ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ಗೂ ಬರಲಿದೆ ಫ್ಯಾನ್‌ವಾಲ್‌

ನವೆಂಬರ್ 20ರಿಂದ ನಡೆಯಲಿರುವ ಟೂರ್ನಿಯಲ್ಲಿ ನೂತನ ತಂತ್ರಜ್ಞಾನಗಳ ಬಳಕೆಗೆ ನಿರ್ಧಾರ
Last Updated 17 ನವೆಂಬರ್ 2020, 13:12 IST
ಅಕ್ಷರ ಗಾತ್ರ

ಮುಂಬೈ: ಫುಟ್‌ಬಾಲ್ ಪ್ರಿಯರನ್ನು ಹೆಚ್ಚು ಪಾಲ್ಗೊಳ್ಳಿಸುವಂತೆ ಮಾಡುವ ಉದ್ದೇಶದಿಂದ ’ಫ್ಯಾನ್‌ ವಾಲ್‘ ಒಳಗೊಂಡಂತೆ ಅನೇಕ ಹೊಸ ತಂತ್ರಜ್ಞಾನಗಳನ್ನು ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅಳವಡಿಸಲು ಆಯೋಜಕರು ಸಜ್ಜಾಗಿದ್ದಾರೆ. ಐಎಸ್‌ಎಲ್‌ನ ಏಳನೇ ಆವೃತ್ತಿಯ ಪಂದ್ಯಗಳಿಗೆ ಇದೇ 20ರಂದು ಚಾಲನೆ ಸಿಗಲಿದೆ. ಕೋವಿಡ್‌–19ರಿಂದಾಗಿ ಈ ಬಾರಿ ಎಲ್ಲ ಪಂದ್ಯಗಳೂ ಗೋವಾದಲ್ಲಿ ನಡೆಯಲಿದ್ದು ಪ್ರೇಕ್ಷಕರಿಗೆ ಅಂಗಣಕ್ಕೆ ಪ್ರವೇಶ ಇರುವುದಿಲ್ಲ.

ಪ್ರೇಕ್ಷಕರಿಲ್ಲದೆ ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಅಂಗಣದಲ್ಲಿ ಎರಡು ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಪ್ರೇಕ್ಷಕರು ಕಳುಹಿಸಿದ ವಿಡಿಯೊಗಳನ್ನು ತೋರಿಸಲಾಗುತ್ತಿತ್ತು. ಐಎಸ್‌ಎಲ್‌ನಲ್ಲೂ ಇದೇ ರೀತಿಯ ಫ್ಯಾನ್ ವಾಲ್‌ ಅಳವಡಿಸಿ ನೆಚ್ಚಿನ ತಂಡ ಮತ್ತು ಆಟಗಾರರ ಜೊತೆ ಸಂಭ್ರಮಪಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪಂದ್ಯಕ್ಕೂ ಮೊದಲು ಮತ್ತು ಪಂದ್ಯದ ನಂತರ ವೀಕ್ಷಕರ ಧ್ವನಿಯನ್ನು ಕೇಳಿಸುವ ಮತ್ತು ಕ್ಯಾಮೆರಾ ಕೈಚಳಕದಿಂದ ಸಿದ್ಧಪಡಿಸಿದ ದೃಶ್ಯಾವಳಿಗಳನ್ನು ತೋರಿಸುವ ಮೂಲಕ ಅವರನ್ನು ಕ್ರೀಡಾಂಗಣಕ್ಕೆ ‘ಹತ್ತಿರ’ ತರುವ ಕಾರ್ಯವನ್ನು ಮಾಡಲಾಗುವುದು. ಆಯ್ದ ವೀಕ್ಷಕರಿಗೆ ಫುಟ್‌ಬಾಲ್ ತಜ್ಞರು ಮತ್ತು ಅತಿಥಿಗಳ ಜೊತೆ ಸಂವಾದ ನಡೆಸುವ ಅವಕಾಶವನ್ನೂ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

‘ಫುಟ್‌ಬಾಲ್ ಪ್ರೇಮಿಗಳು ಐಎಸ್‌ಎಲ್‌ನ ಅವಿಭಾಜ್ಯ ಅಂಗ. ಕೋವಿಡ್–19 ಮಹಾಮಾರಿ ಕಾಡಲು ಆರಂಭಿಸಿದ ನಂತರ ದೇಶದಲ್ಲಿ ನಡೆಯಲಿರುವ ಅತಿದೊಡ್ಡ ಟೂರ್ನಿ ಇದು. ಹೀಗಾಗಿ ಇದನ್ನು ಅವಿಸ್ಮರಣೀಯವಾಗಿಸಲು ಎಲ್ಲ ರೀತಿಯಲ್ಲೂ ನಾವು ಸಜ್ಜಾಗಿದ್ದೇವೆ’ ಎಂದು ಟೂರ್ನಿಯ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್‌ ಸ್ಪೋರ್ಟ್ಸ್ ವಕ್ತಾರ ತಿಳಿಸಿದರು.

‘ಹೆಚ್ಚುವರಿ ತಂಡದ ಸೇರ್ಪಡೆ ಆಗಿರುವುದರಿಂದ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಕ್ಲಬ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಈ ಬಾರಿಯ ಟೂರ್ನಿ ಹೆಚ್ಚು ಆಸಕ್ತಿ ಕೆರಳಿಸಿದೆ. ತಂತ್ರಜ್ಞಾನದ ಸದ್ಬಳಕೆ ಮಾಡುವ ಮೂಲಕ ವೀಕ್ಷಕರನ್ನು ಆದಷ್ಟು ಸಮೀಪಕ್ಕೆ ತರುವುದು ನಮ್ಮ ಉದ್ದೇಶ. ಫ್ಯಾನ್ ವಾಲ್ ಮತ್ತು ಹೆಚ್ಚುವರಿ ಕ್ಯಾಮೆರಾಗಳ ಬಳಕೆ ನಮ್ಮ ಉದ್ದೇಶವನ್ನು ಸಾರ್ಥಕಗೊಳಿಸಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT