ಭಾನುವಾರ, ಏಪ್ರಿಲ್ 11, 2021
32 °C
ದಾಖಲೆಯೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಎಫ್‌ಸಿ ಗೋವಾ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಮುಂಬೈ ಸಿಟಿ ಎಫ್‌ಸಿಗೆ ಲೀಗ್ ಚಾಂಪಿಯನ್‌ ಪಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌, ಗೋವಾ: ಪ್ರಬಲ ಎದುರಾಳಿ ಎಟಿಕೆ ಮೋಹನ್ ಬಾಗನ್ ತಂಡವನ್ನು ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ‘ಲೀಗ್ ಚಾಂಪಿಯನ್’ ಪಟ್ಟ ಮುಡಿಗೇರಿಸಿಕೊಂಡಿತು.

ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ 2–0 ಗೋಲುಗಳಿಂದ ಜಯ ಸಾಧಿಸಿತು. ಏಳನೇ ನಿಮಿಷದಲ್ಲಿ ಮೊರ್ತಜಾ ಫಾಲ್ ಮತ್ತು 39ನೇ ನಿಮಿಷದಲ್ಲಿ ಬಾರ್ತೊಲೊಮೆ ಒಗ್ಬೆಚೆ ಗೋಲು ಗಳಿಸಿದರು.  

ಫತೋರ್ಡದಲ್ಲಿ ಸಂಜೆ ನಡೆದ ಪಂದ್ಯದಲ್ಲಿ ಸತತ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಚೆಂಡನ್ನು ಗುರಿ ಮುಟ್ಟಿಸಲಾಗದ ಹೈದರಾಬಾದ್ ಎಫ್‌ಸಿ ತಂಡ ನಿರಾಸೆ ಅನುಭವಿಸಿತು. ರಕ್ಷಣಾ ವಿಭಾಗದ ಅಮೋಘ ಆಟದ ಬಲದಿಂದ  ಆತಿಥೇಯ ಎಫ್‌ಸಿ ಗೋವಾ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು.‌ ಪಂದ್ಯದಲ್ಲಿ ಗೋವಾ ಮತ್ತು ಹೈದರಾಬಾದ್ ಗೋಲುರಹಿತ ಡ್ರಾ ಸಾಧಿಸಿದವು. ಗೋವಾ, ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ದಾಖಲೆ ಬರೆಯಿತು. ತಂಡ ಸತತ 13 ಪಂದ್ಯಗಳಲ್ಲಿ ಸೋತಿಲ್ಲ.

ಪಾಯಿಂಟ್ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ದ ಗೋವಾವನ್ನು ಹಿಂದಿಕ್ಕಿ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಬೇಕಾದರೆ ಹೈದರಾಬಾದ್‌ಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯವಾಗಿತ್ತು. ಗೋವಾಗೆ ಪಂದ್ಯ ಡ್ರಾ ಮಾಡಿಕೊಂಡರೂ ಸಾಕಾಗಿತ್ತು. ನಿರ್ದಿಷ್ಟ ತಂತ್ರದೊಂದಿಗೆ ಕಣಕ್ಕೆ ಇಳಿದ ಗೋವಾ ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿತು. ನೈಜ ಆಕ್ರಮಣಕಾರಿ ಆಟದಿಂದ ದೂರ ಉಳಿದು ತಾಳ್ಮೆಯಿಂದ ಚೆಂಡನ್ನು ನಿಯಂತ್ರಿಸಿತು.

ಐವನ್ ಗೊನ್ಜಾಲೆಸ್ ನೇತೃತ್ವದ ರಕ್ಷಣಾ ವಿಭಾಗದ ಆಟಗಾರರು ಮತ್ತು ಗೋಲ್‌ಕೀಪರ್ ಧೀರಜ್ ಸಿಂಗ್ ಅವರು ತಂಡದ ಲೆಕ್ಕಾಚಾರಗಳು ತಪ್ಪದಂತೆ ನೋಡಿಕೊಂಡರು. ಕೊನೆಯ ಕ್ಷಣಗಳಲ್ಲಿ ಪ್ರಬಲ ಆಕ್ರಮಣದ ಮೂಲಕ ಹೈದರಾಬಾದ್ ಗೋಲು ಗಳಿಸಲು ಪ್ರಯತ್ನಿಸಿದರೂ ಕೋಚ್‌ ಜುವಾನ್ ಫೆರಾಂಡೊ ಅವರ ತಂಡವನ್ನು ಮಣಿಸಲು ಆಗಲಿಲ್ಲ. ಹೈದರಾಬಾದ್ ತಂಡ ಈ ಫಲಿತಾಂಶದೊಂದಿಗೆ ಸತತ 12 ಪಂದ್ಯಗಳಲ್ಲಿ ಸೋಲರಿಯದ ಸಾಧನೆ ಮಾಡಿತು. ಆದರೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲೇ ಉಳಿಯಿತು.

ಪ್ರಮುಖ ಆಟಗಾರರಾದ ಅರಿದಾನೆ ಸಂಟಾನ ಮತ್ತು ಚಿಂಗ್ಲೆನ್ಸಾನ ಸಿಂಗ್ ಅಮಾನತುಗೊಂಡಿದ್ದರಿಂದ ಹೈದರಾಬಾದ್ ತಂಡ ಕೊಂಚ ಆತಂಕಕ್ಕೆ ಒಳಗಾಗಿತ್ತು. ಆದರೂ ಎದೆಗುಂದದೆ ಆಡಿತು. 84ನೇ ನಿಮಿಷದಲ್ಲಿ ತಂಡಕ್ಕೆ ಗೋಲು ಗಳಿಸಲು ಅತ್ಯಪೂರ್ವ ಅವಕಾಶ ಒದಗಿತ್ತು. ಆದರೆ ಗೋವಾದ ರಕ್ಷಣಾ ವಿಭಾಗದ ಆಟಗಾರರು ಹೈದರಾಬಾದ್ ಆಸೆಗೆ ತಣ್ಣೀರು ಸುರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು