ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ದಿಗ್ಗಜ ಮೆಸ್ಸಿ, ಮಾಜಿ ವೇಗದ ಬೌಲರ್‌ ಗ್ಲೆನ್ ಮೆಗ್ರಾಗೆ ಕೋವಿಡ್‌

Last Updated 3 ಜನವರಿ 2022, 9:02 IST
ಅಕ್ಷರ ಗಾತ್ರ

ಪ್ಯಾರಿಸ್‌/ಸಿಡ್ನಿ: ಫುಟ್‌ಬಾಲ್ ದಿಗ್ಗಜ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ ಗ್ಲೆನ್ ಮೆಗ್ರಾ ಅವರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ಮೆಸ್ಸಿ ಈಗ ಆಡುತ್ತಿರುವ ಪ್ಯಾರಿಸ್ ಸೇಂಟ್ ಜರ್ಮನ್ ತಂಡದ ಇತರ ಮೂವರಿಗೂ ಸೋಂಕು ಇದೆ ಎಂದು ತಂಡದ ಆಡಳಿತ ಭಾನುವಾರ ತಿಳಿಸಿದೆ. ಏಳು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಗಳಿಸಿರುವ ಮೆಸ್ಸಿ ಅವರು ಫ್ರೆಂಚ್ ಕಪ್‌ನಲ್ಲಿ ವೇನ್ಸ್ ಎದುರಿನ ಪಂದ್ಯ ಆಡಲು ಸಜ್ಜಾಗುತ್ತಿರುವಾಗ ಸೋಂಕು ಆಗಿರುವುದು ಗೊತ್ತಾಗಿದೆ.

ಮೆಸ್ಸಿ ಅವರನ್ನು ಕಳೆದ ವರ್ಷ ತಂಡ ಕೈಬಿಟ್ಟಿತ್ತು. ಪ್ಯಾರಿಸ್ ಸೇಂಟ್ ಜರ್ಮನ್ ಸೇರಿದ ನಂತರ ಅವರು ನೀರಸ ಪ್ರದರ್ಶನ ನೀಡುತ್ತಿದ್ದು ಒಟ್ಟಾರೆ 11 ಲೀಗ್ ಪಂದ್ಯಗಳಲ್ಲಿ ಒಂದು ಗೋಲು ಮಾತ್ರ ಗಳಿಸಿದ್ದಾರೆ. ಸೋಮವಾರ ನಡೆಯಲಿರುವ ಫ್ರೆಂಚ್ ಕಪ್‌ನಲ್ಲಿ ಅವರಿಗೆ ಆಡಲು ಸಾಧ್ಯವಿಲ್ಲ. ಮುಂದಿನ ಭಾನುವಾರ ನಡೆಯಲಿರುವ ಲೀಗ್‌–1 ಟೂರ್ನಿಯ ಪಂದ್ಯದಲ್ಲೂ ಅವಕಾಶ ಸಿಗುವ ಸಾಧ್ಯತೆ ಇಲ್ಲ.

ತಂಡದ ಯುವಾನ್ ಬರ್ನಾಟ್‌, ನೇಥನ್ ಬಿಟುಮಜಾಲ ಮತ್ತು ಹೆಚ್ಚುವರಿ ಗೋಲ್‌ಕೀಪರ್‌ ಸರ್ಜಿಯೊ ರಿಕೊ ಅವರಲ್ಲೂ ಸೋಂಕು ಕಾಣಿಸಿಕೊಂಡಿದೆ.

ಪಿಂಕ್‌ ಟೆಸ್ಟ್‌ಗೆ ಮೊದಲು ಕಾಡಿದ ಸೋಂಕು

ಗ್ಲೆನ್‌ ಮೆಗ್ರಾ ಅವರು ‘ಪಿಂಕ್ ಟೆಸ್ಟ್‌’ಗೆ ಸಜ್ಜಾಗುತ್ತಿರುವ ವೇಳೆ ಸೋಂಕು ಕಾಣಿಸಿಕೊಂಡಿದೆ. ಪಿಂಕ್‌ ಟೆಸ್ಟ್‌ನ ಮೂರನೇ ದಿನವನ್ನು ಮೆಗ್ರಾ ಅವರ ಪತ್ನಿ ಜೇನ್ ಸ್ಮರಣಾರ್ಥ ‘ಜೇನ್ ಡೇ’ ಎಂದು ಕರೆಯಲಾಗುತ್ತದೆ.ಜೇನ್ ಅವರು ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದರು. ಈ ಬಾರಿ ‘ಪಿಂಕ್ ಟೆಸ್ಟ್‌’ ಇದೇ ಐದರಿಂದ ಸಿಡ್ನಿಯಲ್ಲಿ ನಡೆಯಲಿದೆ. ಆ್ಯಷಸ್ ಸರಣಿಯ ನಾಲ್ಕನೇ ಪಂದ್ಯ ಇದು. ಮುಂದಿನ ಪರೀಕ್ಷೆಯ ವರದಿ ನೆಗೆಟಿವ್ ಆದರೆ ಮೆಗ್ರಾತ್‌ ಈ ಟೆಸ್ಟ್‌ ವೇಳೆ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್‌ ಕೋಚ್‌ಗೂ ಕೋವಿಡ್‌

ಮೆಲ್ಬರ್ನ್‌: ಆ್ಯಷಸ್ ಟೆಸ್ಟ್‌ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್‌ ಕ್ರಿಸ್ ಸಿಲ್ವರ್‌ವುಡ್‌ ಅವರಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ. ಅವರು ಈಗ ಕ್ಯಾರಂಟೈನ್‌ನಲ್ಲಿದ್ದು ಹೋಬರ್ಟ್‌ನಲ್ಲಿ ನಡೆಯಲಿರುವ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಸೇರುವ ಸಾಧ್ಯತೆ ಇದೆ.

ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿದೆ. ನಾಲ್ಕನೇ ಪಂದ್ಯ ಸಿಡ್ನಿಯಲ್ಲಿ ಇದೇ ಐದರಂದು ಆರಂಭವಾಗಲಿದೆ. ಸಿಲ್ವರ್‌ವುಡ್ ಅವರಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಅವರು ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಂಡದ ಆಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT