ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದಾಯ ಪಂದ್ಯವಾಡಿದ ಸುನಿಲ್ ಚೆಟ್ರಿ: ಕುವೈತ್ ವಿರುದ್ಧ ಪಂದ್ಯ ಗೋಲಿಲ್ಲದೇ ಡ್ರಾ

Published 7 ಜೂನ್ 2024, 0:08 IST
Last Updated 7 ಜೂನ್ 2024, 0:08 IST
ಅಕ್ಷರ ಗಾತ್ರ

‌ಕೋಲ್ಕತ್ತ: ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ ಅವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಉಡುಗೊರೆಯನ್ನು ನೀಡಲು ಭಾರತದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೆ ಕುವೈತ್‌ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಅರ್ಹತಾ ಗುಂಪಿನ ಈ ನಿರ್ಣಾಯಕ ಪಂದ್ಯವನ್ನು ಭಾರತ ಗೋಲಿಲ್ಲದೇ ಡ್ರಾ ಮಾಡಿಕೊಂಡು ಸಮಾಧಾನ ಪಟ್ಟಿತು.

39 ವರ್ಷದ ಚೆಟ್ರಿ ಅವರ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ಈ ಪಂದ್ಯದ ಮೂಲಕ ತೆರೆಬಿದ್ದಿತು. ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಈ ಫಲಿತಾಂಶವು ಅರ್ಹತಾ ಸುತ್ತಿನ ಮೂರನೇ ಹಂತಕ್ಕೆ ತಲುಪುವ ಭಾರತದ ಆಸೆಗೆ ಹಿನ್ನಡೆ ಉಂಟುಮಾಡಿತು.

‘ಎ’ ಗುಂಪಿನಲ್ಲಿರುವ ಭಾರತ ಇಂದಿನ ‘ಡ್ರಾ’ ನಂತರ ಒಟ್ಟು ಐದು ಪಾಯಿಂಟ್ಸ್‌ ಸಂಗ್ರಹಿಸಿದೆ. ಜೂನ್‌ 11ರಂದು ಭಾರತ ಎರಡನೇ ಸುತ್ತಿನ ತನ್ನ ಕೊನೆಯ ಪಂದ್ಯವನ್ನು ಏಷ್ಯನ್ ಚಾಂಪಿಯನ್ಸ್‌ ಕತಾರ್ ವಿರುದ್ಧ ಆಡಲಿದೆ. ನಾಲ್ಕು ಪಾಯಿಂಟ್ಸ್‌ ಕಲೆಹಾಕಿರುವ ಕುವೈತ್ ತಂಡವು ಅದೇ ದಿನ ಇನ್ನೊಂದು ಪಂದ್ಯದಲ್ಲಿ ಅಫ್ಗಾನಿಸ್ತಾನವನ್ನು ಎದುರಿಸಲಿದೆ.

ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಕ್ವೆಟ್ಟಾದಲ್ಲಿ ನಡೆದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಗೋಲು ಹೊಡೆದಿದ್ದರು. ಆ ಪಂದ್ಯ 1–1 ಡ್ರಾ ಆಗಿತ್ತು. ಈ ಪಂದ್ಯದಲ್ಲಿ ಅವರಿಗೆ ಗೋಲು ಹೊಡೆಯಲಾಗಲಿಲ್ಲ. ಆದರೆ ಕೊನೆಯ ಪಂದ್ಯವೂ ಡ್ರಾ ಆಯಿತು.

ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳೂ ಅವಕಾಶಕ್ಕಾಗಿ ಉತ್ತಮ ಪ್ರಯತ್ನ ನಡೆಸಿದವು. ಆದರೆ ಫಿನಿಷಿಂಗ್ ಹಂತದಲ್ಲಿ ಎಡವಿದವು. ನಾಲ್ಕನೇ ನಿಮಿಷ ಇದ್‌ ಅಲ್‌ ರಶೀದಿ ಅವರು ಭಾರತದ ಗೋಲಿನತ್ತ ಧಾವಿಸಿ ಮೊಹಮದ್‌ ದಹಮ್ ಅವರಿಗೆ ಚೆಂಡನ್ನು ಪಾಸ್‌ ಮಾಡಿದರು. ಆದರೆ ಅವರ ಯತ್ನ ವಿಫಲವಾಯಿತು. 11ನೇ ನಿಮಿಷ ಚೆಟ್ರಿ ಅವರ ಗೋಲು ಯತ್ನವನ್ನು ರಕ್ಷಣೆ ಆಟಗಾರ ಹಸನ್ ಅಲ್ನೇಝಿ ಉತ್ತಮವಾಗಿ ತಡೆದರು. 25ನೇ ನಿಮಿಷ ಜಯ್ ಗುಪ್ತಾ ಯತ್ನವೂ ವಿಫಲವಾಯಿತು.

ಕೋಚ್‌ ಇಗೊರ್ ಸ್ಟಿಮಾಚ್ ಅವರು ಮುಂಚೂಣಿ ದಾಳಿಯಲ್ಲಿ ರಹೀಮ್ ಅವರನ್ನು ಬ್ರಂಡನ್ ಫರ್ನಾಂಡಿಸ್ ಮತ್ತು ಚೆಟ್ರಿ ಅವರಿಗಿಂತ  ಮುಂದಕ್ಕೆ ತಂದು ಸಣ್ಣ ಬದಲಾವಣೆ ಮಾಡಿದ್ದರು. ಆದರೆ ಅದರಿಂದ ಯಶಸ್ಸು ಸಿಗಲಿಲ್ಲ.

47ನೇ ನಿಮಿಷ ಫೈಸಲ್ ಅಲ್ ಹರ್ಬಿ ಯತ್ನವನ್ನು ಗೋಲ್‌ಕೀಪರ್ ಗುರುಪ್ರೀತ್ ಯಶಸ್ವಿಯಾಗಿ ತಡೆದರು. ಕೊನೆಯಲ್ಲಿ ಭಾರತ ಸ್ವಲ್ಪ ಮೇಲುಗೈ ಸಾಧಿಸಿತು. ಒರಟಾಟಕ್ಕೂ ಕೊರತೆಯಿರಲಿಲ್ಲ. ಭಾರತದ ಪರ ಮೊದಲ ಪಂದ್ಯ ಆಡಿದ ಎಡ್ಮಂಡ್ ಮತ್ತು ಸುಲ್ತಾನ್ ಅಲ್ನೇಝಿ ನಡುವೆ ಜಗಳವಾಯಿತು. ರೆಫ್ರಿ ಇಬ್ಬರಿಗೂ ಹಳದಿ ಕಾರ್ಡ್‌ ದರ್ಶನ ಮಾಡಿಸಿದರು.

ಕ್ರೀಡಾಂಗಣದಲ್ಲಿ ಆವರಿಸಿದ ಶೂನ್ಯಭಾವ

ಕೋಲ್ಕತ್ತ (ಪಿಟಿಐ): ಸಾಲ್ಟ್‌ಲೇಕ್‌ ಕ್ರೀಡಾಂಗಣದ ಗ್ಯಾಲರಿಗಳೆಲ್ಲ ಗುರುವಾರ ಪ್ರೇಕ್ಷಕರಿಂದ ಭರ್ತಿಯಾಗಿದ್ದವು. ಆದರೆ ಸುನಿಲ್ ಚೆಟ್ರಿ ಅವರ ವಿದಾಯದ ಪಂದ್ಯ ಅದಾಗಿದ್ದ ಕಾರಣ ಅಲ್ಲಿ ಶೂನ್ಯಭಾವ ಆವರಿಸಿತ್ತು. 19 ವರ್ಷಗಳ ಕಾಲ ಭಾರತದ ಫುಟ್‌ಬಾಲ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಚೆಟ್ರಿ ಸೂಕ್ತ ಉತ್ತರಾಧಿಕಾರಿ ಕೊರತೆಯ ನಡುವೆಯೇ ನಿವೃತ್ತರಾದರು.

11ನೇ ನಂಬರ್ ಜರ್ಸಿ ತೊಡುತ್ತಿದ್ದ ಭಾರತ ತಂಡದ ಅತಿ ದೀರ್ಘ ಕಾಲದ ನಾಯಕ ಚೆಟ್ರಿ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಕುವೈತ್ ವಿರುದ್ಧ ವಿಶ್ವಕಪ್‌ ಫುಟ್‌ಬಾಲ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೊನೆಯ ಸಲ ಕ್ರೀಡಾಂಗಣಕ್ಕಿಳಿದರು. ಸುಮಾರು 59 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು.

ಟೀಮ್‌ ಬಸ್‌ನಿಂದ ಅವರು ಮೊದಲನೆಯವರಾಗಿ ಇಳಿದರು. ಗೇಟ್‌ನ ಹೊರಗಡೆ ನೀಲಿ ಜರ್ಸಿ ತೊಟ್ಟ ಜನಸಾಗರವೇ ಹರಿದಿತ್ತು. ಅಭಿಮಾನಿಗಳು ರಾಷ್ಟ್ರಧ್ವಜಗಳನ್ನು ಬೀಸಿ ಹರ್ಷೋದ್ಗಾರ ಮೊಳಗಿಸಿದರು. ಎಲ್ಲ ರಸ್ತೆಗಳು ಸಾಲ್ಟ್‌ಲೇಕ್‌ಗೆ ಮುಖಮಾಡಿದಂತೆ ಕಂಡವು.

ಕ್ರೀಡಾಂಗಣಕ್ಕೆ ಬಂದ ಅವರು ನಮಸ್ಕರಿಸುತ್ತ ಮೈದಾನದ ಸುತ್ತುಹಾಕಿದರು. ‘ಚಿನ್ನದ ಸುನಿಲ್, ನಿಮ್ಮನ್ನು ನಮ್ಮ ಹೃದಯಲ್ಲಿರಿಸುವೆವು’ ಎಂದು ಬಂಗಾಳಿ ಭಾಷೆಯಲ್ಲಿ ಬರೆದ ಬೃಹತ್ ಬ್ಯಾನರ್‌ಅನ್ನು ಡಗ್‌ಔಟ್‌ ಎದುರು ಹಾಕಲಾಗಿತ್ತು. ಚೆಟ್ರಿ ಅವರನ್ನು ಗೌರವಿಸುವ ಬರಹಗಳಿದ್ದ ಹಲವು ಬ್ಯಾನರ್‌ಗಳು ಕಾಣಿಸಿದವು.

ಪಂದ್ಯ ಆರಂಭಕ್ಕೆ ಮುನ್ನ ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ, ರಾಜ್ಯದ ಕ್ರೀಡಾ ಸಚಿವ ಅರುಪ್ ಭಟ್ಟಾಚಾರ್ಯ ಅವರು ಚೆಟ್ರಿ ಅವರಿಗೆ ಶುಭಹಾರೈಸಿದರು. ಮಮತಾ ಬ್ಯಾನರ್ಜಿ ಅವರೂ ಎಕ್ಸ್‌ನಲ್ಲಿ ಅಭಿನಂದನೆಯ ಪೋಸ್ಟ್‌ ಹಾಕಿದರು.

39 ವರ್ಷದ ಆಟಗಾರ ಮೈದಾನದಲ್ಲಿ ಯುವಕರನ್ನು ನಾಚಿಸುವಂತೆ ಲವಲವಿಕೆಯಿಂದ ಆಡಿದರು. ಇದು ಅವರಿಗೆ 151ನೇ ಪಂದ್ಯವಾಗಿದ್ದು, ಅವರು 94 ಗೋಲುಗಳನ್ನು ಹೊಡೆದಿದ್ದಾರೆ. ಇವೆರಡೂ ಭಾರತದ ಪರ ದಾಖಲೆ. ಗೋಲು ಗಳಿಕೆಯಲ್ಲಿ ಅವರಿಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (128), ಇರಾನ್‌ನ ಅಲಿ ದಾಯಿ (108) ಮತ್ತು ಆರ್ಜೆಂಟೀನಾದ ಲಯನೊಲ್ ಮೆಸ್ಸಿ (106) ಅವರು ಮಾತ್ರ ಚೆಟ್ರಿ ಅವರಿಗಿಂತ ಮುಂದಿದ್ದಾರೆ.

ಅವರ ಮಾವ ಹಾಗೂ ಮಾಜಿ ಕೋಚ್‌ ಸುಬ್ರತಾ ಭಟ್ಟಚಾರ್ಯ ಅವರ ಗೈರು ಎದ್ದುಕಂಡಿತು. ಆದರೆ ತಂದೆ ಖರ್ಗ, ತಾಯಿ ಸುಶೀಲಾ, ಪತ್ನಿ ಸೋನಮ್, 9 ತಿಂಗಳ ಮಗು ಧ್ರುವ್‌, ಭಾವ ಸಾಹೇಬ್ ಭಟ್ಟಾಚಾರ್ಯ ಅವರು ಸ್ಟ್ಯಾಂಡ್‌ನಿಂದ ಹುರಿದುಂಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT