ಸೋಮವಾರ, ಜುಲೈ 26, 2021
27 °C
ಸಂಭ್ರಮದ ಭರದಲ್ಲಿ ಪರಸ್ಪರ ಆಲಿಂಗನ

ಇಟಾಲಿಯನ್‌ ಕಪ್‌ ಫುಟ್‌ಬಾಲ್‌: ಅಂತರ ಮರೆತ ಆಟಗಾರರು

ಎಪಿ Updated:

ಅಕ್ಷರ ಗಾತ್ರ : | |

Prajavani

ರೋಮ್‌: ಈಗ ಎಲ್ಲೆಡೆಯೂ ಅಂತರ ಕಾಪಾಡಿಕೊಳ್ಳುವುದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕೊರೊನಾ ವೈರಾಣುವಿನ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಇದು ಉತ್ತಮ ಮಾರ್ಗ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಇಂತಹ ಸಮಯದಲ್ಲೇ ಆಟಗಾರರು ಪರಸ್ಪರ ಆಲಂಗಿಸಿಕೊಂಡು, ಒಬ್ಬರ ಮೇಲೊಬ್ಬರು ಬಿದ್ದು ಸಂಭ್ರಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಟಾಲಿಯನ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಈ ಪ್ರಸಂಗ ನಡೆದಿದೆ.

ಒಲಿಂಪಿಕ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ರೋಚಕ ಫೈನಲ್‌ನಲ್ಲಿ ನಪೋಲಿ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಯುವೆಂಟಸ್‌ ತಂಡವನ್ನು ಪರಾಭವಗೊಳಿಸಿತು. ಬಳಿಕ ವಿಜಯ ವೇದಿಕೆಯಲ್ಲಿ ಟ್ರೋಫಿ ಹಿಡಿದು ಸಂಭ್ರಮಿಸುವ ವೇಳೆ ಆಟಗಾರರು ಅಂತರ ಮರೆತರು. ನಪೋಲಿ ತಂಡದ ಅಭಿಮಾನಿಗಳೂ ರೋಮ್‌ ನಗರದ ಪ್ರಮುಖ ಬೀದಿಗಳಲ್ಲಿ ಅಂತರ ಮರೆತು ಸಂಭ್ರಮಿಸಿದರು. 

ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಹೀಗಾಗಿ ನಿಗದಿತ ಅವಧಿಯ ಆಟ (90 ನಿಮಿಷಗಳು) ಗೋಲು ರಹಿತವಾಗಿತ್ತು. ನಪೋಲಿ ತಂಡದ ಲೊರೆಂಜೊ ಇನ್‌ಸೈನ್‌, ಮಟಿಯೊ ಪೊಲಿಟಾನೊ, ನಿಕೊಲಾ ಮಾಕ್ಸಿಮೊವಿಚ್‌ ಮತ್ತು ಅರ್ಕಾಡಿಯುಸ್‌ ಮಿಲಿಕ್‌ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಮೋಡಿ ಮಾಡಿದರು.

ಯುವೆಂಟಸ್‌ ಪರ ಆ್ಯರನ್‌ ರಾಮ್ಸೆ ಹಾಗೂ ಲಿಯೊನಾರ್ಡೊ ಬೊನುಕಿ ಅವರು ಕಾಲ್ಚಳಕ ತೋರಿದರು. ಆದರೆ ಪಾಲೊ ಡಿಬಾಲಾ ಮತ್ತು ಡೆನಿಲೊ ಅವರು ಚೆಂಡನ್ನು ಗುರಿ ಮುಟ್ಟಿಸಲು ವಿಫಲರಾದರು. ಹೀಗಾಗಿ ಯುವೆಂಟಸ್‌ ತಂಡದ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ‘ಸ್ಪಾಟ್‌ ಕಿಕ್‌’ ಅವಕಾಶ ಸಿಗಲಿಲ್ಲ. ತಂಡಕ್ಕೆ ಸೋಲು ಎದುರಾಗುತ್ತಿದ್ದಂತೆ ಅವರ ಕಣ್ಣುಗಳು ತುಂಬಿಬಂದವು. ಐದು ಬಾರಿ ಪ್ರತಿಷ್ಠಿತ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಗೆದ್ದಿರುವ 35 ವರ್ಷ ವಯಸ್ಸಿನ ಆಟಗಾರ, ನಿರಾಸೆಯಿಂದಲೇ ಡಗ್‌ಔಟ್‌ನಲ್ಲಿ ಕುಳಿತ್ತಿದ್ದರು.

ನಪೋಲಿ ತಂಡವು ಟೂರ್ನಿಯಲ್ಲಿ ಜಯಿಸಿದ ಆರನೇ ಪ್ರಶಸ್ತಿ ಇದಾಗಿದೆ. ಈ ತಂಡವು ಮುಂದಿನ ಋತುವಿನ ಯುರೋಪ ಲೀಗ್‌ ಟೂರ್ನಿಯ ಗುಂಪು ಹಂತಕ್ಕೆ ನೇರ ಅರ್ಹತೆಯನ್ನೂ ಗಳಿಸಿದೆ.

ಈ ಋತುವಿನಲ್ಲಿ ಯುವೆಂಟಸ್ ತಂಡವು‌ ಸೋತ ಎರಡನೇ ಫೈನಲ್‌ ಪಂದ್ಯ ಇದಾಗಿದೆ. ಹೋದ ಡಿಸೆಂಬರ್‌ನಲ್ಲಿ ನಡೆದಿದ್ದ ಇಟಾಲಿಯನ್‌ ಸೂಪರ್‌ ಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಯುವೆಂಟಸ್‌ ತಂಡವು ಲಝಿಯೊ ವಿರುದ್ಧ ನಿರಾಸೆ ಕಂಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು