ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ಗಳ ಕೈಬಿಟ್ಟ ಮುಂಬೈ ಸಿಟಿ ಎಫ್‌ಸಿ

Last Updated 5 ಮಾರ್ಚ್ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯ ಕೋಚ್‌ ಜಾರ್ಜ್ ಕೋಸ್ಟಾ, ಸಹಾಯಕ ಕೋಚ್‌ಗಳಾದ ಮಾರ್ಕೊ ಲೀಟೆ ಮತ್ತು ಪೆಡ್ರೊ ಮಿಗುಯೆಲ್ ಕೋರಿ ಅವರನ್ನು ಮುಂಬೈ ಸಿಟಿ ಎಫ್‌ಸಿ ತಂಡ ಕೈಬಿಟ್ಟಿದೆ. ಈ ವಿಷಯವನ್ನು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಎರಡು ವರ್ಷ ತಂಡದೊಂದಿಗಿದ್ದ ಜಾರ್ಜ್‌ ಕೋಸ್ಟ ಮಾರ್ಗದರ್ಶನದಲ್ಲಿ ಈ ಬಾರಿ ಮುಂಬೈ ಸಿಟಿ ಎಫ್‌ಸಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಪೋರ್ಚುಗಲ್‌ ತಂಡದಲ್ಲಿ ಆಡಿದ್ದ ಕೋಸ್ಟ 2018ರ ಆಗಸ್ಟ್‌ನಲ್ಲಿ ಮುಂಬೈ ಸಿಟಿ ತಂಡವನ್ನು ಸೇರಿಕೊಂಡಿದ್ದರು. ಆದರೆ ಭಾರತದಲ್ಲಿ ಅವರ ಕೋಚಿಂಗ್‌ ಆರಂಭ ಉತ್ತಮವಾಗಿರಲಿಲ್ಲ. ಐಎಸ್‌ಎಲ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಕೇವಲ ನಾಲ್ಕು ಪಾಯಿಂಟ್‌ಗಳು ತಂಡದ ಖಾತೆಗೆ ಸೇರಿದ್ದವು. ನಾಲ್ಕನೇ ಪಂದ್ಯದಲ್ಲಿ ಗೋವಾ ವಿರುದ್ಧ 0–5 ಗೋಲುಗಳ ಸೋಲನ್ನೂ ಕಂಡಿತ್ತು.

ಆದರೆ ನಿಧಾನಕ್ಕೆ ಲಯ ಕಂಡುಕೊಂಡ ಕೋಸ್ಟ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸಿದರು. ಹೀಗಾಗಿ ಚೇತರಿಸಿಕೊಂಡ ತಂಡ ಸತತ ಒಂಬತ್ತು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಆದರೆ ಸೆಮಿಫೈನಲ್‌ನಲ್ಲಿ ಗೋವಾ ವಿರುದ್ಧ ಸೋತು ಹೊರಬಿತ್ತು.

ಈ ಬಾರಿಯ ಐಎಸ್‌ಎಲ್ ಟೂರ್ನಿಯಲ್ಲೂ ಮೊದಲ ನಾಲ್ಕು ಪಂದ್ಯಗಳಲ್ಲಿ ತಂಡ ನಾಲ್ಕು ಪಾಯಿಂಟ್ ಮಾತ್ರ ಗಳಿಸಿತ್ತು. ನಂತರದ ಆರು ಪಂದ್ಯಗಳಲ್ಲಿ 12 ಪಾಯಿಂಟ್‌ಗಳನ್ನು ಕಲೆ ಹಾಕುವಲ್ಲಿ ತಂಡ ಯಶಸ್ವಿಯಾಯಿತು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿಗೆ ಮಣಿದು ನಾಲ್ಕನೇ ಸ್ಥಾನ ಗಳಿಸುವ ಅವಕಾಶವನ್ನು ಕೈಚೆಲ್ಲಿತ್ತು.

ಕೋಸ್ಟ ಮಾರ್ಗದರ್ಶನದಲ್ಲಿ ಮುಂಬೈ ಸಿಟಿ ಎರಡು ವರ್ಷಗಳಲ್ಲಿ ಒಟ್ಟು 38 ಪಂದ್ಯಗಳನ್ನು ಆಡಿದೆ. 17ರಲ್ಲಿ ಗೆದ್ದು ಎಂಟರಲ್ಲಿ ಡ್ರಾ ಸಾಧಿಸಿದ ತಂಡ 13 ಪಂದ್ಯಗಳನ್ನು ಸೋತಿತ್ತು.

‘ಜಾರ್ಜ್ ಅವರ ಎರಡು ವರ್ಷಗಳ ಸೇವೆ ತೃಪ್ತಿ ತಂದಿದೆ. ತಂಡಕ್ಕೆ ಉತ್ತಮ ಕಾಣಿಕೆ ನೀಡಿದ ಅವರಿಗೆ ಅಭಿನಂದನೆ ಸಲ್ಲಲೇಬೇಕು’ ಎಂದು ಕ್ಲಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರನೀಲ್ ದಾಸ್ ಬ್ಲಾಹ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT