ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಮುಂಬೈಗೆ ಮಣಿದ ಈಸ್ಟ್ ಬೆಂಗಾಲ್‌

Last Updated 22 ಜನವರಿ 2021, 18:38 IST
ಅಕ್ಷರ ಗಾತ್ರ

ವಾಸ್ಕೊ: ಏಳು ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿದ ಎಸ್‌ಸಿ ಈಸ್ಟ್ ಬೆಂಗಾಲ್‌ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಆಘಾತ ಎದುರಿಸಿತು. ತಿಲಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್‌ ವಿರುದ್ಧ ಮುಂಬೈ ಸಿಟಿ ಎಫ್‌ಸಿ 1–0ಯಿಂದ ಗೆಲುವು ಸಾಧಿಸಿತು. ಪಂದ್ಯದ ಏಕೈಕ ಗೋಲು 27ನೇ ನಿಮಿಷದಲ್ಲಿ ಮೊರ್ತಡ ಫಾಲ್ ಅವರ ಹೆಡರ್ ಮೂಲಕ ಮೂಡಿಬಂತು.

ಈ ಗೆಲುವಿನೊಂದಿಗೆ ಮುಂಬೈ ಸಿಟಿ ಎಫ್‌ಸಿ ಒಂಬತ್ತು ಜಯ ಸೇರಿದಂತೆ 11 ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ಸಾಧನೆ ಮಾಡಿತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಉಭಯ ತಂಡಗಳು ಆರಂಭದಿಂದಲೇ ಪ್ರಬಲ ಪೈಪೋಟಿ ನಡೆಸಿದವು. ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಯಿತು. 27ನೇ ನಿಮಿಷದಲ್ಲಿ ಆ ತಂಡಕ್ಕೆ ಕಾರ್ನರ್ ಕಿಕ್ ಅವಕಾಶ ಲಭಿಸಿತು. ಗೊಡಾರ್ಡ್ ಒದ್ದ ಚೆಂಡು ಈಸ್ಟ್ ಬೆಂಗಾಲ್ ಆಟಗಾರನ ಹೆಡರ್ ಮೂಲಕ ಹೊರಕ್ಕೆ ಚಿಮ್ಮಿತು. ಆದರೆ ಅದು ಪೆನಾಲ್ಟಿ ವಲಯದ ಅಂಚಿನಲ್ಲಿದ್ದ ಬೌಮೋಸ್ ನಿಯಂತ್ರಣಕ್ಕೆ ಸಿಕ್ಕಿತು. ತಕ್ಷಣ ಅವರು ಅದನ್ನು ಎಡಬದಿಯಲ್ಲಿದ್ದ ಫಾಲ್ ಕಡೆಗೆ ತಳ್ಳಿದರು. ಗಾಳಿಯಲ್ಲಿ ತೇಲಿಬಂದ ಚೆಂಡಿಗೆ ಫಾಲ್ ಸೊಗಸಾಗಿ ತಲೆ ಒಡ್ಡಿದರು. ಗೋಲ್‌ಕೀಪರ್ ದೇಬಜಿತ್ ತಡೆಯಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮುಂಬೈಗೆ ಮುನ್ನಡೆ ಹೆಚ್ಚಿಸಲು ಮತ್ತೂ ಎರಡು ಅವಕಾಶಗಳು ಒದಗಿದ್ದವು. ಆದರೆ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ದ್ವಿತೀಯಾರ್ಧದಲ್ಲಿ ಈಸ್ಟ್‌ ಬೆಂಗಾಲ್‌ ಕೂಡ ಅವಕಾಶಗಳನ್ನು ಕೈಚೆಲ್ಲಿತು.

ಇಂದು ಕೇರಳ ಬ್ಲಾಸ್ಟರ್ಸ್‌–ಗೋವಾ ಹಣಾಹಣಿ

ಬ್ಯಾಂಬೊಲಿಮ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಎಫ್‌ಸಿ ಗೋವಾ ತಂಡಗಳು ಸೆಣಸಲಿವೆ. ಬೆಂಗಳೂರು ಎಫ್‌ಸಿ ವಿರುದ್ಧ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಜಯ ಗಳಿಸಿದ ಆತ್ಮವಿಶ್ವಾಸದಲ್ಲಿರುವ ಕೇರಳ ತಂಡ ಆರಂಭದಲ್ಲಿ ನೀರಸ ಆಟವಾಡಿತ್ತಾದರೂ ನಂತರ ಚೇತರಿಸಿಕೊಂಡಿತ್ತು. ಮೊದಲ ಒಂಬತ್ತು ಪಂದ್ಯಗಳಲ್ಲಿ ಆರು ಪಾಯಿಂಟ್‌ ಗಳಿಸಿದ್ದ ಬ್ಲಾಸ್ಟರ್ಸ್ ಇತ್ತೀಚಿನ ಮೂರು ಪಂದ್ಯಗಳಲ್ಲಿ ಏಳು ಪಾಯಿಂಟ್‌ ಗಳಿಸಿದೆ. ಆರಂಭದಲ್ಲಿ ಗೋಲು ಗಳಿಸಲು ಪರದಾಡುತ್ತಿದ್ದ ಕೇರಳದ ಫಾರ್ವರ್ಡ್‌ ವಿಭಾಗ ಈಗ ಚೇತರಿಸಿಕೊಂಡಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಈ ತಂಡ 87 ಬಾರಿ ಚೆಂಡನ್ನು ಗುರಿಯತ್ತ ಅಟ್ಟುವಲ್ಲಿ ಯಶಸ್ವಿಯಾಗಿದ್ದು ಈ ಪೈಕಿ ಎಂಟು ಬಾರಿ ಗೋಲು ಗಳಿಸಿದೆ.

ಹಿಂದಿನ ಐದು ಪಂದ್ಯಗಳಲ್ಲಿ ಅಜೇಯವಾಗಿರುವ ಗೋವಾ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕಿದೆ. ಲೀಗ್‌ನ ನಾಲ್ಕನೇ ಆವೃತ್ತಿಯಿಂದ ಇಲ್ಲಿಯ ವರೆಗೆ ಕೇರಳ ವಿರುದ್ಧ ಗೋವಾ 21 ಗೋಲು ಗಳಿಸಿದೆ. ತಂಡ ಈಗ ಪಾಯಿಂಟ್ ಪಟ್ಟಿಯ ಮೂರನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹಂತದಲ್ಲಿ ಸ್ಥಾನ ಭದ್ರಪಡಿಸುವ ಹಂಬಲದೊಂದಿಗೆ ಶನಿವಾರ ಕಣಕ್ಕೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT