ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪ್ರೀತ್, ಸಂಜು ವರ್ಷದ ಫುಟ್‌ಬಾಲ್‌ ಪಟುಗಳು

ರತನ್‌ಬಾಲಾ ದೇವಿ ಉದಯೋನ್ಮುಖ ಆಟಗಾರ್ತಿ; ಅನಿರುದ್ಧ ಥಾಪಾ ಉದಯೋನ್ಮುಖ ಆಟಗಾರ
Last Updated 25 ಸೆಪ್ಟೆಂಬರ್ 2020, 13:06 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಪುರುಷರ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮತ್ತು ಮಹಿಳಾ ತಂಡದ ಮಿಡ್‌ಫೀಲ್ಡರ್ ಸಂಜು ಅವರನ್ನು ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ವರ್ಷದ ಆಟಗಾರರು ಪ್ರಶಸ್ತಿಗೆ ಶುಕ್ರವಾರ ಆಯ್ಕೆ ಮಾಡಿದೆ.

ಗುರುಪ್ರೀತ್ ಸಿಂಗ್ ಸಂಧು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಎರಡನೇ ಗೋಲ್‌ಕೀಪರ್ ಎನಿಸಿದ್ದಾರೆ. 2009ರಲ್ಲಿ ಸುಬ್ರತಾ ಪಾಲ್ ಅವರು ಈ ಗೌರವಕ್ಕೆ ಪಾತ್ರರಾದ ಮೊದಲ ಗೋಲ್‌ಕೀಪರ್ ಆಗಿದ್ದರು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತು ಐ–ಲೀಗ್‌ನಲ್ಲಿ ಆಡುವ ತಂಡಗಳ ಕೋಚ್‌ಗಳು ಹಾಕಿದ ಮತಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ಉನ್ನತ ಸ್ಥಾನಕ್ಕೇರುವ ಹಂಬಲ ಸದಾ ಕಾಲ ಇದ್ದೇ ಇರುತ್ತದೆ. ಈ ಪ್ರಶಸ್ತಿ ಗಳಿಸುವುದು ನನ್ನ ಕನಸಾಗಿತ್ತು. ಸುನಿಲ್ ಚೆಟ್ರಿ ಅವರು ಅನೇಕ ಬಾರಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ಪ್ರಶಸ್ತಿಗೆ ಆಯ್ಕೆಯಾದಾಗಲೆಲ್ಲ ನಾನು ಕೂಡ ಆ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆಯಾಗುತ್ತಿತ್ತು. ನನ್ನನ್ನು ಬೆಂಬಲಿಸಿದಎಐಎಫ್‌ಎಫ್ ಮತ್ತು ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ’ ಎಂದು ಗುರುಪ್ರೀತ್ ಸಿಂಗ್ ಸಂಧು ಹೇಳಿದ್ದಾರೆ.

‘ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ ಖತಾರ್‌ ವಿರುದ್ಧ ನಡೆದ ಪಂದ್ಯದಲ್ಲಿ ಮಾಡಿದ ಉತ್ತಮ ಸಾಧನೆ, ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಪರ 11 ಕ್ಲೀನ್ ಶೀಟ್‌ಗಳನ್ನು ಸಾಧಿಸಿದ್ದು, ಚಿನ್ನದ ಗ್ಲೌ ಪಡೆದದ್ದು ಇತ್ಯಾದಿಗಳೆಲ್ಲ ತಂಡದ ಸಹಕಾರದಿಂದ ಆಗಿದೆ‘ ಎಂದು ಅವರು ಸ್ಮರಿಸಿದರು.

ರತನ್‌ಬಾಲಾ ದೇವಿ ಅವರು ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದ ಇಬ್ಬರು ಪ್ರಶಸ್ತಿ ಪುರಸ್ಕೃತರನ್ನು ಕೂಡ ಎಐಎಫ್‌ಎಫ್‌ ತಾಂತ್ರಿಕ ನಿರ್ದೇಶಕ ಐಸಕ್ ದೋರು ಅವರೊಂದಿಗೆ ಚರ್ಚಿಸಿ ಮುಖ್ಯ ಕೋಚ್ ಮೈಮೋಳ್ ರಾಕಿ ಆಯ್ಕೆ ಮಾಡಿದ್ದಾರೆ.

’ಇದೊಂದು ದೊಡ್ಡ ಗೌರವ. ಕಳೆದ ಕೆಲವು ವರ್ಷಗಳಲ್ಲಿ ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಶಸ್ತಿಗೆ ಆಯ್ಕೆಯಾಗಲು ಕಾರಣರಾದ ಎಲ್ಲರಿಗೂ ಅಭಾರಿಯಾಗಿದ್ದೇನೆ’ ಎಂದು ಸಂಜು ಹೇಳಿದರು.

ಪುರುಷರ ವಿಭಾಗದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಮಿಡ್‌ಫೀಲ್ಡರ್ ಅನಿರುದ್ಧ ಥಾಪ ಆಯ್ಕೆಯಾಗಿದ್ದಾರೆ.ಅವರ ಆಯ್ಕೆಯೂ ಕೋಚ್‌ಗಳ ಮತಗಳ ಆಧಾರದಲ್ಲಿ ನಡೆದಿದೆ. ಮಣಿಪುರದ ಎಲ್‌.ಅಜಿತ್ ಕುಮಾರ್ ಮೀಟಿ ಉತ್ತಮ ರೆಫರಿ ಪ್ರಶಸ್ತಿಗೂ ತಮಿಳುನಾಡಿನ ಪಿ.ವೈರಮುತ್ತು ಉತ್ತಮ ಸಹಾಯಕ ರೆಫರಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT