ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯ ಖುಷಿಯಲ್ಲಿ ಅಂಜು

Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹಳ್ಳಿಯ ವಾತಾವರಣದಲ್ಲಿ ಬೆಳೆದುಬಂದ ಬಹುತೇಕರುಯಾವುದೋ ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡಿದ ಬಳಿಕ ತಮ್ಮ ಸಂಸ್ಕೃತಿ, ಸಂಪ್ರದಾಯ, ಮೌಲ್ಯಗಳಿಗೆ ಬೆನ್ನು ತೋರುವುದೇ ಹೆಚ್ಚು. ಅದಕ್ಕೆ ಅಪವಾದ ಎಂಬಂತಿದ್ದಾರೆ ಭಾರತ ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಆಟಗಾರ್ತಿ ಅಂಜು ತಮಾಂಗ್‌.

ಕೊರೊನಾ ಹಾವಳಿಯು ಜಗತ್ತನ್ನು ‘ನ್ಯೂ ನಾರ್ಮಲ್‌’ ಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತಿದ್ದರೆ, ಪಶ್ಚಿಮ ಬಂಗಾಳದ ಹಿಮಾಲಯ ಪರ್ವತದ ತಪ್ಪಲಿನಲ್ಲಿರುವ ಅಂಜು ಅವರ ಕುಗ್ರಾಮ ರಂಗಲಿಬಾಜ್ನಾದಲ್ಲಿ ಭತ್ತದ ಸುಗ್ಗಿಯ ಸಂತಸ ಮನೆ ಮಾಡಿತ್ತು. ಪ್ರಸಿದ್ಧ ಪ್ರವಾಸಿ ತಾಣ ಡಾರ್ಜಿಲಿಂಗ್‌ನ ದಕ್ಷಿಣಕ್ಕೆ ಇರುವ ಈ ಹಳ್ಳಿಯಲ್ಲಿ ತಮಾಂಗ್‌ ಕುಟುಂಬ ನೆಲೆಸಿದೆ. ಇತ್ತೀಚೆಗೆ ಕುಡುಗೋಲು ಹಿಡಿದು ಗದ್ದೆಗೆ ಇಳಿದ ಅಂಜು ಭತ್ತದ ಕೊಯ್ಲು ಮಾಡಿದ್ದಾರೆ. ಬೆವರು ಸುರಿಸಿದ್ದಾರೆ. ಸಂತಸದ ಅಲೆಯಲ್ಲಿ ಮಿಂದಿದ್ದಾರೆ.

‘ಗದ್ದೆಯ ಕೆಲಸಗಳನ್ನುಬಾಲ್ಯದಿಂದಲೇ ಮಾಡುತ್ತ ಬಂದಿದ್ದೇನೆ. ಆದರೆ ಇತ್ತೀಚೆಗೆ ಫುಟ್‌ಬಾಲ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಸ್ಥಳಗಳಿಗೆ ತೆರಳಬೇಕಾಗಿರುವುದರಿಂದ ಗದ್ದೆಗೆ ಇಳಿದಿರಲಿಲ್ಲ. ಆದರೆ ಈ ಬಾರಿ ಮನೆಗೆ ಮರಳಿ ಸುಗ್ಗಿಯ ಆನಂದ ಸವಿಯುವ ಅವಕಾಶ ಸಿಕ್ಕಿದೆ‘ ಎಂದು ಎಐಎಫ್‌ಎಫ್‌.ಕಾಮ್‌ಗೆ ಅಂಜು ಸಂತಸ ಹಂಚಿಕೊಂಡಿದ್ದಾರೆ. ‘ನಮ್ಮಲ್ಲೊಂದು ಸಂಪ್ರದಾಯವಿದೆ. ಕೊಯ್ಲು ಕಾರ್ಯವನ್ನು ಮಹಿಳೆಯರೇ ನಿಭಾಯಿಸುತ್ತಾರೆ. ಸು‌ಗ್ಗಿಯ ವೇಳೆ ನನ್ನ ತಾಯಿ ಹಾಗೂ ಅತ್ತಿಗೆಯ ಕೈಯಲ್ಲಿ ಕುಡುಗೋಲು ಇರುತ್ತದೆ. ಕೊಯ್ಲಿನ ಬಳಿಕ ತಂದೆ ಹಾಗೂ ಸಹೋದರ ಧಾನ್ಯಗಳನ್ನು ಬೇರ್ಪಡಿಸಿ, ಒಣಗಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಫುಟ್‌ಬಾಲ್‌ನಂತೆ ಇದು ಕೂಡ ಸಾಂಘಿಕ ಪ್ರಯತ್ನ. ಈ ಋತುವಿನಲ್ಲಿ ನಾನು ಅವರಿಗೆ ನೆರವಾಗಿದ್ದೇನೆ‘ ಎನ್ನುತ್ತಾರೆ ಅಂಜು. ‘ಜೀವನದಲ್ಲಿ ಗುರಿಗಳನ್ನು ಇಟ್ಟುಕೊಳ್ಳಲು ಕೃಷಿ ಕಾಯಕವು ನನಗೆ ಕಲಿಸಿದೆ. ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಳಿಕವೂನಾವು ಮೂಲ ಕಸುಬು ಮರೆಯಬಾರದು. ದೊಡ್ಡ ಮರವಾಗಿ ಬೆಳೆದರೂ ನಮ್ಮ ಬೇರುಗಳು ಇಲ್ಲಿಯೇ ಇವೆ; ಮರೆಯಲಾರದ ಮೌಲ್ಯಗಳಿವೆ‘ ಎಂಬುದು ಅಂಜು ಅಭಿಪ್ರಾಯ.

ಕೃಷಿ ಕಾರ್ಯದ ಜೊತೆಗೆ ಅಂಜು ಫುಟ್‌ಬಾಲ್ ಅಭ್ಯಾಸವನ್ನು ಮರೆತಿಲ್ಲ. ಬೆಳಗಿನ ತಿಂಡಿಯ ಬಳಿಕ ಸ್ಥಳೀಯ ಆಟಗಾರ್ತಿಯರೊಂದಿಗೆ ತಾಲೀಮಿನಲ್ಲಿ ತೊಡಗಿಕೊಳ್ಳುತ್ತಾರೆ.

ಫಾರ್ವರ್ಡ್‌ ವಿಭಾಗದ ಆಟಗಾರ್ತಿಯಾಗಿರುವ ಅಂಜು,ರಾಷ್ಟ್ರೀಯ ತಂಡದ ಪರ ಏಳು ಪಂದ್ಯಗಳಲ್ಲಿ ಆಡಿದ್ದಾರೆ. ಇಂಡಿಯನ್‌ ವಿಮೆನ್ಸ್ ಲೀಗ್‌ ಟೂರ್ನಿಯಲ್ಲಿ ಸದ್ಯ ಕ್ರಿಪ್‌ಶಾ ಎಫ್‌ಸಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT