ಭಾನುವಾರ, ಆಗಸ್ಟ್ 14, 2022
26 °C
ಇಂಡಿಯನ್ ಸೂಪರ್ ಲೀಗ್: ಇಂದು ಜಮ್ಶೆಡ್‌ಪುರ ಎಫ್‌ಸಿ ಎದುರಾಳಿ

ಫುಟ್‌ಬಾಲ್‌ ಟೂರ್ನಿ: ಮುಂಬೈಗೆ ಜಯದ ಸರಣಿ ಮುಂದುವರಿಸುವ ಛಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಪಾಯಿಂಟ್ಸ್ ಪ‍ಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸುವ ತವಕದಲ್ಲಿದೆ. ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜಮ್ಶೆಡ್‌ಪುರ ಎಫ್‌ಸಿ ತಂಡವನ್ನು ಅದು ಎದುರಿಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲೇ ಸೋತಿದ್ದ, ಸೆರ್ಜಿಯೊ ಲೋಬೆರಾ ತರಬೇತಿಯಲ್ಲಿ ಪಳಗಿರುವ ಮುಂಬೈ ತಂಡ, ಬಳಿಕ ನಾಲ್ಕು ಪಂದ್ಯಗಳಲ್ಲಿ ವಿಜಯಮಾಲೆ ಧರಿಸಿತ್ತು. ಈ ಹಂತದಲ್ಲಿ ಆ ತಂಡವು ಆಟದ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದೆ. ಎಲ್ಲ ತಂಡಗಳಿಗಿಂತ ಹೆಚ್ಚು (8) ಗೋಲುಗಳನ್ನೂ ದಾಖಲಿಸಿದೆ.

ಕೆಲವು ತಂಡಗಳ ಹಾಗೆ ಮುಂಬೈ ಕೇವಲ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ನಾಲ್ವರು ಬೇರೆ ಬೇರೆ ಆಟಗಾರರು ಇದುವರೆಗೆ ಕಾಲ್ಚಳಕ ತೋರಿದ್ದಾರೆ. ಆದರೂ ಇನ್ನೂ ಕೆಲವು ಹಂತಗಳಲ್ಲಿ ತಂಡ ಸುಧಾರಣೆ ಕಾಣಬೇಕಿದೆ ಎಂಬುದು ಲೋಬೆರಾ ಅಭಿಪ್ರಾಯ.

‘ನಾವು ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದೇವೆ. ಇದೇನೂ ಸಣ್ಣ ಸಂಗತಿಯಲ್ಲ. ಆದರೂ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಸುಧಾರಿಸಬೇಕಿದೆ. ಈ ಹಿಂದಿನ ಪಂದ್ಯದಲ್ಲಿ ನಮ್ಮ ಆಟಗಾರರು ತೋರಿದ ಆಟದ ಕುರಿತು ತೃಪ್ತಿ ಇದೆ‘ ಎಂದಿದ್ದಾರೆ.

ಆಡಿದ ಐದು ಪಂದ್ಯಗಳ ಪೈಕಿ ಜಮ್ಶೆಡ್‌ಪುರ ತಂಡವು ಮೂರು ಡ್ರಾ, ತಲಾ ಒಂದು ಪಂದ್ಯದಲ್ಲಿ ಗೆಲುವು ಹಾಗೂ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

‘ಮುಂಬೈ ತಂಡ ಉತ್ತಮ ಲಯದಲ್ಲಿದೆ. ಇದೇ ರೀತಿ ಲಯದಲ್ಲಿದ್ದ ಎಟಿಕೆ ಮೋಹನ್ ಬಾಗನ್ ತಂಡವನ್ನು ನಾವು ಮಣಿಸಿದ್ದೆವು. ಅದೇ ಮಟ್ಟದ ಸಾಮರ್ಥ್ಯವನ್ನು ನಾವು ಮುಂಬೈ ವಿರುದ್ಧವೂ ತೋರಲಿದ್ದೇವೆ‘ ಎಂದು ಜಮ್ಶೆಡ್‌ಪುರ ತಂಡದ ಕೋಚ್ ಓವೆನ್‌ ಕೊಯ್ಲೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು