿ ಕೋಲ್ಕತ್ತ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT