ಪ್ಯಾರಿಸ್ : ಜೀನ್ ಫಿಲೀಪ್ ಮಾಟೆಟಾ ಗಳಿಸಿದ ಎರಡು ಗೋಲುಗಳ ಬಲದಿಂದ ಆತಿಥೇಯ ಫ್ರಾನ್ಸ್ ತಂಡವು ಒಲಿಂಪಿಕ್ಸ್‌ನ ಪುರುಷರ ಫುಟ್‌ಬಾಲ್‌ನಲ್ಲಿ ಫೈನಲ್ ಪ್ರವೇಶಿಸಿದೆ. ಚಿನ್ನದ ಪದಕಕ್ಕಾಗಿ ಶುಕ್ರವಾರ ಟೋಕಿಯೊ ಒಲಿಂಪಿಕ್ಸ್‌ನ ರನ್ನರ್ ಅಪ್ ಸ್ಪೇನ್ ವಿರುದ್ಧ ಸೆಣಸಾಟ ನಡೆಸಲಿವೆ.
ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಆತಿಥೇಯ ಫ್ರಾನ್ಸ್ ತಂಡವು ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲು ದಾಖಲಿಸಿ, 3–1ರಿಂದ ಈಜಿಪ್ಟ್ ತಂಡವನ್ನು ಮಣಿಸಿತು.
ಪಂದ್ಯದ 83ನೇ ಮತ್ತು 99ನೇ ನಿಮಿಷದಲ್ಲಿ ಮಾಟೆಟಾ ಚೆಂಡನ್ನು ಗುರಿ ಸೇರಿಸಿ ಫ್ರಾನ್ಸ್ ತಂಡದ ಗೆಲುವಿನ ರೂವಾರಿಯಾದರು. ಮತ್ತೊಂದು ಗೋಲನ್ನು ಮೈಕೆಲ್ ಅಕ್ಪೋವಿ ಒಲಿಸ್ (108ನೇ ನಿಮಿಷ) ದಾಖಲಿಸಿದರು. ಈಜಿಪ್ಟ್ ಪರ ಏಕೈಕ ಗೋಲನ್ನು ಮೊಹಮ್ಮದ್ ಸಾಬರ್ (62ನೇ ನಿ) ತಂದಿತ್ತರು.
ಇದಕ್ಕೂ ಮೊದಲು ನಡೆದ ಮತ್ತೊಂದು ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ ಯುರೋ ಕಪ್ ಚಾಂಪಿಯನ್ ಸ್ಪೇನ್ ತಂಡವು 2–1ರಿಂದ ಟೋಕಿಯೊದಲ್ಲಿ ಕಂಚು ಗೆದ್ದಿದ್ದ ಮೊರಾಕ್ಕೊ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು.
ಸ್ಪೇನ್ ಪರ ಫರ್ಮಿನ್ ಲೋಪೆಜ್ (65ನೇ ನಿ) ಮತ್ತು ಜುವಾನ್ಲು ಸ್ಯಾಂಚೆಜ್ (85ನೇ ನಿ) ಗೋಲು ಗಳಿಸಿದರು. ಸೋಫಿನ್ ರಹಿಮಿ (37ನೇ ನಿ) ಅವರು ಮೊರಕ್ಕೊ ಪರ ಗೋಲು ಗಳಿಸಿದರು.