ಶನಿವಾರ, ಫೆಬ್ರವರಿ 22, 2020
19 °C

ಡೊಂಗೆಲ್ ಗೋಲು; ತಪ್ಪಿದ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಶಾಂಬೆ, ತಜಿಕಿಸ್ತಾನ: ಮುಕ್ತಾಯದ ಕ್ಷಣಗಳಲ್ಲಿ ಸೆಮಿನ್‌ಲೆನ್‌ ಡೊಂಗೆಲ್‌ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ, ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗುರುವಾರ ಅಫ್ಗಾನಿಸ್ತಾನ ತಂಡದ ವಿರುದ್ಧ 1–1 ಗೋಲುಗಳಿಂದ ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಸೆಂಟ್ರಲ್‌ ರಿಪಬ್ಲಿಕನ್‌ ಸ್ಟೇಡಿಯಂ ನಲ್ಲಿ ನಡೆದ ‘ಇ’ ಗುಂಪಿನ ಈ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಗಳಿಸಿದ ಗೋಲಿನಿಂದ 1–0 ಮುನ್ನಡೆ ಪಡೆದಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ (90+3) ಒದಗಿಬಂದ ‘ಕಾರ್ನರ್‌ ಅವಕಾಶ’ದಲ್ಲಿ ಬ್ರಂಡನ್‌ ಫರ್ನಾಂಡಿಸ್‌ ಅವರು ಕಳುಹಿಸಿದ ಚೆಂಡನ್ನು ಸೆಮಿನ್‌ಲೆನ್‌ ಗೋಲಿನೊಳಕ್ಕೆ ಹೆಡ್‌ ಮಾಡಿದರು. ಅದುವರೆಗೆ ಸೋಲಿನ ಆತಂಕದಲ್ಲಿದ್ದ ಭಾರತದ ಪಾಳಯದಲ್ಲಿ ನಿಟ್ಟುಸಿರು ಮೂಡಿತು.

ಭಾರತ ಪಂದ್ಯವನ್ನು ಭರವಸೆಯೊಡನೆ ಆರಂಭಿಸಿದಂತೆ ಕಂಡರೂ ಅಫ್ಗಾನಿಸ್ತಾನ ಕೆಲಹೊತ್ತಿನ ನಂತರ ಸತತ  ದಾಳಿಗಳ ಮೂಲಕ ಹಿಡಿತ ಸಾಧಿಸತೊಡಗಿತು. ಉದಾಂತ ಸಿಂಗ್‌, ಆಶಿಕ್‌, ಸೆಹಲ್‌ ಮತ್ತು ಚೆಟ್ರಿ ಅವರಿದ್ದ ಪಡೆ ದಾಳಿಯನ್ನು ಪರಿಣಾಮಕಾರಿಯಾಗಿ ಸಂಘಟಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಅಫ್ಗಾನಿಸ್ತಾನ ಹೇರಿದ ಒತ್ತಡ, ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ (45+1) ಫಲ ನೀಡಿತು. ಬಲಗಡೆಯಿಂದ ನಡೆದ ದಾಳಿಯಲ್ಲಿ ಡೇವಿಡ್‌ ನಜೆಮ್‌ ಚೆಂಡನ್ನು ಮುನ್ನಡೆಸಿಕೊಂಡು ಜೆಲ್ಫಿ ನರ್ಝಾರಿ ಅವರತ್ತ ಕಳುಹಿಸಿದರು. ಅವರು ಚೆಂಡನ್ನು ಗೋಲಿನತ್ತ ಮುನ್ನಡೆಸಿ ಗುರಿತಲುಪಿಸಿಯೇ ಬಿಟ್ಟರು. ಗೋಲ್‌ಕೀಪರ್‌ ಗುರುಪ್ರೀತ್‌ ಅವರ ತಡೆಯಲೆತ್ನಿಸಿದರೂ ಬೆರಳತುದಿಗೆ ತಾಗಿದ ಚೆಂಡು ಗೋಲಿನೊಳಕ್ಕೆ ಹೊಕ್ಕಿತು.

ಮೂರು ‘ಡ್ರಾ’, ಒಂದು ಸೋಲಿನೊಂದಿಗೆ ಒಟ್ಟು ಮೂರು ಪಾಯಿಂಟ್ಸ್‌ ಸಂಗ್ರಹಿಸಿ ನಾಲ್ಕನೇ ಸ್ಥಾನದಲ್ಲಿದೆ. ಒಂದೂ ಗೆಲುವು ಕಾಣದ ಕಾರಣ ಭಾರತ ತಂಡದ ವಿಶ್ವಕಪ್‌ ಕನಸು ಕರಗತೊಡಗಿದೆ. ಅಫ್ಗಾನಿಸ್ತಾನ ನಾಲ್ಕು ಪಂದ್ಯಗಳಿಂದ (1 ಗೆಲುವು, ಒಂದು ಡ್ರಾ, ಎರಡು ಸೋಲು) ನಾಲ್ಕು ಅಂಕ ಸಂಗ್ರಹಿಸಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಕತಾರ್‌ ನಾಲ್ಕು ಪಂದ್ಯಗಳಿಂದ ಹತ್ತು ಅಂಕ ಸಂಗ್ರಹಿಸಿ ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು