ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ | ಜೆಫ್‌ಸಿ ಹಿಂದಿಕ್ಕಿ ಫೈನಲ್‌ ಪ್ರವೇಶಿಸಿದ ಬ್ಲಾಸ್ಟರ್ಸ್‌

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಲೂನಾ, ಪ್ರಣಯ್‌ ಗೋಲು
Last Updated 15 ಮಾರ್ಚ್ 2022, 19:36 IST
ಅಕ್ಷರ ಗಾತ್ರ

ವಾಸ್ಕೊ: ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಮತ್ತೆ ಪಾರಮ್ಯ ಮೆರೆದ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯ 1–1ರಲ್ಲಿ ಸಮ ಆಯಿತು.

ಎರಡೂ ಲೆಗ್‌ಗಳ ಒಟ್ಟಾರೆ ಗೋಲು ಗಳಿಕೆ ಆಧಾರದಲ್ಲಿ ಕೇರಳ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. ಮೊದಲ ಲೆಗ್‌ನಲ್ಲಿ ಈ ತಂಡ 1–0ಯಿಂದ ಜಯ ಗಳಿಸಿತ್ತು. ಒಟ್ಟಾರೆ 2–1ರ ಮುನ್ನಡೆ ಸಾಧಿಸಿತು.

ಮಂಗಳವಾರದ ಪಂದ್ಯದ 18ನೇ ನಿಮಿಷದಲ್ಲಿ ಅಡ್ರಿಯನ್ ಲೂನಾ ಗಳಿಸಿದ ಗೋಲಿನೊಂದಿಗೆ ಕೇರಳ ಬ್ಲಾಸ್ಟರ್ಸ್ ಮುನ್ನಡೆ ಸಾಧಿಸಿತು. ಎಡಭಾಗದಲ್ಲಿದ್ದ ಅಲ್ವಾರೊ ವಜ್ಕಿಜ್ ಚೆಂಡನ್ನು ನಿಯಂತ್ರಿಸಿ ಅಡ್ರಿಯನ್ ಕಡೆಗೆ ಫ್ಲಿಕ್ ಮಾಡಿದರು. ಅಡ್ರಿಯನ್ ನಿರಾಯಾಸವಾಗಿ ಡ್ರಿಬಲ್ ಮಾಡುತ್ತ ಮುನ್ನುಗ್ಗಿದರು. ಎದುರಾಳಿ ತಂಡದ ಡಿಫೆಂಡರ್ ಒಬ್ಬರನ್ನು ತಪ್ಪಿಸಿಕೊಂಡು ಸಾಗಿ ಗುರಿ ಮುಟ್ಟಿಸಿದರು.

0–1ರ ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಜೆಮ್ಶೆಡ್‌ಪುರ್ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 50ನೇ ನಿಮಿಷದಲ್ಲಿ ಪ್ರಣಯ್ ಹಲ್ದರ್ ಗೋಲು ಗಳಿಸಿ ಸಮಬಲ ತಂದುಕೊಟ್ಟರು. ಬಲ ಕಾರ್ನರ್‌ನಿಂದ ಗ್ರೆಗ್ ಸ್ಟೀವರ್ಟ್ ನೀಡಿದ ಕ್ರಾಸ್‌ನಲ್ಲಿ ಹಲ್ದರ್‌ ಯಶಸ್ಸು ಕಂಡರು.

ನಂತರ ಉಭಯ ತಂಡಗಳು ಜಿದ್ದಾಜಿದ್ದಿಯ ಪೈಪೋಟಿಗಿಳಿದವು. ಗೋಲು ಬಿಟ್ಟುಕೊಡದೆ ಫೈನಲ್‌ನತ್ತ ಹೆಜ್ಜೆ ಇರಿಸುವಲ್ಲಿ ಕೇರಳ ಬ್ಲಾಸ್ಟರ್ಸ್ ಯಶಸ್ವಿಯಾಯಿತು. ಲೀಗ್ ಹಂತದಲ್ಲಿ 13 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನ ಗಳಿಸಿದ್ದ ಜೆಮ್ಶೆಡ್‌ಪುರ್ ನಿರಾಸೆಗೆ ಒಳಗಾಯಿತು.

ಇಂದು ಎಟಿಕೆಎಂಬಿ–ಎಚ್‌ಎಫ್‌ಸಿ ಮುಖಾಮುಖಿ
ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯ ಬುಧವಾರ ನಡೆಯಲಿದೆ. ಎಟಿಕೆ ಮೋಹನ್ ಬಾಗನ್ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಲೆಗ್‌ನಲ್ಲಿ ಹೈದರಾಬಾದ್ 3–1ರಲ್ಲಿ ಜಯ ಗಳಿಸಿತ್ತು. ಹೀಗಾಗಿ ಎಟಿಕೆಎಂಬಿಯ ಹಾದಿ ಕಠಿಣವಾಗಿದೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT