ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಈಸ್ಟ್‌ ಬೆಂಗಾಲ್‌ಗೆ ಗೆಲುವು, ಬಿಎಫ್‌ಸಿಗೆ ನಿರಾಸೆ

;
Last Updated 11 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾದ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತವರು ನೆಲದಲ್ಲೇ ನಿರಾಸೆ ಅನುಭವಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಈಸ್ಟ್‌ ಬೆಂಗಾಲ್‌ 1–0 ರಲ್ಲಿ ಜಯಿಸಿತು. 69ನೇ ನಿಮಿಷದಲ್ಲಿ ಗೋಲು ಗಳಿಸಿದ ಬ್ರೆಜಿಲ್‌ನ ಸ್ಟ್ರೈಕರ್‌ ಕ್ಲೀಟನ್‌ ಸಿಲ್ವಾ, ಬೆಂಗಾಲ್‌ ಗೆಲುವಿಗೆ ಕಾರಣರಾದರು.

ಈ ಋತುವಿನಲ್ಲಿ ಬಿಎಫ್‌ಸಿಗೆ ಎದುರಾದ ಸತತ ಮೂರನೇ ಸೋಲು ಇದು. ಐದು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್‌ ಹೊಂದಿರುವ ತಂಡ, ಒಂಬತ್ತನೇ ಸ್ಥಾನಕ್ಕೆ ಕುಸಿತ ಕಂಡಿತು.

69ನೇ ನಿಮಿಷದಲ್ಲಿ ಬಿಎಫ್‌ಸಿ ಆಟಗಾರರನ್ನು ತಪ್ಪಿಸಿಕೊಂಡು ಅಂಗಳದ ಎಡಭಾಗದಲ್ಲಿ ಚೆಂಡಿನೊಂದಿಗೆ ಮುನ್ನುಗ್ಗಿದ ನೋರೆಮ್‌ ಮಹೇಶ್‌ ಸಿಂಗ್‌ ಅವರು ಬಲಭಾಗದಲ್ಲಿ ನಿಂತಿದ್ದ ಕ್ಲೀಟನ್‌ಗೆ ಪಾಸ್‌ ನೀಡಿದರು. ಬಿಎಫ್‌ಸಿ ಡಿಫೆಂಡರ್‌ಗಳು ತಮ್ಮತ್ತ ಧಾವಿಸುವ ಮುನ್ನವೇ ಕ್ಲೀಟನ್‌, ಗೋಲ್‌ಕೀಪರ್‌ ಗುರುಪ್ರೀತ್‌ ಅವರನ್ನು ತಪ್ಪಿಸಿ ಗುರಿ ಸೇರಿಸಿದರು.ಆ ಬಳಿಕ ಆತಿಥೇಯ ತಂಡ ಸಮಬಲದ ಗೋಲಿಗೆ ನಡೆಸಿದ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ. ಬಿಎಫ್‌ಸಿ ಗೆಲುವಿನ ಹಾದಿಗೆ ಮರಳಬಹುದು ಎಂಬ ವಿಶ್ವಾಸದೊಂದಿಗೆ ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ನಿರಾಸೆ ಅನುಭವಿಸಿದರು.

ಎರಡನೇ ಅವಧಿಗೆ ಹೋಲಿಸಿದರೆ ಮೊದಲ ಅವಧಿಯ ಆಟ ಹೆಚ್ಚಿನ ವೇಗದಿಂದ ಕೂಡಿತ್ತು. ಈಸ್ಟ್ ಬೆಂಗಾಲ್ ತಂಡದವರು ಆರಂಭದ 10 ನಿಮಿಷಗಳಲ್ಲಿ ಮೂರು ಲಾಂಗ್ ರೇಂಜ್ ಹೊಡೆತಗಳ ಮೂಲಕ ಪಂದ್ಯಕ್ಕೆ ರೋಚಕತೆ ತುಂಬಿದರು. ಅವುಗಳಲ್ಲಿ ಎರಡನ್ನು ಗುರುಪ್ರೀತ್ ತಡೆದರೆ, ಮತ್ತೊಂದು ಹೊರಕ್ಕೆ ಹೋಯಿತು.

ಆತಿಥೇಯ ತಂಡಕ್ಕೆ ಮೊದಲ ಅತ್ಯುತ್ತಮ ಅವಕಾಶ ಲಭಿಸಿದ್ದು 13 ನೇ ನಿಮಿಷದಲ್ಲಿ. ತಮಗೆ ದೊರೆತ ಉತ್ತಮ‌ ಪಾಸ್‌ನಲ್ಲಿ ಸುನಿಲ್ ಚೆಟ್ರಿಗೆ ಚೆಂಡಿನ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಆಗಲಿಲ್ಲ. 23 ನೇ ನಿಮಿಷದಲ್ಲಿ ದೊರೆತ ಫ್ರೀಕಿಕ್ ಅವಕಾಶದಲ್ಲಿ ಜಾವಿ ಒದ್ದ ಚೆಂಡು ಗೋಲು ಪೆಟ್ಟಿಗೆಯ ಮೇಲಿಂದ ಹೊರಕ್ಕೆ ಹೋಯಿತು. 30ನೇ ನಿಮಿಷದಲ್ಲಿ ಎರಡೂ ತಂಡಗಳಿಗೆ ಒಳ್ಳೆಯ ಅವಕಾಶ ದೊರೆತರೂ ಕ್ಲೀಟನ್ ಮತ್ತು ಬಿಎಫ್‌ಸಿಯ ರಾಯ್ ಕೃಷ್ಣ ಗುರಿ ಸೇರಿಸುವಲ್ಲಿ ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT